news18-kannada Updated:August 21, 2020, 10:35 AM IST
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
ಬೆಂಗಳೂರು (ಆ. 21): ರಾಜ್ಯಾದ್ಯಂತ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ ತಿಂಗಳು 5 ಸಾವಿರದ ಆಸುಪಾಸಿನಲ್ಲಿದ್ದ ಕೊರೋನಾ ಕೇಸುಗಳು ಈಗ 8 ಸಾವಿರದ ಗಡಿ ತಲುಪಿವೆ. ಇದರಿಂದಾಗಿ ಗಣೇಶ ಚತುರ್ಥಿ ಆಚರಣೆಯ ಸಂಭ್ರಮವೂ ಕಡಿಮೆಯಾಗಿದೆ. ಇದೇರೀತಿ ಈ ವರ್ಷದ ದಸರಾ ಹಬ್ಬಕ್ಕೂ ಕೊರೋನಾ ಕಂಟಕ ಎದುರಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಕೊರೋನಾ ಮಹಾಮಾರಿ ಹೆಚ್ಚಳದಿಂದಾಗಿ ಈ ಬಾರಿ ಸರಳವಾಗಿ ಮೈಸೂರು ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೈಸೂರು ದಸರಾ ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಮುಂದಿನ ವಾರ ಮೈಸೂರಿನಲ್ಲಿ ಜಿಲ್ಲೆಯ ಪ್ರಮುಖ ನಾಯಕರು, ಶಾಸಕರು, ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ದಸರಾ ಆಚರಣೆಯ ಸ್ವರೂಪದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಇದನ್ನೂ ಓದಿ: ರಾಜ್ಯದ ಏಕೈಕ ಗೌರಿ ದೇಗುಲವಿರುವ ಚಾಮರಾಜನಗರದ ಕುದೇರಿನಲ್ಲಿ ಈ ಬಾರಿ ಹಬ್ಬದ ಸಂಭ್ರಮವಿಲ್ಲ
ದಸರಾ ಆಚರಣೆ ಸಂಬಂಧ ಮೈಸೂರು ಮಹಾರಾಜರ ಕುಟುಂಬದವರ ಜೊತೆ ಕೂಡ ಚರ್ಚೆ ನಡೆಸಲಾಗುವುದು. ಮೈಸೂರು ಅರಮನೆಯಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಅರಮನೆ ಆವರಣ ಮತ್ತು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲ. ಆದರೆ, ಸಾಂಸ್ಕೃತಿಕ, ಕಲೆ, ಸಂಗೀತ, ಕ್ರೀಡಾ ಚಟುವಟಿಕೆ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತು, ಸಿನಿಮೋತ್ಸವ, ರಂಗೋತ್ಸವ, ದೀಪೋತ್ಸವಗಳ ಆಚರಣೆಗಳಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ನಿಲ್ಲದ ಪ್ರವಾಹ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ವಿಶ್ವವಿಖ್ಯಾತ ಜಂಬೂ ಸವಾರಿ ವಿಚಾರವಾಗಿ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಇದುವರೆಗೂ ದಸರಾ ಆನೆಗಳನ್ನು ಮೈಸೂರಿಗೆ ಕರೆತರುವ ಯಾವುದೇ ಕೆಲಸಗಳೂ ನಡೆದಿಲ್ಲ. ಪ್ರತಿವರ್ಷ ಈ ವೇಳೆಗೆ ಆನೆ ಶಿಬಿರಗಳಿಂದ ಮೈಸೂರಿಗೆ ದಸರಾ ಆನೆಗಳನ್ನು ಕರೆತರಲಾಗುತ್ತಿತ್ತು. ಹೀಗಾಗಿ, ಈ ವರ್ಷ ಜಂಬೂ ಸವಾರಿ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.
Published by:
Sushma Chakre
First published:
August 21, 2020, 10:23 AM IST