Good News: ಹಿಜಾಬ್, ಬುರ್ಖಾ ಗಲಾಟೆಯೇ ಬೇಡ; ಚಾಮುಂಡಿ ಬೆಟ್ಟದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ

ದೇಶದಲ್ಲಿ ಹಿಜಾಬ್, ಬುರ್ಖಾ ಗಲಾಟೆ ಇದ್ದರೇನು? ನಮಗೆ ಅದೆಲ್ಲ ಸಂಬಂಧಪಡದು. ವಾರಾಂತ್ಯದಲ್ಲಿ ಚಾಮುಂಡಿ ಬೆಟ್ಟ ಕೊಡುವ ಅನುಭವ ಮುಂದಿನ ಇಡೀ ವಾರ ನಮ್ಮನ್ನು ಖುಷಿಯಲ್ಲಿಡುತ್ತದೆ.

ಚಾಮುಂಡಿ ಬೆಟ್ಟದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ

ಚಾಮುಂಡಿ ಬೆಟ್ಟದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ

  • Share this:
ವಾರದ ಕೊನೆ ಬಂದರೆ ಸಾಕು, ಪ್ರವಾಸಿ ತಾಣಗಳು ತುಂಬಿ ತುಳುಕುತ್ತವೆ. ಪ್ರವಾಸಿ ಸ್ಥಳಗಳು ಸುಂದರವಾಗಿದ್ದರೆ ಜಾತಿ ಧರ್ಮ ಬೇಧವಿಲ್ಲದೇ ಎಲ್ಲ ಸಮುದಾಯದ ಜನರು ಭೇಟಿ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಸದ್ಯ ಹಿಜಾಬ್ ಗಲಾಟೆ (Hijab Row) ಸ್ವಲ್ಪ ಕಂದಕ ಸೃಷ್ಟಿಸಿದೆ ಎಂದು ಅನಿಸಿದರೂ ಜನಸಾಮಾನ್ಯರು ಪರಸ್ಪರ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಈ ಮಾತಿಗೆ ಮೈಸೂರಿನ ಸಖತ್ ಉದಾಹರಣೆಯೊಂದು ವರದಿಯಾಗಿದೆ. ಧಾರ್ಮಿಕ ಸ್ಥಳಗಳಿಗೆ ಉಡುಪಿ ಸರ್ಕಾರಿ ಕಾಲೇಜೊಂದರಲ್ಲಿ (Udupi Government College) ಶುರುವಾದ ಹಿಜಾಬ್ ಗಲಾಟೆ ರಾಜ್ಯ-ದೇಶವನ್ನೂ ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸದ್ಯ ತೀರ್ಪು ಏನು ಬರುತ್ತದೆಯೋ ಎಂದು ಈ ವಿವಾದದ ವಿಚಾರಣೆ ನಡೆಯುತ್ತಿರುವ ಕರ್ನಾಟಕ ಹೈಕೋರ್ಟ್ನತ್ತ (Karnataka High Court) ಎಲ್ಲರ ಚಿತ್ತ ನೆಟ್ಟಿದೇ. ಇದೇ ವೇಳೆ ಅರಮನೆ ನಗರಿ ಮೈಸೂರು (Mysuru) ಧಾರ್ಮಿಕ ಸಾಮರಸ್ಯವನ್ನು (Religious Harmony) ಸದ್ದಿಲ್ಲದೇ ಸಾಧಿಸುತ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟವೇ (Chamundi Hills) ಈ ಸಾಮರಸ್ಯಕ್ಕೆ ಕಾರಣವಾಗಿರುವ ಪವಿತ್ರ ಸ್ಥಳ.

ಚಾಮುಂಡಿ ಬೆಟ್ಟಕ್ಕೆ ರವಿವಾರದ ರಜಾದಿನ ಬಂದರೆ ಸಾಕು, ಜನಜಂಗುಳಿಯೇ ನೆರೆಯುತ್ತದೆ. ಸಮುದ್ರಮಟ್ಟದಿಂದ 1063 ಮೀಟರ್ ಎತ್ತರದ ಮೈಸೂರಿನ ಚಾಮುಂಡಿ ಬೆಟ್ಟ ಜಗತ್ತಿನಲ್ಲೇ ಸುಪ್ರಸಿದ್ಧ. ಮೈಸೂರು ಮತ್ತು ಆಸುಪಾಸಿನ ಜನರೆಲ್ಲ ಚಾಮುಂಡೇಶ್ವರಿ ದರ್ಶನ ಪಡೆಯಲು ಆಗಮಿಸುತ್ತಾರೆ. ಅದರಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರೂ ಸಹ ಗಮನಾರ್ಹ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಮತ್ತೂ ಹೆಚ್ಚಿನದಾಗಿ ಬುರ್ಖಾ, ಹಿಜಾಬ್ ಧರಿಸಿಯೇ ಚಾಮುಂಡಿ ತಪ್ಪಲಿಗೆ ಬರುತ್ತಾರೆ.

ಬೆಟ್ಟಕ್ಕೆ ಆಗಮಿಸುವ ಹಿಂದೂ ಭಕ್ತಾದಿಗಳೂ ಹಿಜಾಬ್, ಬುರ್ಖಾ ಯಾವುದೇ ಸಮಸ್ಯೆ ತಂದೊಡ್ಡಿಲ್ಲ ಎನ್ನುತ್ತಾರೆ. ಎಲ್ಲರಂತೆ ಬುರ್ಖಾ ಧರಿಸಿದ ಮಹಿಳೆಯರೂ ಸಹ ಬೆಟ್ಟದ ಮೆಟ್ಟಿಲುಗಳಿಗೆ ಕುಂಕುಮ ಬಳಿಯುತ್ತಾರೆ. ನಂದಿ ವಿಗ್ರಹ ದರ್ಶನ ಪಡೆದು ಪುಳಕಿತರಾಗುತ್ತೇವೆ ಎಂದು ಮುಸ್ಲಿಂ ಸಮುದಾಯದ ಯುವತಿಯೋರ್ವರು ತಿಳಿಸಿದರು.

ಯಾವ ಗಲಾಟೆಯೂ ನಮಗೆ ಬೇಡ

ದೇಶದಲ್ಲಿ ಹಿಜಾಬ್, ಬುರ್ಖಾ ಗಲಾಟೆ ಇದ್ದರೇನು? ನಮಗೆ ಅದೆಲ್ಲ ಸಂಬಂಧ ಪಡದು. ವಾರಾಂತ್ಯದಲ್ಲಿ ಚಾಮುಂಡಿ ಬೆಟ್ಟ ಕೊಡುವ ಅನುಭವ ಮುಂದಿನ ಇಡೀ ವಾರ ನಮ್ಮನ್ನು ಖುಷಿಯಲ್ಲಿಡುತ್ತದೆ. ಪ್ರಕೃತಿಯಲ್ಲಿ ಓಡಾಡಿ ಒಂದಿಡೀ ರವಿವಾರ ಕಳೆಯುವುದು ನಮಗೆ ಹಿತ ನೀಡುತ್ತದೆ ಎಂದು ಬುರ್ಖಾ ಧರಿಸಿ ಚಾಮುಂಡಿ ತಪ್ಪಲಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ತಿಳಿಸಿದರು.

ಇದನ್ನೂ ಓದಿ: Mysore Palace: ತಾಜ್ ಮಹಲ್​ ಹಿಂದಿಕ್ಕಿದೆ ಮೈಸೂರು ಅರಮನೆ, ‘ಅಂಬಾ ವಿಲಾಸ’ಕ್ಕೆ ವಿಶ್ವ ಮನ್ನಣೆ

ಅಂದಹಾಗೆ ಚಾಮುಂಡಿ ಬೆಟ್ಟ ಒಂದೇ ಅಲ್ಲ, ಮೈಸೂರಿನ ಇನ್ನಿತರ ಕೆಲವು ಪ್ರಸಿದ್ಧ ದೇವಾಲಯಗಳಲ್ಲೂ ಧಾರ್ಮಿಕ ಸೌಹಾರ್ದತೆಯಿದೆ. ಮೈಸೂರು ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ಮತ್ತು ಮಾರಮ್ಮ ದೇವಸ್ಥಾನಗಳಿಗೆ ಮುಸ್ಲಿಂ ಸಮುದಾಯದ ಮಹಿಳೆಯರು ಬುರ್ಖಾ ಧರಿಸಿ ಆಗಮಿಸುವುದನ್ನು ನೀವು ನೋಡಬಹುದು. ಸಾಂಪ್ರದಾಯಿಕ ನಂಬಿಕೆಗಳಾದ ಹುಷಾರಿಲ್ಲದೇ ಇದ್ದಾಗ ತಾಯತ ಕಟ್ಟಿಸುವುದು, ಹೊಸ ವಾಹನ ಖರೀದಿಸಿದಾಗ ಲಿಂಬೆ ಮೆಣಸು ಕಟ್ಟಿ ಪೂಜೆ ಮಾಡಿಸುವುದು ಇಂತಹ ಹಲವು ಆಚರಣೆಗಳನ್ನು ಮೈಸೂರಿನ ಮುಸ್ಲಿಂ ಸಮುದಾಯ ಪಾಲಿಸುತ್ತಿದೆ.

ಆಂಜನೇಯಸ್ವಾಮಿ ಮತ್ತು ಮಾರಮ್ಮ ದೇವಾಲಯಗಳಲ್ಲಿ ಮಕ್ಕಳಿಗೆ ತಾಯತ ಕಟ್ಟಿಸುತ್ತಿರುವ ಮುಸ್ಲಿಂ ಸಮುದಾಯದ ಬುರ್ಖಾಧಾರಿ ಮಹಿಳೆಯರನ್ನು ಈಗಲೂ ಕಾಣಬಹುದು. ಹಿಜಾಬ್-ಬುರ್ಖಾ ಗಲಾಟೆ ಮೈಸೂರಿನ ಚಾಮುಂಡಿ ಬೆಟ್ಟ ಸೇರಿದಂತೆ ಪ್ರಸಿದ್ಧ ದೇವಾಲಯಗಳಲ್ಲಿ ಧಾರ್ಮಿ ಸಾಮರಸ್ಯಕ್ಕೆ ಯಾವುದೇ ತೊಂದರೆ ತಂದೊಡ್ಡಿಲ್ಲ. ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿ ದೇವಸ್ಥಾನಗಳಿಗೆ ಬರುವುದು ದೇವಸ್ಥಾನಗಳ ಆಡಳಿತ ಮಂಡಳಿ ಅಥವಾ ಭಕ್ತಾದಿಗಳಿಗೂ ಸಮಸ್ಯೆಯಾಗಿಲ್ಲ.

ಇದನ್ನೂ ಓದಿ: Hijab Controversy: ಹಿಜಾಬ್, ಕೇಸರಿಗಾಗಿ ಹೊಡೆದಾಡಬೇಡಿ, ನೋಡಲು ನೋವಾಗುತ್ತೆ: ಯೋಧನ ಲಾಸ್ಟ್ ಮೆಸೇಜ್

ಧಾರ್ಮಿಕ ಸೌಹಾರ್ದತೆ ಕೆಡಿಸುವ ಸುದ್ದಿಗಳನ್ನೇ ಹಬ್ಬಿಸುವುದಕ್ಕಿಂತ ಒಬ್ಬರೊಳಗೊಬ್ಬರು ಒಗ್ಗೂಡಿ ಬದುಕುವ ಹಿಂದೂ ಮುಸ್ಲಿಂ ಸಾಮರಸ್ಯ ಇಡೀ ದೇಶಕ್ಕೆ ಮಾದರಿಯಾಗಲಿ ಎಂಬ ಮೈಸೂರಿನ ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
Published by:guruganesh bhat
First published: