• Home
  • »
  • News
  • »
  • state
  • »
  • ದಸರಾ ಜಂಬೂಸವಾರಿಯಲ್ಲಿ 2,000 ಮಂದಿಗೆ ಮಾತ್ರ ಅವಕಾಶ; ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ

ದಸರಾ ಜಂಬೂಸವಾರಿಯಲ್ಲಿ 2,000 ಮಂದಿಗೆ ಮಾತ್ರ ಅವಕಾಶ; ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ

ಮೈಸೂರು ಅರಮನೆಯ ಒಂದು ಚಿತ್ರ

ಮೈಸೂರು ಅರಮನೆಯ ಒಂದು ಚಿತ್ರ

ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ 250ಮಂದಿ, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1ಸಾವಿರ, ಜಂಬೂಸವಾರಿಗೆ 2ಸಾವಿರ ಜನ ಸೇರಿಸಲು ಚಿಂತನೆ ನಡೆಸಿದ್ದೇವೆ. ಕೇಂದ್ರದ ಮಾರ್ಗಸೂಚಿ ಕೈ ಸೇರಿದ ನಂತರ ತೀರ್ಮಾನ ಆಗಲಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಮೈಸೂರು(ಸೆ. 27): ವಿಶ್ವವಿಖ್ಯಾತ ಮೈಸೂರು ದಸರಾ 2020ರ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಸರಳ ದಸರಾ ಇರೋದ್ರಿಂದ ಜಂಬೂಸವಾರಿ ಅರಮನೆ ಒಳಗೆ ನಡೆಯಲಿದೆ. ಅರಮನೆಯಲ್ಲಿ ನಡೆಯಲಿರುವ ಜಂಬೂಸವಾರಿಯಲ್ಲಿ ಕೇವಲ 2 ಸಾವಿರ ಮಂದಿಗೆ ಭಾಗಿಯಾಗಲು ಅವಕಾಶ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಂಡಿದ್ದು, 2 ಸಾವಿರ ಮಂದಿ ಭಾಗಿಯಾಗಿ ಜಂಬೂಸವಾರಿ ಮೆರವಣಿಗೆ ನಡೆಸಲು ಅವಕಾಶ ನೀಡಿ ಅಂತ ಕೇಳಿಕೊಳ್ಳಲಾಗಿದೆ. ಅಲ್ಲಿಯವರೆಗೆ ಅನ್‌ಲಾಕ್‌ 5.0 ಮಾರ್ಗಸೂಚಿ ಜಾರಿಯಾಗಲಿದ್ದು ಕೇಂದ್ರದ ಮಾರ್ಗಸೂಚಿಯಂತೆ ಅನುಮತಿ ನೀಡುವ ಸಾಧ್ಯತೆಯನ್ನು ಸಚಿವರು ಪ್ರಸ್ತಾಪಿಸಿದ್ದಾರೆ. 


ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಂಬೂಸವಾರಿಗೆ 2ಸಾವಿರ ಜನರಿಗೆ ಮಾತ್ರ ಅವಕಾಶ ಸಿಗಬಹುದು. ಕೊರೋನಾ ಕಾರಣದಿಂದಾಗಿ ಸರಳ ದಸರಾ ಮಾಡಲು ನಿರ್ಧರಿಸಿದ್ದೇವೆ. ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ 250ಮಂದಿ, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1ಸಾವಿರ, ಜಂಬೂ‌ಸವಾರಿಗೆ 2ಸಾವಿರ ಜನ ಸೇರಿಸಲು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಕೈ ಸೇರಿದ ನಂತರ ಸ್ಪಷ್ಟ ತೀರ್ಮಾನ ಆಗಲಿದೆ ಎಂದು ತಿಳಿಸಿದರು.


ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ ಈ ಸಂದರ್ಭದಲ್ಲಿ ಹೆಚ್ಚು ಮಂದಿ ಸೇರಿಸಿದರೆ ಮತ್ತಷ್ಟು ಕೊರೋನಾ ಹೆಚ್ಚಾಗುವ ಸಾಧ್ಯತೆ ಇದೆ. ನೋಡೋಣ ಕೇಂದ್ರ ಹಾಗೂ ಮುಖ್ಯಕಾರ್ಯದರ್ಶಿಗಳು ಹೇಗೆ ಅನುಮತಿ ನೀಡುತ್ತಾರೋ ಹಾಗೇ ಕಾರ್ಯಕ್ರಮ ರೂಪಿಸೋಣ ಎಂದು ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು.


ಇದನ್ನೂ ಓದಿ: World Tourism Day: ನೀವು ನೋಡಲೇಬೇಕಾದ ರಾಜ್ಯದ ಐತಿಹಾಸಿಕ ಸ್ಥಳಗಳಿವು


ಇನ್ನು, ಜಂಬೂ ಸವಾರಿಗೆ ಭಾಗವಹಿಸುವ ಎಲ್ಲ ಕಲಾವಿದರಿಗೂ ಕೋವಿಡ್ ಟೆಸ್ಟ್ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿ 5 ದಿನ ಮುಂಚಿತವಾಗಿ ಟೆಸ್ಟ್‌ ಮಾಡಿಸಿಕೊಂಡ ಕಲಾವಿದರಿಗೆ ಮಾತ್ರ‌ ಜಂಬೂಸವಾರಿಯಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದರು.  ಜಂಬೂಸವಾರಿಯಲ್ಲಿ ಭಾಗಿಯಾಗುವ ಎಲ್ಲರೂ ಕೋವಿಡ್‌ ಟೆಸ್ಟ್ ಮಾಡಿಸಿಕೊಂಡರೆ ಉತ್ತಮ. ಅಧಿಕಾರಿಗಳು ಸಿಬ್ಬಂದಿಗಳು ಕಲಾವಿದರು ಎಲ್ಲರು ಕೋವಿಡ್‌ ಟೆಸ್ಟ್ ಮಾಡಿಸಿಕೊಂಡಿದ್ದರೆ ಮೆರವಣಿಗೆಯಲ್ಲಿ ಸೇರುವ ಜನರಿನ್ನು ಕೊರೊನದಿಂದ ದೂರ ಇಡಬಹುದು. ಹೀಗಾಗಿ ಎಲ್ಲರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಿ ಎಂದು ಮನವಿ ಮಾಡಿದರು.


ಈ ಬಾರಿ ಸರಳ ದಸರಾ ಆದರೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಿರುವ ಬಗ್ಗೆ ಅಪಸ್ವರ ಬಂದ ಹಿನ್ನೆಲೆಯಲ್ಲಿ ದಸರಾ ಪರಂಪರೆಯಾಗಿ ಮುಂದುವರೆದುಕೊಂಡು ಬಂದಿದೆ. ಹೀಗಾಗಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತೆ, ಈ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಬಹುತೇಕ ಕಾರ್ಯಕ್ರಮಗಳು ರದ್ದಾಗಿದ್ದು, ಅರಮನೆ ಮುಂದೆ ನಡೆಯುವ ಕಾರ್ಯಕ್ರಮಗಳನ್ನ ಮಾತ್ರ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು. ಈ ಹಿನ್ನೆಯಲ್ಲಿ ಮೈಸೂರು ಅರಮನೆ ಮುಂದೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು 9 ದಿನಗಳ ಕಾಲ ನಡೆಯಲಿದೆ.


ವರದಿ: ಪುಟ್ಟಪ್ಪ

Published by:Vijayasarthy SN
First published: