ತಾಕತ್ತಿದ್ದರೆ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿಸು; ಪ್ರತಾಪ್​ ಸಿಂಹಗೆ ಜಿಟಿಡಿ ಸವಾಲ್​​

ಮೈಸೂರಿನಲ್ಲಿ ಡಿಸಿ, ಆಯುಕ್ತರು, ಸಿಇಓ ಹಾಗೂ ಪೊಲೀಸ್ ಕಮಿಷನರ್ ಒಟ್ಟಾಗಿ ಕೋವಿಡ್​ ಸೋಂಕಿನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರ ಮಧ್ಯೆದಲ್ಲಿ ಒಡಕು ಮೂಡಿಸುವ ಕೆಲಸ ಮಾಡಬೇಡಿ.

ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ.

ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ.

 • Share this:
  ಮೈಸೂರು (ಮೇ. 28): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್​ ಸಿಂಹ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿರುವ ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ. ನಿನಗೆ ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು ಎಂದು ಸವಾಲ್​ ಹಾಕಿದ್ದಾರೆ. ಸುಖಾ ಸುಮ್ಮನೆ ಹಾದಿ ಬೀದಿಯಲ್ಲಿ ನಿಂತು ಮಾತನಾಡಬೇಡಿ. ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿ ಹುಲಿ ಆಗಲ್ಲ. ನೀನು ಪವರ್‌ಫುಲ್ ಸಂಸದ. ಪಿಎಂ, ಸಿಎಂ ಕೂಡ ನೀನು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ಗೊಂದಲ ಯಾಕೆ ಮೂಡಿಸುತ್ತೀರಾ ಎಂದು ತಿವಿದಿದ್ದಾರೆ.  ಜಿಲ್ಲಾಧಿಕಾರಿ ವಿರುದ್ಧ ಹೇಳಿಕೆ ನೀಡುವ ನಿಮ್ಮ ವರ್ತನೆಗೆ ಮೈಸೂರಿನ ಬಗ್ಗೆ ರಾಜ್ಯದ ಜನರು ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ. ಅಲ್ಲದೇ, ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

  ಒಂದು ತಿಂಗಳ ಹಿಂದೆಯೇ ಕೋವಿಡ್ ಮಿತ್ರ ಎಂಬ ಕಾರ್ಯವನ್ನು ಜಿಲ್ಲಾಧಿಕಾರಿ ರೋಹಿಣಿ ಮಾಡಿದ್ದಾರೆ. ಇಂತಹ ರಚನಾತ್ಮಕ ಕಾರ್ಯಕ್ರಮದಿಂದಲೇ ನಾವುಗಳು ಸುಲಭವಾಗಿ ಕೆಲಸ ಮಾಡಲು ಸಾಧ್ಯ ಆಯಿತು. ನಾವುಗಳು ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಕೊಡಲು ಸಾಧ್ಯ ಆಯಿತು. ನಗರದಲ್ಲಿ ನೀವು ಒಂದು ವಾರದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೀರಾ. ಮೈಸೂರಿನಲ್ಲಿ ಡಿಸಿ, ಆಯುಕ್ತರು, ಸಿಇಓ ಹಾಗೂ ಪೊಲೀಸ್ ಕಮಿಷನರ್ ಒಟ್ಟಾಗಿ ಕೋವಿಡ್​ ಸೋಂಕಿನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರ ಮಧ್ಯೆದಲ್ಲಿ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಪ್ರತಾಪ್ ಸಿಂಹ ನೀವಿನ್ನು ಚಿಕ್ಕವರು. ಬೆಳೆಯುವ ವಯಸ್ಸು ಈ ಹೊತ್ತಿನಲ್ಲಿ ಇದೆಲ್ಲಾ ಸರಿಯಲ್ಲ ಎಂದು ಇದೇ ವೇಳೆ ಕಿವಿಮಾತು ಹೇಳಿದರು

  ಸಂಸದರ ಕಾರ್ಯವೈಖರಿ ಕುರಿತು ಮಾತನಾಡಿದ ಮಾಜಿ ಸಚಿವರು, ಜಿಲ್ಲೆಯ ಶಾಸಕರು ನಿಮಗಿಂತ ಹೆಚ್ಚು ಕೆಲಸ‌ ಮಾಡುತ್ತಿದ್ದಾರೆ, ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೇಯಾ ಹೇಳು.ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ ಎಂದು ತಿರುಗೇಟು ನೀಡಿದ್ದಾರೆ.

  ಇದನ್ನು ಓದಿ: ಮತ್ತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿದ ಪ್ರತಾಪ್​ ಸಿಂಹ

  ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಎಂ ಬದಲಾವಣೆಗೆ ಕೆಲವರು ಸಂಚು ರೂಪಿಸುತ್ತಿರುವ ಕುರಿತು ಮಾತನಾಡಿದ ಅವರು, ಜನ ಸಾಯುತ್ತಿದ್ದಾರೆ. ಈಗ ಸರ್ಕಾರ ತೆಗೆಯಲು ಹೋಗಬೇಕಿತ್ತಾ? ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಮೊದಲು ಜನರ ಕಷ್ಟ ನೋಡಬೇಕು ಅದು ಬಿಟ್ಟು ದೆಹಲಿಗೆ ಹೋಗುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

  ಕೊರೋನಾ ನಿರ್ವಹಣೆಯ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೆಮ್ಮದಿಯಾಗಿ ಕೆಲಸ ಮಾಡಲು ಬಿಡಿ. ಇಂತಹ ಹೊತ್ತಿನಲ್ಲಿ ಸರ್ಕಾರ ಬೀಳಸಲು ಪ್ರಯತ್ನ ಮಾಡಿರೋದು ಸರಿಯಲ್ಲ ಎಂದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:Seema R
  First published: