ಮೈಸೂರು ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವಿನ ಜಟಾಪಟಿಗೆ ಇಂದು ಮತ್ತೊಂದು ರೂಪ ಸಿಕ್ಕಿದ್ದು, ಮೂರು ತಿಂಗಳ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾದ ಶಾಸಕ ಸಾ.ರಾ. ಮಹೇಶ್ ಹಾಗೂ ಡಿಸಿ ರೋಹಿಣಿ ಸಿಂಧೂರಿ ಮೊದಲ ಭೇಟಿಯಲ್ಲೆ ತಮ್ಮ ಅಸಮಾಧಾನಗಳನ್ನ ನೇರವಾಗ ಹೊರಹಾಕಿ, ಸಭೆಯಲ್ಲಿದ್ದವರನ್ನೆ ಬೆರಗಾಗುವಂತೆ ಮಾಡಿದ್ದಾರೆ. ಮೈಸೂರು ಜಿಲ್ಲಾಪಂಚಾಯಿತಿ ಆವರಣದಲ್ಲಿ ನಡೆದ ಈ ಟಾಕ್ವಾರ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಕಿತ್ತಾಟವನ್ನ ಬಹಿರಂಗ ಮಾಡಿದೆ. ಮೈಸೂರು ಡಿಸಿ ವಿರುದ್ಧ ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸಿದ್ದ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಇವತ್ತು ಪರೋಕ್ಷವಾಗಿ ಡಿಸಿಗೆ ಅಧಿಕಾರ ಬಳಕೆ ಮಾಡಿಕೊಂಡು ಸಾರ್ವಜನಿಕವಾಗಿ ಮುಜುಗರ ಮಾಡಿದರು. ಮಾಸ್ಕ್ ತೆಗೆದು ಮಾತಾಡಿ ಎಂದು ಹೇಳಿದ ಶಾಸಕರಿಗೆ ನಾನು ಮಾಸ್ಕ್ ತೆಗಿಯೋಲ್ಲ ಅಂತ ಟಾಂಗ್ ಕೊಟ್ಟ ಡಿಸಿ ನೀವು ಅನುಮತಿಸಿದರೆ ನಾನು ಹೊರಡುತ್ತೇನೆ ಎಂದು ಸಭೆಯ ಅರ್ಧದಲ್ಲೆ ಎದ್ದು ಹೋದರು.
ಹೌದು. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ಅವರ ಭಿನ್ನಾಭಿಪ್ರಾಯ ಇಂದು ಸಾರ್ವಜನಿಕರ ಸಭೆಯಲ್ಲಿ ಎಲ್ಲರ ಮುಂದೆ ಬಹಿರಂಗವಾಗಿದೆ. ಏಟಿಗೆ ಎದುರೇಟು ಎಂಬಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಶಿಷ್ಟಾಚಾರದಲ್ಲೆ ಜಟಾಪಟಿ ನಡೆದಿದ್ದು. ಇಬ್ಬರಿಗು ಸಾರ್ವಜನಿಕವಾಗಿ ಮುಜುಗರವಾಗಿದೆ.
ಮೈಸೂರಿನ ಜಿ.ಪಂನಲ್ಲಿ ಇವತ್ತು, ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆ ಕರೆಯಲಾಗಿತ್ತು. ಸಮಿತಿ ಅಧ್ಯಕ್ಷರಾಗಿರುವ ಸಾರಾ ಮಹೇಶ್ ನೇತೃತ್ವದಲ್ಲಿ ಸಭೆಯನ್ನ ಏರ್ಪಡಿಸಲಾಗಿತ್ತು. ಈ ವೇಳೆ ಸಭೆ ಆರಂಭವಾಗುತ್ತಿದ್ದಂತೆ ಡಿಸಿ ರೋಹಿಣಿ ಸಿಂಧೂರಿ ಅವರು ಸಭೆಗೆ ಬಂದಿದ್ದಾರೆ. ಈ ವೇಳೆ ವೇದಿಕೆ ಮೇಲೆ ಡಿಸಿಗೆ ಆಸನದ ವ್ಯವಸ್ಥೆ ಇರದ ಕಾರಣ, ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತುಕೊಂಡಿದ್ದಾರೆ. ಬಳಿಕ ಮಾತು ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ ಮಾಸ್ಕ್ ಹಾಕಿಕೊಂಡೆ ಮಾತು ಶುರು ಮಾಡಿದ್ದಾರೆ. ಇದನ್ನು ಕಂಡು ಶಾಸಕರು ನಿಮ್ಮ ಮಾತು ಕೇಳ್ತಿಲ್ಲ 'ಮಾಸ್ಕ್ ತೆಗೆದು ಮಾತಾಡಿ' ಎಂದಿದ್ದಾರೆ. ಅದಕ್ಕೆ ಡಿಸಿ ಅವರು ಮಾಸ್ಕ್ ತೆಗೆಯಬಾರದು, ಮಾಸ್ಕ್ ತೆಗೆದು ನಾನು ಮಾತಾಡಲ್ಲ. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ನೀವೂ ಸಮ್ಮತಿಸಿದ್ದರೆ ನಾನು ಸಭೆಯಿಂದ ಹೋಗುತ್ತೇನೆ.
ಇನ್ನು ಡಿಸಿ ಅವರ ಈ ಮಾತಿಗೆ ನಯವಾಗೆ ತಿರುಗೇಟು ನೀಡಿದ ಶಾಸಕ ಸಾರಾ ಮಹೇಶ್, ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಗೆ ನೀವೂ ಸ್ವಾಗತ ಮಾಡಿಲ್ಲ, ಆದರು ಪರವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ನಿಮಗೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ನಿಮಗೆ ಸಮಯ ಇದ್ದರೆ ಇರಿ, ಬೇರೆ ಕೆಲಸ ಇದ್ದರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದ್ದಾರೆ. ಸಾರಾ ಮಹೇಶ್ ಹೇಳುತ್ತಿದ್ದಂತೆ ಡಿಸಿ ರೋಹಿಣಿ ಸಿಂಧೂರಿ ಸಭೆಯಿಂದ ಎದ್ದು ಬೇಸರದಿಂದ ಹೊರ ನಡೆದು ಕಾರು ಹತ್ತಿ ತೆರಳಿದ್ದಾರೆ.
ಒಟ್ಟಾರೆ, ರೋಹಿಣಿ ಸಿಂಧೂರಿ ವಿರುದ್ದ ಇದ್ದ ಸಿಟ್ಟನ್ನ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಸಾರಾ ಮಹೇಶ್ ತೀರಿಸಿಕೊಂಡಂತೆ ಕಂಡಿದೆ. ಅದೇ ರೀತಿ ನಾನು ಮಾಸ್ಕ್ ತೆಗೆಯೋಲ್ಲ ಅಂತ ನೇರವಾಗಿಯೇ ತಿರುಗೇಟು ಕೊಟ್ಟಿರುವ ರೋಹಿಣಿ ಸಿಂಧೂರಿ ನಾನು ಯಾರಿಗು ಜಗ್ಗೋಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಇವರಿಬ್ಬರ ಈ ಟಾಕ್ವಾರ್ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ