ಮೈಸೂರು: ಶಾಸಕ ಜಿ.ಟಿ.ದೇವಗೌಡ (GT Devegowda) ಅವರು ಜೆಡಿಎಸ್ (JDS) ತೊರೆದು ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಸುದ್ದಿ ದಿನೇ ದಿನೇ ದಟ್ಟವಾಗುತ್ತಲೇ ಇದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಜಿಟಿಡಿ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (H. D. Kumaraswamy) ಅವರು ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಗೈರಾಗಿದ್ದ ಜಿಟಿಡಿ ವಿಪಕ್ಷ ನಾಯಕ ಸಿದ್ದರಾಮಯ್ಯರ (Siddaramaiah) ಜೊತೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಜೆಡಿಎಸ್ ನಾಯಕರು ಜಿಟಿಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಸಾರಾ ಮಹೇಶ್(Sara Mahesh) ಅವರ ಹೇಳಿಕೆಯಿಂದ ಜೆಡಿಎಸ್ ನಿಲುವು ದೃಢವಾಗಿದೆ. ವಿಧಾನ ಪರಿಷತ್ ಚುನಾವಣೆಯನ್ನು ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.
ಜಿಟಿಡಿ ಅವರನ್ನು ಉಳಿಸಿಕೊಳ್ಳಲು ರಣತಂತ್ರ
ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಸಂಬಂಧ ಸದ್ಯದಲ್ಲೇ ಸಭೆ ಕರೆಯಲಾಗುವುದು. ಶಾಸಕ ಜಿ ಟಿ ದೇವೇಗೌಡರ ಕುಟುಂಬದವರೇ ಅಚ್ಚರಿಯ ಅಭ್ಯರ್ಥಿ ಆಗಬಹುದು. ನಮ್ಮ ಪಕ್ಷದ ಬಲವರ್ಧನೆಗೆ ಅವರ ಕುಟುಂಬ ಸದಸ್ಯರು ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿ ಅವರ ಕುಟುಂಬ ಸದಸ್ಯರೊಬ್ಬರು ಅಭ್ಯರ್ಥಿ ಆದರೂ ಆಗಬಹುದು ಎಂದು ಸಾರಾ ಮಹೇಶ್ ಅಚ್ಚರಿಯ ಹೇಳಿಕೆ. ಕುಟುಂಬಸ್ಥರಿಗೆ ಟಿಕೆಟ್ ನೀಡುವ ಮೂಲಕ ಜಿಟಿಡಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಕಸರತ್ತು ಶುರುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಟಿಡಿ ಪತ್ನಿ ಲಲಿತಾ ದೇವೇಗೌಡಗೆ ಜೆಡಿಎಸ್ ಟಿಕೆಟ್?
ಮೈಸೂರು ಎಂಎಲ್ಸಿ ಚುನಾವಣೆ ರೋಚಕ ತಿರುವು ಪಡೆದುಕೊಂಡಿದೆ. ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮತ್ತೊಂದು ರಣತಂತ್ರ ರೂಪಿಸಲಾಗಿದೆ. ಜಿಟಿಡಿ ಪತ್ನಿ ಲಲಿತಾ ದೇವೇಗೌಡ ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಜಿಟಿಡಿಗೆ ಸಾರಾ ಮಹೇಶ್ ಆಯ್ಕೆ ತೆರೆದಿಟ್ಟಿದ್ದಾರೆ. ಮೈಸೂರಿನಲ್ಲಿ ಪಕ್ಷದ ನಿಲುವನ್ನು ಸಾ.ರಾ.ಮಹೇಶ್ ಬಹಿರಂಗಪಡಿಸಿದ್ದಾರೆ. ಎಂಎಲ್ಸಿ ಚುನಾವಣೆಯನ್ನು ಜಿಟಿಡಿ ನೇತೃತ್ವದಲ್ಲೇ ನಡೆಸುತ್ತೇವೆ. ಅವರ ಕುಟುಂಬದಿಂದಲೇ ಅಭ್ಯರ್ಥಿಯಾಗಬೇಕು ಅನ್ನೋದು ನಮ್ಮ ಬಯಕೆ ಎಂದರು.
ವೇದಿಕೆ ಹಂಚಿಕೊಂಡಿದ್ದಕ್ಕೆ ವಿಶೇಷ ಅರ್ಥ ಬೇಡ
ಜಿ.ಟಿ.ದೇವೇಗೌಡ ನಮ್ಮ ಪಕ್ಷದ ನಾಯಕರು, ಇಡೀ ಕುಟುಂಬ ಸಾರ್ವಜನಿಕರ ಸೇವೆ ಮಾಡುತ್ತಿದೆ. ಅಂತಹ ಕುಟುಂಬದಿಂದ ಅಭ್ಯರ್ಥಿಯಾದರೆ ತಪ್ಪೇನಿಲ್ಲ. ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ದೇವೇಗೌಡ-ಕುಮಾರಸ್ವಾಮಿ ಹೆಸರೇಳಿದ್ದೇ ಓಡಿ ಬಂದು Vote ಹಾಕೋರು ಯಾರು ಇಲ್ಲ; HDD ಎದುರೇ ಅಸಮಾಧಾನ!
ಸಂದೇಶ್ ನಾಗರಾಜ್ ಯಾವತ್ತೂ ನಮ್ಮ ಜೊತೆ ನಿಲ್ಲನಿಲ್ಲ
ಇನ್ನು ಎಂಎಲ್ ಸಿ ಸಂದೇಶ್ ನಾಗರಾಜ್ ಜೆಡಿಎಸ್ ತೊರೆಯಲು ಮುಂದಾಗಿರುವ ವಿಚಾರವಾಗಿಯೂ ಪ್ರತಿಕ್ರಿಯಿಸಿದರು. ಸಂದೇಶ್ ನಾಗರಾಜ್ ಅವರು ಯಾವತ್ತು ಚುನಾವಣೆ ಆಯಿತೋ ಅಂದಿನಿಂದಲೂ ನಮ್ಮ ಜೊತೆ ಎಲ್ಲಿದ್ದಾರೆ. ಅವರು ನಮ್ಮ ಜೊತೆ ಗುರುತಿಸಿಕೊಂಡಿಲ್ಲ, ಈಗ ಆ ವಿಚಾರ ಅಪ್ರಸ್ತುತ. ಸಂದೇಶ್ ನಾಗರಾಜ್ ರಿಂದ ತೆರವಾಗುವ ಸ್ಥಾನಕ್ಕೆ ಎದುರಾಗಿರುವ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮ ಪಕ್ಷದಲ್ಲಿ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು. ನಮ್ಮ ಪಕ್ಷದ ಜನಪ್ರತಿನಿಧಿಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಗೆಲ್ಲುತ್ತೇವೆ ಎಂದರು.
ನಂಗೆ ಬಿಟ್ಕಾಯಿನ್ ಬಗ್ಗೆನೇ ಗೊತ್ತಿಲ್ಲ
ಬಿಟ್ ಕಾಯಿನ್ ಹಗರಣದ ಬಗೆಗಿನ ಪ್ರಶ್ನೆ ಉತ್ತರಿಸಿದ ಶಾಸಕರು, ನನಗೆ ಬಿಟ್ ಕಾಯಿನ್ ಅಂದರೇನೆ ಅಂತ ಗೊತ್ತಾಗಿದ್ದು 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿಲ್ಲ, ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು. ಅದರೆ ಬಿಟ್ ಮನಿ ಗೊತ್ತಿರಲಿಲ್ಲ, ಈಗ ಗೊತ್ತಾಗುತ್ತಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ