Menstrual leave: ಬದಲಾಗುತ್ತಿದೆ ಕರ್ನಾಟಕ.. ಈ ಕಾಲೇಜಿನ ಮಹಿಳಾ ಸಿಬ್ಬಂದಿಗೆ ಇನ್ಮುಂದೆ ಮುಟ್ಟಿನ ರಜೆ

ಮೈಸೂರಿನಲ್ಲಿರುವ ದಕ್ಷ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿ, ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತನ್ನ ಮಹಿಳಾ ಸಿಬ್ಬಂದಿಗೆ ಅವರ ಮುಟ್ಟಿನ ಸಮಯದಲ್ಲಿ ಒಂದು ದಿನದ ರಜೆಯನ್ನು ತೆಗೆದುಕೊಳ್ಳಬಹುದು ಎಂದು ಘೋಷಿಸಿದ್ದಾರೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಒಂದು ಕಚೇರಿ, ಕಂಪನಿ ಅಥವಾ ಮಹಿಳೆಯರು ಕೆಲಸ (Woman Employee) ಮಾಡುವ ಯಾವುದೇ ಖಾಸಗಿ ಸಂಸ್ಥೆಗಳಲ್ಲಿ (Private Companies) ಅವರಿಗಾಗಿ ಈ ಹೆರಿಗೆ ರಜೆಯನ್ನು (Maternity Leave) ತುಂಬಾ ಹಿಂದಿನಿಂದಲೂ ನೀಡುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರವಾಗಿರುತ್ತದೆ. ಇತ್ತೀಚೆಗೆ ಸ್ತ್ರೀಯರು ಅವರ ಮುಟ್ಟಿನ ಸಂದರ್ಭದಲ್ಲಿ ಅವರಿಗೆ ರಜೆಯನ್ನು ನೀಡಬೇಕೆಂದು ದೇಶಾದ್ಯಂತ ಚರ್ಚೆ ನಡೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಪ್ರಮುಖ ತಮಿಳು ಟೆಲಿವಿಷನ್ ಚಾನೆಲ್‌ವೊಂದು ತನ್ನ ಮಹಿಳಾ ಸಿಬ್ಬಂದಿಗಳಿಗೆ ಅವರ ಮುಟ್ಟಿನ ಸಂದರ್ಭದಲ್ಲಿ ರಜೆ (Menstrual leave) ನೀಡುವುದಾಗಿ ಹೇಳಿತ್ತು. ತಮಿಳಿನ ಈ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳು ತಿಂಗಳಿಗೆ ನಾಲ್ಕು ದಿನಗಳ ರಜೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರವಾಗಿದೆ.

  ಇದನ್ನೂ ಓದಿ: Health Care: ಪಿರಿಯಡ್ಸ್ ಸಮಯದಲ್ಲಿ ಅಧಿಕ ರಕ್ತಸ್ರಾವ ಆದರೆ, ನಿರ್ಲಕ್ಷ್ಯ ಬೇಡ

  ಮೈಸೂರಿನ ಕಾಲೇಜಿನಲ್ಲಿ ಮುಟ್ಟಿನ ರಜೆ 

  ಆದರೆ ಇನ್ನೊಂದೆಡೆ, ಅರುಣಾಚಲ ಪ್ರದೇಶದಂತಹ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಅಲೋ ಲಿಬಾಂಗ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ನಂತರ ರಾಜ್ಯದಲ್ಲಿ ಮಹಿಳೆಯರಿಗೆ ಒಂದು ದಿನದ ಋತುಸ್ರಾವದ ರಜೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದೆಲ್ಲದರ ನಡುವೆ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಮೈಸೂರಿನಲ್ಲಿರುವ ಕಾಲೇಜು ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿ, ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತನ್ನ ಮಹಿಳಾ ಸಿಬ್ಬಂದಿಗೆ ಅವರ ಮುಟ್ಟಿನ ಸಮಯದಲ್ಲಿ ಒಂದು ದಿನದ ರಜೆಯನ್ನು ತೆಗೆದುಕೊಳ್ಳಬಹುದು ಎಂದು ಘೋಷಿಸಿದ್ದಾರೆ.

  ಮಾದರಿಯಾದ ದಕ್ಷ ಕಾಲೇಜ್​​ 

  ಗ್ಲೋಬಲ್ ಎಜುಕೇಷನ್ ಟ್ರಸ್ಟ್ (GET) ನ ದಕ್ಷ ಕಾಲೇಜಿನ ಚೇರ್ಮನ್ ರಾದ ಪಿ.ಜಯಚಂದ್ರ ರಾಜು ಅವರು ಇದರ ಬಗ್ಗೆ ಮಾತನಾಡಿ “ಕೆಲಸದ ವಾತಾವರಣದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ. ದಕ್ಷ ಕಾಲೇಜು 2017ರಲ್ಲಿ ಆರಂಭವಾದಾಗಿನಿಂದಲೂ ತನ್ನ ಸಿಬ್ಬಂದಿಗಳಿಗಾಗಿ ಈ ರೀತಿಯ ಅನೇಕ ಉತ್ತಮವಾದ ಪದ್ಧತಿಗಳನ್ನು ಪ್ರಯೋಗ ಮಾಡುತ್ತಲೇ ಬಂದಿದ್ದು ಮತ್ತು ಅಳವಡಿಸಿಕೊಳ್ಳುತ್ತಾ ಬಂದಿದೆ” ಎಂದು ಹೇಳಿದರು. "ನಾವು ನಮ್ಮ ಸಿಬ್ಬಂದಿಗಳಿಗೆ ಮೀಸಲಾದ ಆರೋಗ್ಯ ಕೇಂದ್ರವನ್ನು ಹೊಂದಿದ್ದೇವೆ. ಈ ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ಒಬ್ಬ ನರ್ಸ್ ಅನ್ನು ಸಹ ಅಲ್ಲಿ ನೇಮಿಸಲಾಯಿತು. ಪ್ರಥಮ ಚಿಕಿತ್ಸೆ ಮತ್ತು ತುರ್ತು ಆರೈಕೆಗಾಗಿ ಅವರು ದಿನದ 24 ಗಂಟೆಯೂ ಕಾಲೇಜಿನ ಕ್ಯಾಂಪಸ್‌ನಲ್ಲಿ ಲಭ್ಯವಿರುತ್ತಾರೆ" ಎಂದು ಅವರು ಹೇಳಿದರು.

  ಮೌನವಾಗಿ ನರಳುವುದು ಇನ್ನು ಸಾಕು.. 

  ಜಿಇಟಿಎಸ್ ಅಕಾಡೆಮಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಜಿ.ಎನ್.ಶೋಭಾ ಅವರು ಮಾತನಾಡಿ "ನನ್ನ ಸಂಸ್ಥೆಯು ನಮ್ಮ ನೋವು ಮತ್ತು ಒತ್ತಡವನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ನಾವೆಲ್ಲಾ ಇಂತಹ ಒಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ಪಡುವಂತೆ ಮಾಡಿದೆ” ಎಂದು ಹೇಳಿದರು. ಈ ಮೊದಲು, ನಮಗೆ ಇಂತಹ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಯ ಅಗತ್ಯವಿದ್ದರೂ, ನಮ್ಮ ಋತುಚಕ್ರದ ಸಮಯದಲ್ಲಿ ನಾವು ಮೌನವಾಗಿ ನರಳುತ್ತಿದ್ದೆವು" ಎಂದು ಹೇಳಿಕೊಂಡರು.

  ಇದನ್ನೂ ಓದಿ: Health Care: ಹೃದ್ರೋಗ ಸಮಸ್ಯೆ ನಿವಾರಣೆಗೆ ಮಹಿಳೆಯರು ಈ ವಿಧಾನ ಅನುಸರಿಸುವುದು ಒಳಿತು

  ಒಂದು ದಿನ ರಜೆ 

  ದಕ್ಷ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿಯವರು ಮಾತನಾಡಿ, “ತಮ್ಮ ಋತುಚಕ್ರದ ಅವಧಿಯಲ್ಲಿ ಮಹಿಳೆಯರು ಮುಟ್ಟಿನ ಸೆಳೆತ, ಮನಸ್ಥಿತಿ ಬದಲಾವಣೆ, ದಣಿವು ಮತ್ತು ಅಶಾಂತಿಯನ್ನು ಅನುಭವಿಸುತ್ತಾರೆ. ಹೀಗೆ ಒಂದು ದಿನ ರಜೆ ನೀಡುವುದರಿಂದ ನಮಗೆ ಸಾಕಷ್ಟು ಸಹಾಯ ಮಾಡಿದಂತಾಗುತ್ತದೆ. ಇದರಿಂದ ನಾವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬಹುದು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬಹುದು. ಪ್ರತಿಯೊಂದು ಸಂಸ್ಥೆಯೂ ಇದನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿ ಎಂದು ನಾನು ಬಯಸುತ್ತೇನೆ" ಎಂದು ಹೇಳಿದರು.

  ಕಾಲೇಜಿನ ಪ್ರಾಂಶುಪಾಲರಾದ ಅಭಿಷೇಕ್ ಅವರು ಇದರ ಬಗ್ಗೆ “ಕೆಲಸದ ವಾತಾವರಣದಲ್ಲಿ ಅರ್ಥಪೂರ್ಣ ಬದಲಾವಣೆ ಸೃಷ್ಟಿಸುವುದು ನಮ್ಮ ಧ್ಯೇಯವಾಗಿದ್ದು ಮತ್ತು ದಕ್ಷ ಕಾಲೇಜಿನ ಮಹಿಳಾ ಉದ್ಯೋಗಿಗಳು ಈಗ ಮುಟ್ಟಿನ ರಜೆಯನ್ನು ಪಡೆಯಬಹುದು. ಏಕೆಂದರೆ ಅವರು ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಯಾತನೆಯಿಂದ ಬಳಲುತ್ತಿರುತ್ತಾರೆ ಮತ್ತು ಆ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿರುತ್ತದೆ. ಅವರು ಮುಟ್ಟಿನ ಸಮಯದಲ್ಲಿ ಒಂದು ದಿನವನ್ನು ವೈಯಕ್ತಿಕ ರಜೆಯಾಗಿ ಪಡೆಯಬಹುದು" ಎಂದು ಹೇಳಿದರು.
  Published by:Kavya V
  First published: