ಮಂಡ್ಯ: ಮೈಸೂರು ಬೆಂಗಳೂರು 10 ಪಥದ ಹೆದ್ದಾರಿ ನಿರ್ಮಾಣ ಯೋಜನೆ ಲಕ್ಷಾಂತರ ಜನರ ಕನಸ್ಸಾಗಿತ್ತು. ಈಗಾಗಲೇ ಶೇ. 50ರಷ್ಟು ಯೋಜನೆ ಕಾಮಗಾರಿ ಮುಗಿದಿದೆ. ಆದ್ರೀಗ ಅದೇ ಹೆದ್ದಾರಿ ವಿಚಾರದಲ್ಲಿ ಮೈಸೂರು ಹಾಗೂ ಮಂಡ್ಯ ಸಂಸದರ ನಡುವೆ ಪಾಲಿಟಿಕ್ಸ್ ಆರಂಭವಾಗಿದೆ. ಹೌದು, ಮೈಸೂರು-ಬೆಂಗಳೂರು ನಡುವೆ 10 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ಯೋಜನೆ ಪೂರ್ಣಗೊಂಡರೆ ಕೇವಲ ಒಂದೂವರೆ ಗಂಟೆಯಲ್ಲೇ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಬಹುದು. ಆದ್ರೆ ಇದೇ ಯೋಜನೆ ವಿಚಾರದಲ್ಲಿ ಇಬ್ಬರು ಸಂಸದರಾದ ಸುಮಲತಾ ಅಂಬರೀಷ್ ಹಾಗೂ ಪ್ರತಾಪ್ ಸಿಂಹ ನಡುವೆ ವಾಕ್ಸಮರ ಶುರುವಾಗಿದೆ.
ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರ ನಿರಂತರ ಹೋರಾಟ: ಅಂದಹಾಗೆ ಮಂಡ್ಯ ಜಿಲ್ಲೆ ಗಡಿ ಗ್ರಾಮದಿಂದ ನಿಡಘಟ್ಟದಿಂದ ಮದ್ದೂರಿನವರೆಗೆ ಬೈಪಾಸ್ ನಿರ್ಮಾಣ ಮಾಡಲಾಗುತ್ತಿದ್ದು, ಸ್ಥಳೀಯರ ಅನುಕೂಲಕ್ಕಾಗಿ ಸರ್ವೀಸ್ ರಸ್ತೆಯನ್ನೂ ಮಾಡಲಾಗುತ್ತಿದೆ. ಆದ್ರೆ ಸರ್ವೀಸ್ ರಸ್ತೆಯನ್ನ ಶಿಂಷಾ ನದಿ ದಡದವರೆಗೆ ಮಾತ್ರ ಮಾಡಿ ಸೇತುವೆ ನಿರ್ಮಾಣ ಮಾಡ್ತಿಲ್ಲ. ಇದ್ರಿಂದಾಗಿ ಕೆ. ಕೋಡಿಹಳ್ಳಿ, ಹುಣಸೇಮರದದೊಡ್ಡಿ, ಅಗರಲಿಂಗನದೊಡ್ಡಿ, ಬೂದಗುಪ್ಪೆ, ತೈಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮದ್ದೂರಿಗೆ ಹೋಗಬೇಕಾದ್ರೆ ಕನಿಷ್ಠ ಎಂಟತ್ತು ಕಿಲೋಮೀಟರ್ ಬಳಸಿಕೊಂಡು ಬರುವಂತಾಗಿದೆ. ಹೀಗಾಗಿ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಹಲವು ಗ್ರಾಮಸ್ಥರು ನಿರಂತರ ಪ್ರತಿಭಟನೆ ಆರಂಭಿಸಿದ್ದಾರೆ.
ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಸುಮಲತಾ ಅಂಬರೀಷ್ ಭೇಟಿ ನೀಡಿ, ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ ಎಂದು ದೂರಿದ್ರು. ಸುಮಲತಾ ಹೇಳಿಕೆಗೆ ತಿರುಗೇಟು ನೀಡಿದ್ದ ಪ್ರತಾಪ್ ಸಿಂಹ ತಜ್ಞರನ್ನ ಕರೆದುಕೊಂಡು ಹೋಗಿ ಪರಿಶೀಲನೆ ಮಾಡುವಂತೆ ಟಾಂಟ್ ಕೊಟ್ಟರು.
ಇದನ್ನೂ ಓದಿ: ಪಿಚ್ ರೋಲರ್ ಕದ್ದ ಆರೋಪ: ಕೆರಳಿ ಕೆಂಡವಾದ ಟೀಮ್ ಇಂಡಿಯಾ ಕ್ರಿಕೆಟಿಗ ಪರ್ವೆಜ್ ರಸೂಲ್
ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭೇಟಿ ನಿಗದಿಯಾಗಿತ್ತು. ಈ ವಿಚಾರ ತಿಳಿಯುತ್ತಿದ ಪ್ರತಾಪ್ ಸಿಂಹ ಬೆಂಬಲಿಗರು ಸ್ವಾಗತ ಕೋರಲು ಆಗಮಿಸಿದ್ರು. ಇನ್ನೊಂದು ಕಡೆ ಸಂಸದೆ ಸುಮಲತಾ ಬೆಂಬಲಿಗರು ಕೂಡ ಸ್ಥಳಕ್ಕೆ ಬಂದು ತಮ್ಮ ನಾಯಕಿ ವಿರುದ್ಧ ಮಾತನಾಡಿದ ಬಗ್ಗೆ ಸಿಂಹ ಅವ್ರನ್ನ ಪ್ರಶ್ನೆ ಮಾಡಲು ಸಿದ್ಧತೆ ನಡೆಸಿದ್ದರು. ಈ ವೇಳೆ ಉಭಯ ಸಂಸದರ ನಡುವೆ ವಾಗ್ಸಮರ ಆರಂಭವಾಗಿತ್ತು. ಪರಿಸ್ಥಿತಿ ಕೈಮೀರುವ ಮುನ್ನವೇ ಎಚ್ಚೆತ್ತುಕೊಂಡ ಪೊಲೀಸರು ಸುಮಲತಾ ಬೆಂಬಲಿಗರನ್ನು ಸ್ಥಳದಿಂದ ದೂರ ಕಳುಹಿಸಿದ್ರು. ಆದ್ರೆ ಕೊನೆಯ ಕ್ಷಣದಲ್ಲಿ ಪ್ರತಾಪ್ ಸಿಂಹ ಭೇಟಿ ರದ್ದಾಗಿದ್ದು, ಈ ಸೇತುವೆ ನಿರ್ಮಾಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಇಂದು ಶುಕ್ರವಾರ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದೇ ವೇಳೆ, ಸ್ಥಳೀಯ ಗ್ರಾಮಸ್ಥರು ಸೇತುವೆ ನಿರ್ಮಾಣ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳದೇ ಕೆಲಸ ಮಾಡಿಕೊಡವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆ ಲಕ್ಷಾಂತರ ಜನರ ಅನುಕೂಲಕ್ಕಾಗಿ ನಿರ್ಮಾಣವಾಗುತ್ತಿರುವ ಯೋಜನೆ ಇಬ್ಬರು ಸಂಸದರ ವಾಕ್ಸಮರಕದ ವಿಚಾರವಾಗಿರೋದು ವಿಪರ್ಯಾಸವೇ ಸರಿ. ಇನ್ನಾದರೂ ವಾಗ್ಯುದ್ಧ ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡಬೇಕಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಸುನೀಲ್ ಗೌಡ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ