ಮಂಗಳವಾರ ರಾಜ್ಯಕ್ಕೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಲಿರುವ ಶೇಖಾವತ್ ಅವರು ನಂತರ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಲಿದ್ದಾರೆ. ಭೇಟಿ ನಂತರ 10.30ಕ್ಕೆ ಜಲ ಜೀವನ್ ಮಿಷನ್ ವಿಷಯದ ಕುರಿತು ಸಭೆ ಏರ್ಪಡಿಸಲಾಗಿದೆ ಎಂದು ಹೇಳಲಾಗಿದೆ. ವಿಧಾನಸೌಧದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕುರಿತು ಚರ್ಚೆ ನಡೆಯಲಿದೆ.
ಇದೇ ವೇಳೆ ಕೇಂದ್ರ ಸಚಿವರ ಬಳಿ ಮೇಕೆದಾಟು ಯೋಜನೆಗೆ ತಮಿಳು ಸರ್ಕಾರ ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗಮನ ಸೆಳೆಯಲಿದ್ದಾರೆ ಹಾಗೂ ಮೇಕೆದಾಟು ಯೋಜನೆಯ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಮಂಗಳವಾರ ಈ ಬಗ್ಗೆ ಕೇಂದ್ರ ಸಚಿವ ರಿಗೆ ವಿವರಿಸಲಿರುವ ಸಿಎಂ ಬಿಎಸ್ವೈ ಹಾಗೂ ಸಂಪುಟ ಸಚಿವರು. ತಮಿಳುನಾಡು ಸರ್ಕಾರದ ಕ್ಯಾತೆ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಅಲ್ಲದೇ ಈ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಸಹಕಾರ ಬೇಕೆಂದು ಮನವಿಯನ್ನು ಸಹ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಶುಭಾಶಯ ಕೋರುವ ಪತ್ರ ಬರೆದು ಅದರಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಲ್ಲಿ ಬಿದ್ದ ಹೊಡೆತಕ್ಕೆ ಪ್ರತಿಯಾಗಿ ಮತ್ತೊಂದು ಹೊಡೆತ ನೀಡಲು ಈ ಮೂಲಕ ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ತಣ್ಣಗೆ ಇದ್ದ ಈ ವಿವಾದವನ್ನು ಪತ್ರ ಬರೆದು ಮತ್ತೆ ಭುಗಿಲೇಳುವಂತೆ ಮಾಡಿದ್ದೇ ಸಿಎಂ ಬಿಎಸ್ವೈ ಎನ್ನುವುದು ಈಗ ಅವರಿಗೆ ಕಪ್ಪು ಚುಕ್ಕೆಯಾಗಿ ಕಾಡುತ್ತಿದೆ. ಈ ಡ್ಯಾಮೇಜ್ ಕಂಟ್ರೋಲನ್ನು ಹೇಗೆ ಸಿಎಂ ನಿಭಾಯಿಸುತ್ತಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.
ಮೇಕೆದಾಟು ವಿಚಾರವಾಗಿ ಸೋಮವಾರ ಸರ್ವ ಪಕ್ಷ ಸಭೆ ಕರೆದಿದ್ದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕರ್ನಾಟಕದ ವಿರುದ್ದ ಮೂರು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಪಕ್ಷಾತೀತವಾಗಿ ಈ ಯೋಜನೆಯನ್ನು ತಮಿಳುನಾಡಿನಲ್ಲಿ ವಿರೋಧಿಸುತ್ತಿದ್ದು ಇದು ರಾಜ್ಯಕ್ಕೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದೇ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಭೇಟಿ ವೇಳೆ "ಯೋಜನೆ ಬಗೆಗಿನ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ಕರ್ನಾಟಕ ತರಾತುರಿಯಲ್ಲಿ ಯೋಜನೆ ಆರಂಭಿಸುತ್ತಿದೆ. ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ" ಎಂದು ದೂರು ನೀಡಿದ್ದರು.
ಇದನ್ನೂ ಓದಿ: Mekedatu Project| ಮೇಕೆದಾಟು ವಿವಾದ; ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ವಿರುದ್ಧ 3 ನಿರ್ಣಯಗಳನ್ನು ಕೈಗೊಂಡ ಸ್ಟಾಲಿನ್ ಸರ್ಕಾರ
ಅಸಲಿಗೆ ಅಂತರ ರಾಜ್ಯ ಜಲ ವಿವಾದಗಳು ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳು ಹೇಳಿದಾಗಲೂ ಮಾತುಕತೆ ಮೂಲಕ ಬಗೆಹರಿದ ಉದಾಹರಣೆಗಳಿಲ್ಲ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ದಶಕಗಳಿಂದಲೂ ನಡೆದುಕೊಂಡು ಬರುತ್ತಿರುವ ಕಾವೇರಿ ಜಲ ವಿವಾದ ಅತ್ಯಂತ ಸೂಕ್ಷ್ಮವಾದುದಾಗಿದೆ. ರಾಜಕೀಯ ಕಾರಣಗಳಿಗೆ ಮಾತ್ರವಲ್ಲದೆ ಜನ ಸಮಾನ್ಯರು ಕೂಡ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಸಂಗತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ