ಮೈಸೂರು ದಸರಾ ಆಚರಣೆ ಬಗ್ಗೆ ಸರ್ಕಾರಕ್ಕೆ ಗೊಂದಲ; ಜಿಲ್ಲಾಡಳಿತದ ಬಳಿ ಇದೆ ಎಬಿಸಿಡಿ ಪ್ಲ್ಯಾನ್​

ಒಂದು ವೇಳೆ ಜಂಬೂ ಸವಾರಿ ಇದೆ ಎಂದರೆ ಆನೆಗಳ ಆಯ್ಕೆ ನಡೆಯಬೇಕು. ಇನ್ನೂ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡದ ಸರ್ಕಾರದ ನಡೆಯಿಂದ ಅರಣ್ಯ ಇಲಾಖೆಯೂ ಕೊಂಚ ಕಸಿವಿಸಿಗೊಂಡಂತೆ ಕಾಣುತ್ತಿದೆ. ಕಡೆಯ ಕ್ಷಣದಲ್ಲಿ ಜಂಬೂಸವಾರಿ ನಡೆಸಲು ತೀರ್ಮಾನಗೊಂಡರೆ ಆನೆಗಳ ತಾಲೀಮಿಗೆ ತೊಂದರೆಯಾಗಲಿದೆ.

ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ

ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ

  • Share this:
ಮೈಸೂರು(ಆ.30): ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಮಾಡಬೇಕೋ  ಬೇಡವೋ ಎನ್ನುವ ಗೊಂದಲಕ್ಕೆ ರಾಜ್ಯ ಸರ್ಕಾರ ಸಿಲುಕಿದ್ದು,  ಈ ಬಾರಿಯ ದಸರಾ ಆಚರಣೆ ದೊಡ್ಡ ಸವಾಲಾಗಿದೆ. ಕೊರೋನಾ ನಡುವೆ ನಾಡಹಬ್ಬ ಆಚರಿಸುವ ಅನಿವಾರ್ಯ ಸ್ಥಿತಿಗೆ  ಸರ್ಕಾರ ಸಿಲುಕಿದರೆ,  ಮೈಸೂರು ಜಿಲ್ಲಾಡಳಿತ ಸರ್ಕಾರ ನೀಡುವ ಸೂಚನೆಗಾಗಿ ಕಾಯುತ್ತಿದೆ. ತುರ್ತಾಗಿ ನಿರ್ಧಾರ ಮಾಡಿ ದಸರಾ ಆಚರಣೆ ಮಾಡಲು ಆಗುವುದಿಲ್ಲ, ದಸರಾ ಆಚರಣೆಗೆ  ಕನಿಷ್ಠ 45 ದಿನಗಳ ತಯಾರಿ ಬೇಕು. ಅಲ್ಲದೇ, ಆನೆಗಳ ತಾಲೀಮು ದಸರಾ ಪ್ರಮುಖ ಸಿದ್ದತೆಯಾಗಿದ್ದು ಸರಳ ಅಥವಾ ಅದ್ದೂರಿ ದಸರಾ ಯಾವುದಾದರೂ ಸರಿ ಆನೆಗಳು ಬೇಕೆ ಬೇಕು. ಹೀಗಾಗಿ ಆನೆಗಳಿಲ್ಲದ ದಸರಾ ಆಚರಣೆ ಹೇಗೆ ಸಾಧ್ಯ ಎನ್ನುವ ಜಿಜ್ಞಾಸೆಗೂ  ಜಿಲ್ಲಾಡಳಿತ ಬಿದ್ದಿದೆ. ಈ ನಡುವೆಯೇ ಮೈಸೂರು ದಸರಾ ಆಚರಣೆಗೆ ಎಬಿಸಿಡಿ ಪ್ಲ್ಯಾನ್​ ಕೂಡ ರೆಡಿಯಾಗಿದೆ.

ಹೌದು, ಮೈಸೂರು ಜಿಲ್ಲಾಡಳಿತದಿಂದ ದಸರಾ ಆಚರಣೆಗೆ ನಾಲ್ಕು ಪ್ಲಾನ್ ಸಿದ್ದವಾಗಿದೆ. ನಾಲ್ಕು ಪರ್ಯಾಯ ಪ್ಲ್ಯಾನ್​​ಗಳನ್ನ ಮಾಡಿಕೊಂಡಿರುವ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪ್ಲಾನ್ A - ದಸರಾವನ್ನು ಕೇವಲ ಜಂಬೂಸವಾರಿ ಮೆರವಣಿಗೆಗೆ ಸೀಮಿತ ಮಾಡುವುದು,  ಅದು ಅರಮನೆ ಒಳಗೆ ಮಾತ್ರ.
ಪ್ಲಾನ್ B- ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ಕಾರ್ಯಕ್ರಮ ಮಾಡುವುದು.
ಪ್ಲಾನ್ C - ಎಲ್ಲಾ ದಸರಾ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕರಿಗೆ ನಿರ್ಬಂಧ ಹೇರುವುದು.
ಪ್ಲಾನ್ D- ಎಲ್ಲಾ ದಸರಾ ಕಾರ್ಯಕ್ರಮಗಳನ್ನು ನಿಗದಿಯಂತೆ ನಡೆಸುವುದು, ಕೊರೋನಾ ನಿಯಮದ ಪ್ರಕಾರ ಸಾಮಾಜಿಕ ಅಂತರ ಹಾಗೂ ಕಡಿಮೆ ಜನರಿಗೆ ಆಹ್ವಾನ ಮಾಡುವುದು.

ಮೈಸೂರಿನ ಅರಮನೆ ಮಂಡಳಿ ಹಾಗೂ ಇತರೆ ಇಲಾಖೆಗಳಿಂದ ಮಾಹಿತಿ ಪಡೆದಿರುವ ಜಿಲ್ಲಾಡಳಿತ, ಈ ನಾಲ್ಕು ಪ್ಲ್ಯಾನ್​ಗಳನ್ನು ಸಿಎಂ ಮುಂದೆ ಇಟ್ಟು ದಸರಾಗೆ ಅನುಮತಿ ಪಡೆಯಲು ಕಾಯುತ್ತಿದೆ.

Mann Ki Baat - ಭಾರತೀಯ ಬೊಂಬೆ ಮತ್ತು ಕಂಪ್ಯೂಟರ್ ಗೇಮ್​ಗಳ ಉದ್ಯಮ ಬೆಳೆಸಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ಕರೆ

ಈ ನಡುವೆ  ದಸರಾ ಆಚರಣೆ ವಿಚಾರವಾಗಿ ಕೇವಲ ಸರಳ ದಸರಾ ಎಂದಷ್ಟೆ ಹೇಳಿರುವ ಸಿಎಂ ಮಾತು ಇದೀಗ ಕುತೂಹಲ ಮೂಡಿಸಿದೆ. ಆದರೆ ಸರಳ ದಸರಾ ಮಾಡಿದರೆ ಜಂಬೂ ಸವಾರಿ ಇರುತ್ತಾ? ಇಲ್ಲವಾ ಎಂಬ ಪ್ರಶ್ನೆಯೂ ಉದ್ಬವವಾಗಿದೆ. ಒಂದು ವೇಳೆ ಜಂಬೂ ಸವಾರಿ ಇದೆ ಎಂದರೆ ಆನೆಗಳ ಆಯ್ಕೆ ನಡೆಯಬೇಕು. ಇನ್ನೂ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡದ ಸರ್ಕಾರದ ನಡೆಯಿಂದ ಅರಣ್ಯ ಇಲಾಖೆಯೂ ಕೊಂಚ ಕಸಿವಿಸಿಗೊಂಡಂತೆ ಕಾಣುತ್ತಿದೆ. ಕಡೆಯ ಕ್ಷಣದಲ್ಲಿ ಜಂಬೂಸವಾರಿ ನಡೆಸಲು ತೀರ್ಮಾನಗೊಂಡರೆ ಆನೆಗಳ ತಾಲೀಮಿಗೆ ತೊಂದರೆಯಾಗಲಿದೆ. ಅಂಬಾರಿ ಹೊರಲು ಒಂದೂವರೆ ತಿಂಗಳ ತಾಲೀಮು ಬೇಕು, ಅರ್ಜುನ ಆನೆಗೆ ವಯಸ್ಸಾಗಿರುವುದರಿಂದ ಭಾರ ಹೊರಿಸುವಂತಿಲ್ಲ, ಇದರಿಂದ ಹೊಸ ಆನೆ ಆಯ್ಕೆ ಮಾಡಿ ತಾಲೀಮು ನಡೆಸಬೇಕು. ಇನ್ನು ಹೈ ಪವರ್ ಕಮಿಟಿ ಮೀಟಿಂಗ್ ಸಹ ನಡೆದಿಲ್ಲ ಹಾಗಾಗಿ ತುರ್ತು ನಿರ್ಧಾರದಿಂದ ದಸರಾ ತಯಾರಿ ಕಷ್ಟವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಮೈಸೂರಿನಲ್ಲಿ ಸರಳ ದಸರಾ ಆಚರಿಸಿದ ಇತಿಹಾಸ ಇದೆ. ಡಾ.ರಾಜ್‍ಕುಮಾರ್ ಅಪಹರಣ ಆಗಿದ್ದಾಗ ಸರಳ ದಸರಾ ಆಚರಿಸಲಾಗಿತ್ತು. ಕೇವಲ ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ಮಾಡಲಾಗಿತ್ತು. ಹಲವು ಬಾರಿ ಬರ ಹಾಗೂ ನೆರೆ ಬಂದಾಗ ಸರಳ ದಸರಾ ಆಚರಿಸದ ಇತಿಹಾಸ ಇದೆ. ರೈತರ ಕೈಯಲ್ಲೂ ದಸರಾ ಉದ್ಘಾಟನೆ ನಡೆಸಿದ ಇತಿಹಾಸವು ಇದೆ. ಈ ಬಾರಿ ಜಂಬೂಸವಾರಿ ನಡೆಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಉಸ್ತುವಾರಿ ಸಚಿವರ ಮಾತು ಮತ್ತಷ್ಟು ಗೊಂದಲ ಮೂಡಿಸಿದೆ.  ಜಂಬೂಸವಾರಿ ಇಲ್ಲದ ದಸರಾವನ್ನು ಕಲ್ಪನೆಯನ್ನು ಮಾಡಿಕೊಳ್ಳಲು ಸಾಧ್ಯವೇ ಎನ್ನುವ ಮಾತುಗಳು ಸಹ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
Published by:Latha CG
First published: