• Home
  • »
  • News
  • »
  • state
  • »
  • Mysuru Dasara 2020: ಮೈಸೂರು ದಸರಾಗೆ ಸಿದ್ಧತೆ; ಇಂದು ರಾತ್ರಿಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

Mysuru Dasara 2020: ಮೈಸೂರು ದಸರಾಗೆ ಸಿದ್ಧತೆ; ಇಂದು ರಾತ್ರಿಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

Chamundi Hills Mysore: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಮಧ್ಯರಾತ್ರಿಯಿಂದ ಅ. 18ರ ಮಧ್ಯರಾತ್ರಿಯವರೆಗೆ ಮತ್ತು ಅ. 25ರ ಮುಂಜಾನೆಯಿಂದ ನ. 1ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

  • Share this:

ಮೈಸೂರು (ಅ. 14): ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಜೋರಾಗಿ ನಡೆದಿದೆ. ಅ. 17ರಿಂದ ಮೈಸೂರಿನಲ್ಲಿ ದಸರಾ ಉತ್ಸವದ ಕಳೆ ತುಂಬಲಿದೆ. ಈಗಾಗಲೇ ಅಂಬಾರಿ ಹೊರುವ ಗಜಪಡೆಗೆ ಎಲ್ಲ ರೀತಿಯ ತಾಲೀಮು ನಡೆಸಲಾಗುತ್ತಿದೆ. ದಸರಾ ಉತ್ಸವದಲ್ಲಿ ಚಾಮುಂಡಿ ಬೆಟ್ಟದಲ್ಲೂ ಸಾಕಷ್ಟು ಸಾಂಪ್ರದಾಯಿಕ ಪೂಜೆಗಳು ನಡೆಯುವುದರಿಂದ ಇಂದು ಮಧ್ಯರಾತ್ರಿಯಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅ. 14ರ ಮಧ್ಯರಾತ್ರಿಯಿಂದ ಅ.18ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.


ದಸರಾ ಮುಗಿಯುವವರೆಗೂ 2 ಹಂತಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಇಂದು ಮಧ್ಯರಾತ್ರಿಯಿಂದ ಅ. 18ರ ಮಧ್ಯರಾತ್ರಿಯವರೆಗೆ ಮೊದಲ ಹಂತದಲ್ಲಿ ಮತ್ತು ಅ. 25ರ ಮುಂಜಾನೆಯಿಂದ ನ. 1ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ರಸ್ತೆ ಹಾಗೂ ಮೆಟ್ಟಿಲುಗಳ ಮಾರ್ಗ‌ದಿಂದ ಪ್ರವೇಶ ನಿಷೇಧಿಸಲಾಗಿದ್ದು, ಅ.17 ರಂದು ಗಣ್ಯರ ಹಾಗೂ ಅನುಮತಿ ಪಡೆದಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ನಿಷೇಧಿತ ದಿನಗಳಲ್ಲಿ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.


ಇದನ್ನೂ ಓದಿ: Mysuru Dasara 2020: ಅ. 17ರಿಂದ 26ರವರೆಗೆ ಮೈಸೂರು ದಸರಾ; ಅರಮನೆಯಲ್ಲಿ ನಡೆಯುವ ಕಾರ್ಯಕ್ರಮದ ಪಟ್ಟಿ ಇಲ್ಲಿದೆ


ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವುದರಿಂದ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಮುಂಜಾಗ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯರ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಅಧಿಕಾರಿಗಳು, ಗಣ್ಯರು, ಆಹ್ವಾನಿತರ ಹೊರತಾಗಿ ಬೇರೆಯವರಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ.


ಅ. 17ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಈ ಬಾರಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ದಸರಾ ಉದ್ಘಾಟನೆ ಮಾಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲು ಸೂಚಿಸಲಾಗಿದೆ. ಕೊರೋನಾ ಭೀತಿಯಿಂದಾಗಿ ಈ ಬಾರಿ ದಸರಾದ ಕೊನೆಯ ದಿನ ನಡೆಯುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕೇವಲ 300 ಜನರಿಗೆ ಅವಕಾಶ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಅ. 17ರಿಂದ ಅ. 26ರವರೆಗೆ ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವ ನಡೆಯಲಿದೆ.

Published by:Sushma Chakre
First published: