ಕಾಸರಗೋಡಿನ ಗ್ರಾಮಗಳ ಹೆಸರುಗಳ ಮಲೆಯಾಳೀಕರಣ: ಕನ್ನಡ ವಿರೋಧಿ ನೀತಿಗೆ ಎಚ್​ಡಿಕೆ, ವಾಟಾಳ್ ಕಿಡಿ!

ಕನ್ನಡದ ಹೆಸರುಗಳನ್ನ ಬದಲಾಯಿಸಿದರೆ ಕೇರಳ ಗಡಿ ಬಂದ್ ಮಾಡುತ್ತೇವೆ. ಕೇರಳದವರು ಕರ್ನಾಟಕಕ್ಕೆ ಬರಲು ಬಿಡಲ್ಲ ಎಂದು ವಾಟಾಳ್ ನಾಗರಾಜ್ ಅಬ್ಬರಿಸಿದರು.

ಹೆಚ್.ಡಿ. ಕುಮಾರಸ್ವಾಮಿ..

ಹೆಚ್.ಡಿ. ಕುಮಾರಸ್ವಾಮಿ..

  • Share this:
ಬೆಂಗಳೂರು: ಕಾಸರಗೋಡಿನ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳಿಗೆ ಮಲೆಯಾಳಿ ಹೆಸರಿಡಲು ಮುಂದಾಗಿರುವ ಕೇರಳ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಸಂಸದ ಪ್ರತಾಪ್​ ಸಿಂಹ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಜೆಡಿಎಸ್​ ನಾಯಕ ಎಚ್​ಡಿಕೆ ಕೂಡ ಊರುಗಳ ಹೆಸರನ್ನು ಮಲೆಯಾಳೀಕರಣಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಹೋರಾಟಗಾರ ವಾಟಾಳ್​​ ನಾಗರಾಜ್​ ಅವರು ಕೂಡ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಎಚ್​ಡಿಕೆ ಟ್ವೀಟ್​ ಮಾಡಿದ್ದು, ಕನ್ನಡದ ಹೆಸರುಗಳನ್ನು ಮಲೆಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಪ್ರಾರಂಭಿಸಿರುವುದು ನನ್ನ ಗಮನಕ್ಕೆ ಬಂದಿದೆ. ಕೇರಳ ಸರ್ಕಾರ ಗಮನಕ್ಕೆ ಕೆಲ ಅಂಶಗಳನ್ನು ತರಲು ನಾನು ಬಯಸುತ್ತೇನೆ. ಕಾಸರಗೋಡು ಕರ್ನಾಟಕದೊಂದಿಗೂ ಬೆಸೆದುಕೊಂಡ ಪ್ರದೇಶ. ಅಲ್ಲಿನ ಜನರೊಂದಿಗೆ ಕರ್ನಾಟಕ & ಕನ್ನಡಿಗರು ಸಾಂಸ್ಕೃತಿಕ ಒಡನಾಟ ಹೊಂದಿದ್ದಾರೆ. ಕಾಸರಗೋಡು ಭಾಷಾ ಸಾಮರಸ್ಯದ, ಸೌಹಾರ್ದತೆಯ ಪ್ರತೀಕವಾಗಿ ಉಳಿದುಕೊಂಡಿದೆ ಎಂದು ವಿವರಿಸಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡ & ಮಲಯಾಳಿ ಭಾಷಿಕರು ಸಮಾನ ಸಂಖ್ಯೆಯಲ್ಲಿದ್ದಾರೆ. ಪರಸ್ಪರ ಪೂರಕವಾಗಿ, ಪ್ರೇರಕವಾಗಿ ಬದುಕುತ್ತಿದ್ದಾರೆ. ಅಲ್ಲಿನವರಿಗೆ ಭಾಷೆಯ ವಿಚಾರದಲ್ಲಿ ಎಂದಿಗೂ ಕಲಹ ಬಂದಿಲ್ಲ. ಇದನ್ನು ನಾವು ಭವಿಷ್ಯದಲ್ಲೂ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ. ಭಾಷಾ ಭಾವನೆಗಳೊಂದಿಗೆ ರಾಜಕೀಯ ನಡೆಯುತ್ತಿದೆ. ಭಾಷಾ ಭಾವೈಕ್ಯತೆಯನ್ನೂ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅಲ್ಲಿನ ಕನ್ನಡಿಗರ ಪರಂಪರಾಗತ ಭಾವನೆಗಳನ್ನು ಕಾಪಾಡುವುದು ಎರಡೂ ರಾಜ್ಯಗಳ ಕರ್ತವ್ಯ ಎಂಬುದು ನನ್ನ ಭಾವನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮಗಳ ಈಗಿನ ಕನ್ನಡ ಹೆಸರನ್ನು ಮಲೆಯಾಳಿ ಭಾಷೆಗೆ ರೂಪಾಂತರ ಮಾಡಲಾಗುತ್ತಿದೆ. ಅದರೆ ಅರ್ಥವನ್ನು ಹಾಗೆಯೇ ಉಳಿಸಿಕೊಂಡಂತೆ ಕಾಣುತ್ತಿದೆ. ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೇಯೇ ಉಳಿಸಬೇಕು ಎಂದು  ಕೇರಳ ಸರ್ಕಾರಕ್ಕೆ ಈ ಮೂಲಕ ವಿನಂತಿ ಮಾಡುತ್ತೇನೆ ಎಂದು ಎಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ಊರುಗಳ ಕನ್ನಡದ ಹೆಸರನ್ನು ಮಲೆಯಾಳೀಕರಣಗೊಳಿಸುತ್ತಿರುವುದಕ್ಕೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್  ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡದ ಹೆಸರುಗಳನ್ನ ಬದಲಾಯಿಸಿದರೆ ಕೇರಳ ಗಡಿ ಬಂದ್ ಮಾಡುತ್ತೇವೆ. ಕೇರಳದವರು ಕರ್ನಾಟಕಕ್ಕೆ ಬರಲು ಬಿಡಲ್ಲ ಎಂದು ಅಬ್ಬರಿಸಿದರು. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಕೇರಳ ಸರ್ಕಾರದೊಟ್ಟಿಗೆ ಮಾತುಕತೆ ನಡೆಸಿ ಹೆಸರು ಬದಲಿಸದಂತೆ ಹೇಳಬೇಕು. ಇಲ್ಲವಾದರೆ ಕೇರಳ ಗಡಿ ಬಂದ್ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Delta Plus: ಎರಡು ಡೋಸ್ ವ್ಯಾಕ್ಸಿನ್ ಪಡೆದ ಬಳಿಕವೂ ಮಹಿಳೆಗೆ ವಕ್ಕರಿಸಿದ ಡೆಲ್ಟಾ ಪ್ಲಸ್ ಸೋಂಕು..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: