ಮೈಸೂರು (ಜ. 24): ಜೆಎನ್ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಬಹಿರಂಗ ಸವಾಲು ಹಾಕಿರುವ ಮೈಸೂರಿನ ವಕೀಲರು, ನೀವೇ ನಳಿನಿ ಪರ ವಾದ ಮಂಡನೆ ಮಾಡಿ ಎಂದು ಆಹ್ವಾನ ಕೊಟ್ಟಿದ್ದಾರೆ.
ಜೆಎನ್ಯು ಹಿಂಸಾಚಾರವನ್ನು ಖಂಡಿಸಿ ಕೆಲ ದಿನಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಎಂಬ ಯುವತಿ ವಿರುದ್ಧ ಕೇಸು ದಾಖಲಾಗಿತ್ತು. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರಿನ ವಕೀಲರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದರು. ಆದರೆ, ಮತ್ತೆ ತಮ್ಮ ನಿರ್ಧಾರ ಬದಲಾಯಿಸಿದ್ದ ಕೆಲವು ಮೈಸೂರಿನ ವಕೀಲರು ತಮ್ಮ ಸಂಘದ ನಿರ್ಧಾರವನ್ನು ವಿರೋಧಿಸಿ, ನಳಿನಿ ಪರ ವಕಾಲತ್ತು ವಹಿಸಲು ನಿರ್ಧರಿಸಿದ್ದರು. ಅದೆಲ್ಲ ಆಗಿ ಇಂದು ಹಿರಿಯ ವಕೀಲ ದ್ವಾರಕಾನಾಥ್ ನಳಿನಿ ಪರ ವಾದ ಮಂಡಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಇದನ್ನೂ ಓದಿ: ಫ್ರೀ ಕಾಶ್ಮೀರ ನಾಮಫಲಕ ವಿವಾದ; ನಳಿನಿ ಪರ ವಾದ ಮಂಡಿಸಲು ಮೈಸೂರು ವಕೀಲರ ನಿರ್ಧಾರ
'ಫ್ರೀ ಕಾಶ್ಮೀರ' ನಾಮಫಲಕ ಹಿಡಿದಿದ್ದ ನಳಿನಿ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಹೀಗಾಗಿ, ಮೈಸೂರಿನ ವಕೀಲ ಪಿ.ಜಿ. ರಾಘವೇಂದ್ರ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯನವರೇ ನೀವು ಕಾನೂನು ಪದವೀಧರರು. ಮಾಧ್ಯಮದಲ್ಲಿ ಹೇಳಿಕೆ ನೀಡೋ ಬದಲು ಆರೋಪಿ ನಳಿನಿ ಪರ ನೀವೇ ವಕಾಲತ್ತು ವಹಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ನಳಿನಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು, ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ. ಆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ಆಪಾದತೆ ನಳಿನಿಗೆ ಕೊಡಿಸಿ. ಸುಮ್ಮನೆ ಹೇಳಿಕೆ ನೀಡುವ ಬದಲು ಸಂವಿಧಾನಬದ್ದವಾಗಿ ಹೋರಾಟ ನಡೆಸಿ ಎಂದು ಮೈಸೂರಿನ ಹಿರಿಯ ವಕೀಲ ರಾಘವೇಂದ್ರ ಬಹಿರಂಗ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣ; ಆರೋಪಿ ನಳಿನಿ ಪರ ವಕಾಲತು ವಹಿಸದಿರಲು ವಕೀಲರ ನಿರ್ಧಾರ
ಏನಿದು ಘಟನೆ?:
ಜನವರಿ 8 ಸಂಜೆ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಭಾಗಿಯಾಗಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿ ಮೈಸೂರು ವಿವಿಯಿಂದ ವರದಿ ಕೇಳಿದ್ದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪೃಥ್ವಿ ಕಿರಣ್ ಶೆಟ್ಟಿ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ