ಮೊದಲ ದಿನ ಉತ್ತಮ ಹಾಜರಾತಿಯ ನಿರೀಕ್ಷೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್; ಆ.23ರಿಂದ ಶಾಲೆಗಳು ಆರಂಭ

ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಅವರಿಂದ ಹಿಡಿದು ಎಲ್ಲ ಮಹನೀಯರು ಸ್ವದೇಶಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು. 1968ರಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಶಿಕ್ಷಣದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದರು. ನಂತರ 1986ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಕೂಡ ಪ್ರಯತ್ನಿಸಿದರು ಎಂದು ಸಚಿವರು ಹೇಳಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮೈಸೂರಿನಲ್ಲಿ ಸುತ್ತೂರು ಸ್ವಾಮಿಗಳನ್ನು ಭೇಟಿಯಾದರು

ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮೈಸೂರಿನಲ್ಲಿ ಸುತ್ತೂರು ಸ್ವಾಮಿಗಳನ್ನು ಭೇಟಿಯಾದರು

  • Share this:
ಮೈಸೂರು: ಒಂದುವರೆ ವರ್ಷದ ಬಳಿಕ 9 ಮತ್ತು 10ನೇ ತರಗತಿ ಮತ್ತು ಪಿಯು ಕಾಲೇಜು ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಮೊದಲ ದಿನ ಉತ್ತಮ ಹಾಜರಾತಿಯನ್ನು ನಿರೀಕ್ಷಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಆ.23ರಿಂದ ಶಾಲೆ ಪುನಾರಂಭಕ್ಕೆ ಮೈಸೂರಿನಲ್ಲಿ ಕೈಗೊಂಡಿರುವ ಸಿದ್ಧತೆ ಮತ್ತು ಜಿಲ್ಲೆಯ ಶೈಕ್ಷಣಿಕ ಪ್ರಗತಿ ಕುರಿತು ಶುಕ್ರವಾರ (ಆ.20) ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.

'ಶಾಲಾ-ಕಾಲೇಜು ತರಗತಿಗಳ ಆರಂಭಕ್ಕೆ ಇಲಾಖೆ ಸಂಪೂರ್ಣವಾಗಿ ಸಿದ್ಧವಾಗಿದೆ. ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತರಗತಿಗಳ ಯಶಸ್ವಿ ಪುನಾರಂಭಕ್ಕೆ ಶಿಕ್ಷಕರು ಮತ್ತು ಅಧಿಕಾರಿ ವರ್ಗ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಹೀಗಾಗಿ, ಉತ್ತಮ ಹಾಜರಾತಿಯ ವಿಶ್ವಾಸವಿದೆ' ಎಂದು ಸಚಿವರು ಹೇಳಿದರು.

ಮುಂಬರುವ ದಿನಗಳಲ್ಲಿ 1ರಿಂದ 8ನೇ ತರಗತಿಗಳು ಆರಂಭಿಸಬಹುದು ಎಂದು ವಿಷಯ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಒಳಗೊಂಡ ಟಾಸ್ಕ್­ಫೋರ್ಸ್ ತಿಳಿಸಿದೆ.
'ಮಕ್ಕಳಿಗೆ ಸೋಂಕು ಹೆಚ್ಚು ಬಾಧಿಸುವುದಿಲ್ಲ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಆದರೆ, ಕೋವಿಡ್ ಸುರಕ್ಷತಾ ಕ್ರಮಗಳನ್ನು ಈ ತರಗತಿಗಳ ಮಕ್ಕಳು ಪಾಲನೆ ಮಾಡುವರೇ ಎಂಬ ಪ್ರಶ್ನೆಗಳು ಎದುರಾಗಿವೆ. ಹೀಗಾಗಿ, 9 ಮತ್ತು 10ನೇ ತರಗತಿ ಹಾಗೂ ಪಿಯು ಕಾಲೇಜುಗಳ ಮಕ್ಕಳು ಸುರಕ್ಷತಾ ಕ್ರಮಗಳನ್ನು ಹೇಗೆ ಪಾಲಿಸುತ್ತಾರೆ ಎಂಬುದರ ಮೇಲೆ 1ರಿಂದ 8ನೇ ತರಗತಿಗಳನ್ನು ಆರಂಭಿಸುವ ನಿರ್ಧಾರ ನಿಂತಿದೆ' ಎಂದು ಸಚಿವರು ಹೇಳಿದರು.

'ಪ್ರಾಥಮಿಕ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಸರಕಾರಿ ಶಾಲೆಗಳಲ್ಲಿ ಹೆಚ್ಚು. ಆದರೆ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಹೆಚ್ಚಿನ ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಪಡೆಯುತ್ತಿದ್ದಾರೆ. ಸಾಕಷ್ಟು ಕಡೆ ಸರಕಾರಿ ಕಾಲೇಜುಗಳು ಆರಂಭಕ್ಕೆ ಮೊದಲೇ ಖಾಸಗಿ ಸಂಸ್ಥೆಗಳು ಕಾಲೇಜು ಬಾಗಿಲು ತೆಗೆದು ತರಗತಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ' ಎಂದು ಸಚಿವರು ತಿಳಿಸಿದರು.

'ವಿದ್ಯಾ ದಾನ ಶ್ರೇಷ್ಠ ದಾನವೆಂದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುವ ಖಾಸಗಿ ಸಂಸ್ಥೆಗಳು ಇವೆ. ಮತ್ತೊಂದೆಡೆ ವಾಣಿಜ್ಯ ಉದ್ದೇಶದ ಕಾಲೇಜುಗಳು ಕೂಡ ಇವೆ. ಹೀಗಾಗಿ, ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡಲಾಗದು' ಎಂದು ಕೋವಿಡ್ ಸಂಕಷ್ಟದ ನಡುವೆಯು ಪೂರ್ಣ ಶುಲ್ಕಕ್ಕೆ ಒತ್ತಾಯಿಸುತ್ತಿರುವ ಖಾಸಗಿ ಸಂಸ್ಥೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

'ಕೋವಿಡ್­ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಖಾಸಗಿ ಸಂಸ್ಥೆಗಳು ಒಟ್ಟಾರೆ ಶುಲ್ಕದ ಪೈಕಿ ಶೇ.70ರಷ್ಟು ಮಾತ್ರ ಪಡೆಯಬೇಕು ಎಂದು ಈ ಹಿಂದೆ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು. ಆದರೆ, ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕೆಲವು ಖಾಸಗಿ ಸಂಸ್ಥೆಗಳು, ತಡೆ ತೆಗೆದುಕೊಂಡಿವೆ. ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಆ ರೀತಿ ಆಗಲಿಲ್ಲ' ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

'ಶುಲ್ಕದ ವಿಚಾರವಾಗಿ ತೊಂದರೆಗೊಳಗಾದ ಪಾಲಕರು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದರೆ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು ಖಾಸಗಿ ಸಂಸ್ಥೆಗಳಿಗೆ ತೆರಳಿ ಆಡಳಿತ ಮಂಡಳಿ ಮನವೊಲಿಸಿ ಶುಲ್ಕದಲ್ಲಿ ಸಾಧ್ಯವಾದಷ್ಟು ವಿನಾಯಿತಿ ಕೊಡಿಸಬೇಕು ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಸಾಕಷ್ಟು ಕಡೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ' ಎಂದು ಸಚಿವರು ತಿಳಿಸಿದರು.

ಪ್ರಾಥಮಿಕ ಹಂತದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪಠ್ಯಕ್ರಮ: 'ದೇಶದ ಶೈಕ್ಷಣಿಕ ಪದ್ಧತಿಯಲ್ಲಿ ಸುಧಾರಣೆ ಮತ್ತು ಬದಲಾವಣೆಗಳು ಆಗಬೇಕು ಎಂದು ಸ್ವಾತಂತ್ರ್ಯಪೂರ್ವದಲ್ಲೇ ಬಯಸಲಾಗಿತ್ತು. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಅವರಿಂದ ಹಿಡಿದು ಎಲ್ಲ ಮಹನೀಯರು ಸ್ವದೇಶಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು. 1968ರಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಶಿಕ್ಷಣದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದರು. ನಂತರ 1986ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಕೂಡ ಪ್ರಯತ್ನಿಸಿದರು ಎಂದು ಸಚಿವರು ಹೇಳಿದರು.

'ನಮ್ಮ ಶಿಕ್ಷಣದಲ್ಲಿ ತುರ್ತಾಗಿ ಸುಧಾರಣೆ ಬೇಕಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣದಲ್ಲಿ ಪರಿವರ್ತನೆ ತರಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.  ಶಿಕ್ಷಣ ತಜ್ಞರ ಸಲಹೆ, ಸೂಚನೆಗಳನ್ನು ಪಡೆದು 'ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತರಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಜಾರಿಗೆ ತರಲು ತಯಾರಿ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಕನಿಕರ; ಭಾರತದ ಮಹಿಳೆಯರ ಬಗ್ಗೆಯೂ ಯೋಚಿಸಿ ಮೋದಿಯವರೇ ಎಂದ ಓವೈಸಿ

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಚಿವರು: ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಚಿವರು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. "ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಹೆಚ್ಚಿನ ಶಕ್ತಿ ಸಿಗಲಿ" ಎಂದು ಶ್ರೀಗಳಲ್ಲಿ ಕೋರಿ ಆಶೀರ್ವಾದ ಪಡೆಯಲಾಯಿತು ಎಂದು ಸಚಿವರು ತಿಳಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: