ಮೈಸೂರು ಮೂಲದ ಲಿಂಗಾಂತರ ವ್ಯಕ್ತಿಗೆ ರಕ್ಷಣೆ ನೀಡಿ: ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್​ ಸೂಚನೆ

ಲಿಂಗಾಂತರಗೊಂಡ ನನ್ನನ್ನು ಪೋಷಕರು ಬಲವಂತವಾಗಿ ಮೈಸೂರಿಗೆ ಕರೆಸಿಕೊಳ್ಳುತ್ತಿದ್ದಾರೆ ಆದ ಕಾರಣ ಅವರಿಂದ ನನಗೆ ರಕ್ಷಣೆ ನೀಡಬೇಕು, ಅಲ್ಲದೇ ನನ್ನ ಪೋಷಕರು ನನ್ನ ಮೇಲೆ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಬಾಂಬೆ ಹೈಕೋರ್ಟ್​

ಬಾಂಬೆ ಹೈಕೋರ್ಟ್​

 • Share this:
  ಇಡೀ ದೇಶದ ಯಾವ ಭಾಗದಲ್ಲಾದರೂ ಈ ದೇಶದ ಪ್ರಜೆಗೆ ವಾಸಿಸುವ ಹಕ್ಕಿದೆ. ಅದರಂತೆ ಲಿಂಗಾಂತರ ವಾದ ವ್ಯಕ್ತಿಗಳಿಗೂ ದೇಶದ ಯಾವುದೇ ಭಾಗದಲ್ಲೂ ವಾಸಿಸುವ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್‌ ಶನಿವಾರ ತಿಳಿಸಿದೆ.

  ಮೈಸೂರು ಮೂಲದ ಲಿಂಗಾಂತರಿ ವ್ಯಕ್ತಿಯೊಬ್ಬರಿಗೆ ರಕ್ಷಣೆ ಒದಗಿಸುವ ಸಲುವಾಗಿ ಈ ತೀರ್ಪನ್ನು ಬಾಂಬೆ ಹೈಕೋರ್ಟ್​ ನೀಡಿದೆ. ಅಲ್ಲದೇ ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದು ಲಿಂಗಾಂತರ ವ್ಯಕ್ತಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಿದೆ.

  ಲಿಂಗಾಂತರಗೊಂಡ ನನ್ನನ್ನು ಪೋಷಕರು ಬಲವಂತವಾಗಿ ಮೈಸೂರಿಗೆ ಕರೆಸಿಕೊಳ್ಳುತ್ತಿದ್ದಾರೆ ಆದ ಕಾರಣ ಅವರಿಂದ ನನಗೆ ರಕ್ಷಣೆ ನೀಡಬೇಕು, ಅಲ್ಲದೇ ನನ್ನ ಪೋಷಕರು ನನ್ನ ಮೇಲೆ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು ವಕೀಲ ವಿಜಯ್​ ಹಿರೇಮಠ್​ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು.

  ಅರ್ಜಿದಾರ ಲಿಂಗಾಂತರಿ ವ್ಯಕ್ತಿ ಕಿರುಕುಳಕ್ಕೊಳಗಾಗದಂತೆ ಅಥವಾ ತನ್ನ ಇಚ್ಛೆಗೆ ವಿರುದ್ಧವಾಗಿ ಮುಂಬೈ ತೊರೆಯದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮದಾರ್‌ ಅವರಿದ್ದ ಪೀಠ ಪೊಲೀಸರಿಗೆ ನಿರ್ದೇಶನ ನೀಡಿತು.
  ಹುಟ್ಟಿನಿಂದ ಹೆಣ್ಣಾಗಿರುವ ವ್ಯಕ್ತಿಯು ತಮ್ಮನ್ನು ಪುರುಷನೆಂದು ಗುರುತಿಸಿಕೊಂಡಿದ್ದರು. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಹೊರಟಿದ್ದರಿಂದ ಅರ್ಜಿದಾರರು ತನ್ನ ಹೆತ್ತವರನ್ನು ತೊರೆದು ಮುಂಬೈಗೆ ಬಂದಿದ್ದರು. ಪೋಷಕರ ನೆರವು ದೊರೆಯುವುದಿಲ್ಲ ಎಂಬುದನ್ನು ಮನಗಂಡ ಅರ್ಜಿದಾರರು ನೃತ್ಯಪಟುವಾಗಿ ಜೀವನ ನಡೆಸಲು ಮುಂಬೈ ನಗರವನ್ನು ಆರಿಸಿಕೊಂಡಿದ್ದರು. ಬಳಿಕ ಮುಂಬೈನಲ್ಲಿರುವ ತನ್ನ ಸ್ನೇಹಿತರಿಗೆ ಅರ್ಜಿದಾರರ ಪೋಷಕರ ಕಡೆಯಿಂದ ಕರೆಗಳು ಬರಲಾರಂಭಿಸಿದವು ಹಾಗೂ ಮೈಸೂರು ಪೊಲೀಸ್‌ ಠಾಣೆಯಲ್ಲಿ ತಾನು ಕಾಣೆಯಾಗಿರುವ ಬಗ್ಗೆ ಪ್ರಕರಣದ ದಾಖಲಿಸಲಾಗಿದೆ ಎಂದು ಲಿಂಗಾತರ ವ್ಯಕ್ತಿ ತಿಳಿಸಿದ್ದರು.
  ಒಂದು ದಿನ ಅರ್ಜಿದಾರರ ಸ್ನೇಹಿತನೊಬ್ಬ ವರ್ಸೋವಾ ಕಡಲತೀರಕ್ಕೆ ತೆರಳುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ಅರ್ಜಿದಾರರ ತಂದೆ ಮೈಸೂರಿನ ಪೊಲೀಸ್‌ ಅಧಿಕಾರಿಗಳೊಂದಿಗೆ ತಮ್ಮನ್ನು ಕರೆಯದೊಯ್ಯಲು ಬಂದಿರುವುದು ತಿಳಿಯಿತು. ತಮಗೆ ಪೊಲೀಸರು ಯಾವುದೇ ತೊಂದರೆ ನೀಡುವುದಿಲ್ಲ, ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಚೇತರಿಸಿಕೊಂಡ ಬಳಿಕ ತಮ್ಮನ್ನು ಮರಳಿ ಮುಂಬೈಗೆ ಕಳುಹಿಸಲಾಗುವುದು ಎಂಬ ಭರವಸೆ ಬಳಿಕ ಅರ್ಜಿದಾರರು ಮೈಸೂರಿಗೆ ಮರಳಿದರು. ಆದರೆ ಅಲ್ಲಿ ಅವರು ಕುಟುಂಬಸ್ಥರು ಅರ್ಜಿದಾರರನ್ನು ಅವರ ಲಿಂಗತ್ವ ಗುರುತನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. ಅಲ್ಲದೆ ಅರ್ಜಿದಾರರ ಮೇಲೆ ಕೆಲ ರೀತಿಯ ಆಚರಣೆಗಳನ್ನು ಮಾಡಿದ ಪೋಷಕರು ಅವರನ್ನು ಕೆಲ ಕಾಲ ಮನೆಯಲ್ಲೇ ಬಂಧಿಸಿಟ್ಟರು. ಕಡೆಗೆ ಅರ್ಜಿದಾರರು ರಾಹಿ ಎಂಬ ಸರ್ಕಾರೇತರ ಸಂಸ್ಥೆಯ ಸಹಾಯದೊಂದಿಗೆ ಬೆಂಗಳೂರಿನಲ್ಲಿ ಸುರಕ್ಷಿತ ಸ್ಥಳವೊಂದರಲ್ಲಿ ಆಶ್ರಯಪಡೆದು ನಂತರ ಮುಂಬೈಗೆ ಮರಳಿದರು.

  ಅಲ್ಲಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಿಸಿದ ಲಿಂಗಾಂತರ ವ್ಯಕ್ತಿ ಕುಟುಂಬ ಅಥವಾ ಪೊಲೀಸರು ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಹುದು ಎಂಬ ಭಯ ಆತಂಕದಿಂದ ತಲೆಮರೆಸಿಕೊಂಡರು. ಅವರು ಅಲ್ಲಿ ಭಯದಲ್ಲಿಯೇ ಬದುಕುತ್ತಿದ್ದಾರೆ ಎಂದು ವಕೀಲ ಹಿರೇಮಠ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

  ಇದನ್ನೂ ಓದಿ: ಯುಪಿಯಲ್ಲಿ ಕನ್ವರ್ ಯಾತ್ರೆ ಇಲ್ಲ : ಸರ್ಕಾರದ ಮೇಲ್ಮನವಿಯ ನಂತರ ರದ್ದುಗೊಳಿಸಲು ಮುಂದಾದ ಒಕ್ಕೂಟಗಳು
  ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ ವಿ ಸಸ್ತೆ ಅವರು ವಾದ ಮಂಡಿಸಿ ಮೈಸೂರಿನಲ್ಲಿ ಕಾಣೆಯಾದ ವ್ಯಕ್ತಿ ಕುರಿತು ಮುಂಬೈ ಪೊಲೀಸರು ಮೈಸೂರು ಪೊಲೀಸರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  Published by:HR Ramesh
  First published: