ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಹಿನ್ನೀರು ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಕೊನೆಗು ಬ್ರೇಕ್ ಬಿದ್ದಿದೆ. ಜಲಾಶಯದ ಕಣ್ಣಳತೆ ದೂರದಲ್ಲೇ ಅನಧಿಕೃತ ವಾಗಿ ಭಾರೀ ಪ್ರಮಾಣದ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನ್ಯೂಸ್ 18 ಕನ್ನಡ ಬೆಳಕಿಗೆ ತಂದಿತ್ತು.
ನ್ಯೂಸ್ 18 ವರದಿ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಚಿಕ್ಕಹೊಳೆ ಜಲಾಶಯದ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಅಂಕನಶೆಟ್ಟಿ ಪುರ ಸರ್ವೆ ನಂಬರ್ 172, 173 ರ ಹಿಡುವಳಿ ಜಮೀನಿನನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದ್ದು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ
ಚಿಕ್ಕಹೊಳೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಬಗ್ಗೆ ನ್ಯೂಸ್18 ಕನ್ನಡ ಆಗಸ್ಟ್ 19 ರಂದು ವಿಸ್ತೃತವಾದ ವರದಿ ವರದಿ ಮಾಡಿ ಜಲಾಶಯಕ್ಕೆ ಅಕ್ರಮ ಗಣಿಗಾರಿಕೆ ಕಂಟಕಪ್ರಾಯವಾಗುವ ಬಗ್ಗೆ ಬೆಳಕು ಚಲ್ಲಿತ್ತು. ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಧನ ನಷ್ಟ ವಾಗುತ್ತಿರುವ ಬಗ್ಗೆಯು ಗಮನ ಸೆಳೆದಿತ್ತು.
ಈ ಹಿನ್ನಲೆಯಲ್ಲಿ ಚಾಮರಾಜನಗರ ತಾಲ್ಲೂಕು ತಹಸೀಲ್ದಾರ್, ಭೂ ವಿಜ್ಞಾನಿಗಳು ಹಾಗು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು ಪ್ರಾಥಮಿಕ ತನಿಖೆಯದ ಅಕ್ರಮ ಗಣಿಗಾರಿಕೆ ಸಾಬೀತಾಗಿದ್ದು ಈ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ತುರ್ತಾಗಿ ತಾಂತ್ರಿಕ ದಾಖಲೆಗಳನ್ಮು ಸಂಗ್ರಹಿಸಿ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
ಹಲವು ವರ್ಷಗಳಿಂದ ಜಲಾಶಯದ ಹಿನ್ನೀರಿನ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಜಲಾಶಯಕ್ಕೆ ಮಾರಕವಾಗಿತ್ತು , ಹತ್ತಾರು ಎಕರೆ ಪ್ರದೇಶದಲ್ಲಿ ನಡೆಯುತ್ತಿದ್ದ. ಗಣಿಗಾರಿಕೆ ಹೀಗೆ ಮುಂದುವರಿದಿದ್ದಲ್ಲಿ ಜಲಾಶಯಕ್ಕೆ ಕಂಟಕವಾಗುತ್ತಿತ್ತು. "ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ಹು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಷಯ ಎಲ್ಲರಿಗು ತಿಳಿದಿದ್ದರೂ ಯಾವುದೇ ಕ್ರಮ ವಹಿಸಿರಲಿಲ್ಲ, ಇದೀಗ ಇಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ" ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಇಂದು-ನಾಳೆ ಕರ್ನಾಟಕದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಚಾಮರಾಜನಗರ ತಾಲೋಕಿನಲ್ಲಿರುವ ಸುವರ್ಣಾವತಿ ಹಾಗು ಚಿಕ್ಕಹೊಳೆ ಜಲಾಶಯಗಳು ಅಕ್ಕಪಕ್ಕದಲ್ಲೇ ಇದ್ದು ತಮಿಳುನಾಡಿನ ತಾಳವಾಡಿ ವ್ಯಾಪ್ತಿಯಲ್ಲಿ ಮಳೆಯಾದರೆ ಚಿಕ್ಕಹೊಳೆ ಜಲಾಶಯ ತುಂಬುತ್ತದೆ. 74 ಅಡಿ ಸಾಮರ್ಥ್ಯದ ಈ ಜಲಾಶಯ ಸಾಮಾನ್ಯವಾಗಿ ಪ್ರತಿವರ್ಷ ಅಕ್ಟೋಬರ್ ವೇಳೆಗೆ ಮೈದುಂಬುತ್ತದೆ. ಇದರಿಂದ ನಾಲೆಗಳ ಮೂಲಕ ನಾಲ್ಕು ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಇದಲ್ಲದೆ ಕರಿನಂಜನಪುರ ಬಳಿಯ ದೊಡ್ಡ ಕೆರೆ, ಚಿಕ್ಕಕೆರೆ ಸಿಂಡಕೆರೆ, ಹೆಬ್ಬಸೂರು, ನಾಗವಳ್ಳಿ, ಚಂದಕವಾಡಿ ಸೇರಿದಂತೆ 15 ಕ್ಕು ಹೆಚ್ಚು ಕೆರೆಕಟ್ಟೆಗಳಿಗು ಈ ಜಲಾಶಯದಿಂದಲೇ ನೀರು ಹರಿಯುತ್ತದೆ. ಹಾಗಾಗಿ ಈ ಭಾಗದಲ್ಲಿ ಅಂತರ್ಜಲ ವೃದ್ದಿಗು ಇದು ಸಹಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ