ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣ; ಆರೋಪಿ ನಳಿನಿ ಪರ ವಕಾಲತು ವಹಿಸದಿರಲು ವಕೀಲರ ನಿರ್ಧಾರ

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಮೈಸೂರು ವಿವಿಯಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ್ದ ನಳಿನಿ ಪರ ವಕಾಲತು ವಹಿಸಿ, ಜಾಮೀನು ಕೊಡಿಸಿದ್ದ ವಕೀಲ ಕಿರಣ್ ಶೆಟ್ಟಿ ವಕಾಲತು ಹಿಂಪಡೆಯಲು ನಿರ್ಧರಿಸಿದ್ದಾರೆ.

news18-kannada
Updated:January 14, 2020, 11:54 AM IST
ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣ; ಆರೋಪಿ ನಳಿನಿ ಪರ ವಕಾಲತು ವಹಿಸದಿರಲು ವಕೀಲರ ನಿರ್ಧಾರ
ನಳಿನಿ ಬಾಲಕುಮಾರ್
  • Share this:
ಮೈಸೂರು (ಜ. 14): ಕಳೆದ ವಾರ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ನಾಮಫಲಕ​ ಹಿಡಿದಿದ್ದ ಯುವತಿ ನಳಿನಿ ವಿವಾದಕ್ಕೆ ಕಾರಣಳಾಗಿದ್ದಳು. ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಮೈಸೂರು ವಿವಿಯಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ್ದ ನಳಿನಿ ಪರ ವಕಾಲತು ವಹಿಸಿ, ಜಾಮೀನು ಕೊಡಿಸಿದ್ದ ವಕೀಲ ಕಿರಣ್ ಶೆಟ್ಟಿ ವಕಾಲತು ಹಿಂಪಡೆಯಲು ನಿರ್ಧರಿಸಿದ್ದಾರೆ.

ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ ಯುವತಿ ಪರವಾಗಿ ಮೈಸೂರಿನ ಯಾವ ವಕೀಲರೂ ವಕಾಲತು ವಹಿಸಬಾರದು. ಈ ಹಿಂದೆ ಕೂಡ ಇಂತಹ ಪ್ರಕರಣಗಳಲ್ಲಿ ಆರೋಪಿ ಪರ ಯಾರೂ ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಯುವ ವಕೀಲರು ಮೈಸೂರಿನ ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್​ಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಯುವತಿ ನಳಿನಿ ಪರ ವಕೀಲರು ವಕಾಲತು ಹಿಂಪಡೆಯಲು ನಿರ್ಧಾರ ಮಾಡಿದ್ದಾರೆ. ಪ್ರಕರಣದ ಗಂಭೀರತೆ ಅರಿತು ವಕಾಲತು ವಾಪಾಸ್ ಪಡೆಯಲು ಇಂದು ಅರ್ಜಿ ಸಲ್ಲಿಸಲಿರುವ ವಕೀಲ ಪೃಥ್ವಿ ಕಿರಣ್ ಶೆಟ್ಟಿ ಈ ಬಗ್ಗೆ ಖಚಿತಪಡಿಸಿದ್ದಾರೆ. ಈ ಪ್ರಕರಣದಲ್ಲಿ ನಳಿನಿಗೆ ಪೃಥ್ವಿ ಕಿರಣ್ ಶೆಟ್ಟಿ ಮಧ್ಯಂತರ ಜಾಮೀನು ಕೊಡಿಸಿದ್ದರು. ಇಂದು ಮೈಸೂರು ನ್ಯಾಯಾಲಯದಲ್ಲಿ ಕೇಸಿನಿಂದ ನಿರ್ಗಮಿಸುವ ಬಗ್ಗೆ ಪೃಥ್ವಿ ಕಿರಣ್ ಶೆಟ್ಟಿ ಅರ್ಜಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಮೈಸೂರು ವಿವಿ Free Kashmir ಪ್ರಕರಣ; ನಿರೀಕ್ಷಣಾ ಜಾಮೀನು ಪಡೆದ ವಿದ್ಯಾರ್ಥಿನಿ ನಳಿನಿ, ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ

ಜನವರಿ 8 ಸಂಜೆ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಭಾಗಿಯಾಗಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿ ಮೈಸೂರು ವಿವಿಯಿಂದ ವರದಿ ಕೇಳಿದ್ದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪೃಥ್ವಿ ಕಿರಣ್ ಶೆಟ್ಟಿ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ: ಮೈಸೂರಿನ Free Kashmir ಪೋಸ್ಟರ್​ ಪ್ರಕರಣ; ನಳಿನಿ ಎದುರು 80 ಪ್ರಶ್ನೆ ಮುಂದಿಟ್ಟ ಪೊಲೀಸರು 7.45 ಗಂಟೆ ವಿಚಾರಣೆ!

ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ನಳಿನಿ ಬಾಲಕುಮಾರ್​, ಪ್ರತಿಭಟನೆಯಲ್ಲಿ ನಾನು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದೆ. ಯಾವುದೇ ಸಂಯೋಜಕರ ಒತ್ತಡಕ್ಕೆ ಮಣಿದು ಅವರ ಪ್ರೇರಣೆಯಿಂದ ಹೋರಾಟಕ್ಕೆ ಬಂದಿರಲಿಲ್ಲ ಎಂದಿದ್ದರು. ವಿಡಿಯೋ ಮೂಲಕ ಜನರ ಕ್ಷಮೆ ಯಾಚಿಸಿದ್ದ ನಳಿನಿ, ನನ್ನ ಉದ್ದೇಶ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸೇರಿ ರದ್ದಾಗಿರುವ ಸೇವೆಗಳ‌ ಆರಂಭಿಸಿ ಎಂಬುದಾಗಿತ್ತು. ಅದಕ್ಕೆ ಫ್ರೀ ಕಾಶ್ಮೀರ ಎಂದು ಬರೆದುಕೊಂಡಿದ್ದೆ. ಅದರಿಂದ ಉಂಟಾದ ಗೊಂದಲಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದು ತಿಳಿಸಿದ್ದರು.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ