ಸರಳ, ವರ್ಚುಯಲ್​ ದಸರಾ; ಮನೆಯಲ್ಲೇ ಕುಳಿತು ವೀಕ್ಷಿಸಿ - ಜನರಿಗೆ ಮೈಸೂರು ಜಿಲ್ಲಾಧಿಕಾರಿ ಮನವಿ

Mysore Dasara 2020: ನಗರದಲ್ಲಿ ಹಬ್ಬದ ವಾತಾವರಣವಿದ್ದು, ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಕೂಡ ಅಧಿಕವಾಗಿದೆ. ಈ ಹಿನ್ನಲೆ ಕೊರೋನಾ ನಿಯಂತ್ರಣ ಕ್ರಮ ಅನಿವಾರ್ಯವಾಗಿದೆ.

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ

  • Share this:
ಮೈಸೂರು (ಅ.14): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನೇನು ಮೂರು ದಿನ ಬಾಕಿ ಉಳಿದಿದೆ. ಈ ನಡುವೆ ಸಾಲು ಸಾಲು ರಜೆಗಳು ಕೂಡ ಆಗಮಿಸುತ್ತಿದ್ದು, ಜನರು ನಾಡಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಗೆ ಆಗಮಿಸುವ ಸಾಧ್ಯತೆ ಇದೆ. ಆದರೆ, ಈ ಬಾರಿ ಅರಮನೆನಗರಿಯಲ್ಲಿ ನಡೆಯುವ ಜಂಬೂಸಾವರಿಯನ್ನು ನಿಮ್ಮ ನಿಮ್ಮ ಮನೆಯಿಂದಲೇ ನೋಡಿ. ಈ ಮೂಲಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗಎ ಕೈ ಜೋಡಿಸಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು,  ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ದಸರಾ ನಿರ್ವಹಣೆ ಸಾಕಷ್ಟು ಸವಾಲ್​ ಆಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗದಂತೆ ತಡೆಯುವ ಮಾರ್ಗ ಎಂದರೆ, ಹೆಚ್ಚಿನ ಜನ ಸೇರದಿರುವುದು ಈ ಹಿನ್ನಲೆಯಲ್ಲಿ ಈ ಬಾರಿ ನಾಡ ಹಬ್ಬ ದಸರಾವನ್ನು ಮನೆಯಲ್ಲಿಯೇ ಕುಳಿತು ಜನರು ನೋಡುವುದು ಎಲ್ಲರಿಗೂ ಒಳಿತು ಎಂದಿದ್ದಾರೆ. 

ಸರಳ ದಸರಾ, ಸಾಂಪ್ರದಾಯಿಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರ ದಸರಾದ ನೇರ ವೀಕ್ಷಣೆಗಾಗಿ ವರ್ಚುಯಲ್​ ಪ್ರಸಾರ ಮಾಡಲಿದೆ. ಇದಕ್ಕೆ ರಾಜ್ಯದ ಜನರು ಕೂಡ ಸಹಕಾರ ನೀಡಬೇಕು ಎಂದು ಕೋರಿದ್ದಾರೆ. ಬೆಂಗಳೂರು ಬಿಟ್ಟರೆ ಸಾಂಸ್ಕೃತಿಕ ನಗರಿಯಲ್ಲಿ ದಿನವೊಂದಕ್ಕೆ ಅಧಿಕ ಸಂಖ್ಯೆಯ ಸೋಂಕು ಪತ್ತೆಯಾಗುತ್ತಿದೆ. ಇದನ್ನು ನಿಯಂತ್ರಿಸುವುದು ಕೂಡ ಜಿಲ್ಲಾಡಳಿತಕ್ಕೆ ಸವಾಲ್​ ಆಗಿದೆ. ಈ ನಡುವೆ ದಸರಾ ಸಂಭ್ರಮ ಕೂಡ ಇದೆ. ಈಗಾಗಲೇ ನಗರದಲ್ಲಿ ಹಬ್ಬದ ವಾತಾವರಣವಿದ್ದು, ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಕೂಡ ಅಧಿಕವಾಗಿದೆ. ಈ ಹಿನ್ನಲೆ ಕೊರೋನಾ ನಿಯಂತ್ರಣ ಕ್ರಮ ಅನಿವಾರ್ಯವಾಗಿದೆ. ಬರುವ ಪ್ರವಾಸಿಗರು ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೆ, ಜನರೇ ಸ್ವಯಂ ಆಗಿ ಈ ಬಗ್ಗೆ ಚಿಂತನೆ ನಡೆಸಿ, ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿರುವುದು ಉತ್ತಮ ಎಂದಿದ್ದಾರೆ.

ಈಗಾಗಲೇ ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಬಂದ್​ ಮಾಡಲಾಗಿದೆ. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ನಂಜನಗೂಡು ದೇವಾಲಯ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನು ನೆರೆಯ ಜಿಲ್ಲೆಯಾದ ಮಂಡ್ಯದಲ್ಲಿಯೂ ಸಾಕಷ್ಟು ಪ್ರವಾಸಿ ಸ್ಥಳಗಳಿರುವ ಹಿನ್ನಲೆ ಈ ಅಲ್ಲೂ ಕೂಡ ಇದೇ ಕ್ರಮಕ್ಕೆ ಮುಂದಾಗಬೇಕು ಎಂದು ಕೋರಿದ್ದಾರೆ.

ಅ. 17ರಿಂದ ನ.1ರವರೆಗೆ  ಸಾರ್ವಜನಿಕರಿಗೆ ಪ್ರಮುಖ ಸ್ಥಳಗಳಿಗೆ ನಿಷೇದಿಸಲಾಗಿದೆ.  ಚಾಮುಂಡಿಬೆಟ್ಟಕ್ಕೆ ನಾಳೆಯಿಂದಲೇ ಪ್ರವೇಶ ನಿಷೇಧ ಮಾಡಲಾಗಿದೆ. ಇದು ನಮಗೆ ಅನಿವಾರ್ಯ ಕೂಡ ಆಗಿದೆ ಎಂದು ತಿಳಿಸಿದರು.

ಇದನ್ನು ಓದಿ: ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ

ಶನಿವಾರ ಮುಖ್ಯಮಂತ್ರಿಗಳು ದಸರಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೊರೋನಾ ಹಿನ್ನಲೆ ಸಂಪ್ರದಾಯಗಳನ್ನು ಕೈ ಬಿಡಬಾರದು ಎಂಬ ಕಾರಣಕ್ಕೆ ಸರಳ ದಸರಾ ಆಚರಣೆಗೆ ಮುಂದಾಗಲಾಗಿದೆ. ಜಂಬೂಸವಾರಿಯನ್ನು ಕೂಡ ಅರಮನೆ ಆವರಣದಲ್ಲಿ ಮಾತ್ರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೊರೋನಾ ಸಾವಿನ ಪ್ರಮಾಣ ಏರಿಕೆಗೆ ಸೋಂಕಿತರು ತಡವಾಗಿ ಪರೀಕ್ಷೆಗೆ ಒಳಗಾಗುತ್ತಿರುವುದು ಕೂಡ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಜನರು ತಕ್ಷಣ ಟೆಸ್ಟಿಂಗ್​ಗೆ ಒಳಗಾಗಬೇಕು. ಜಿಲ್ಲಾಡಳಿತದಿಂದ ಹೆಚ್ಚಿನ ಟೆಸ್ಟಿಂಗ್​ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಜೊತೆಗೆ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಜನರೇ ಮುಂದಾಬೇಕು. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ, ಟೆಸ್ಟಿಂಗ್ ಅವಶ್ಯಕ ಎಂದರು.
Published by:Seema R
First published: