news18-kannada Updated:October 17, 2020, 7:30 AM IST
ಅರಮನೆ ದೃಶ್ಯ
ಮೈಸೂರು (ಅ.16): ಕೊರೋನಾ ಭೀತಿಯ ನಡುವೆಯೂ ನಾಡ ಹಬ್ಬ ದಸರಾಗೆ ಇಂದಿನಿಂದ ಅಧಿಕೃತ ಚಾಲನೆ ಸಿಗಲಿದೆ. ಬೆಳಗ್ಗೆ 7.45 ರಿಂದ 8.15ರ ಶುಭ ತುಲಾ ಲಗ್ನದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಚಾಲನೆ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಜನೆ ಮೂಲಕ ಉದ್ಘಾಟನೆ ಮಾಡಲಾಗುವುದು. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ. ಜಿಲ್ಲಾಉಸ್ತುವಾರಿ ಸಚಿವರಾದ ಎಸ್ಟಿ ಸೋಮಶೇಖರ್ ಸೇರಿದಂತೆ ಅನೇಕ ಜನ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕೊರೋನಾ ಹಿನ್ನಲೆ ಸರಳ, ಸಾಂಪ್ರದಾಯಿಕ ದಸರಾ ಆಚರಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು, ಭಕ್ತರಿಗೆ ನಿಷೇಧ ವಿಧಿಸಲಾಗಿದೆ. ಆದರೆ, ಎಂದಿನಂತೆ ಪೂಜಾ ಕೈಂಕಾರ್ಯಗಳು, ನವರಾತ್ರಿ ಪೂಜೆಗಳು ನಡೆಯಲಿದೆ.
ತಾಂತ್ರಿಕ ಸಮಿತಿ ನೀಡಿದ ಸಲಹೆ ಆಧಾರದ ಮೇಲೆ ದಸರಾ ಆಚರಣೆ ನಡೆಸಲಾಗುತ್ತಿದೆ. ಈ ನಿಯಮದ ಆಧಾರದ ಮೇಲೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಬಿಟ್ಟು ಇದೇ ಮೊದಲ ಬಾರಿಗೆ ಸಾರ್ವಜನಿಕರು ದಸರಾ ಸಂಭ್ರಮದಲ್ಲಿ ಭಾಗಿಯಾಗುತ್ತಿಲ್ಲ.
ಇಂದಿನಿಂದ ರಾಜಮನೆತನದ ಖಾಸಗಿ ದರ್ಬಾರ್ ಕೂಡ ಶುರವಾಗಲಿದೆ. ಖಾಸಗಿ ದರ್ಬಾರಿನಲ್ಲಿಯೂ 60ವರ್ಷ ಮೇಲ್ಪಟ್ಟ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿಲ್ಲ. ಕೆಲವೇ ಕೆಲವು ಪುರೋಹಿತರು ಸೇರಿದಂತೆ ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡುವುದು. ಮಾಸ್ಕ್ ಧಾರಣೆ ಕಡ್ಡಾಯವಾಗಿದೆ.
ಸಾಂಪ್ರದಾಯಿಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರ ದಸರಾದ ನೇರ ವೀಕ್ಷಣೆಗಾಗಿ ವರ್ಚುಯಲ್ ಪ್ರಸಾರ ಮಾಡಲಿದೆ. ಇದಕ್ಕೆ ರಾಜ್ಯದ ಜನರು ಕೂಡ ಸಹಕಾರ ನೀಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿ ಕೋರಿದ್ದಾರೆ. ಬೆಂಗಳೂರು ಬಿಟ್ಟರೆ ಸಾಂಸ್ಕೃತಿಕ ನಗರಿಯಲ್ಲಿ ದಿನವೊಂದಕ್ಕೆ ಅಧಿಕ ಸಂಖ್ಯೆಯ ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನಲೆ ಈ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ನಾಳೆಯಿಂದ 24 ರವರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೊರೋನಾ ಹಿನ್ನಲೆ ಈ ಬಾರಿ ಸ್ಥಳೀಯ ಕಲಾ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 8ದಿನಗಳವರೆಗೆ ಕೇವಲ 2 ಗಂಟೆಗಳ ಕಾಲ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೇ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜನರಿಗೆ ಅವಕಾಶವಿಲ್ಲ.
Published by:
Seema R
First published:
October 17, 2020, 7:30 AM IST