ಶಾಸಕರಿಂದಾಗದ ಕೆಲಸವನ್ನು ಡಿಸಿ ಮಾಡ್ತಿದ್ದಾರೆ; ರೋಹಿಣಿ ಸಿಂಧೂರಿ ಪರ ಸಂಸದ ಪ್ರತಾಪ್ ಸಿಂಹ ಬ್ಯಾಟಿಂಗ್

ನಾಲ್ಕು ಶಾಸಕರು ಒಟ್ಟಾಗಿ ಡಿಸಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ‌ ಎದುರಿಸುತ್ತಿದ್ದೀರಾ? ನೀವು ಜನರ ಸಮಸ್ಯೆ ಬಗೆಹರಿಸಿದರೆ ಡಿಸಿ ಬಳಿ ಜನ ಯಾಕೆ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು? ನೀವು ಮಾಡಲು ಆಗದ ಕೆಲಸವನ್ನು ಡಿಸಿ‌ ರೋಹಿಣಿ ಸಿಂಧೂರಿ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

  • Share this:
ಮೈಸೂರು (ಡಿ. 2): ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಗಾಗ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದಷ್ಟೆ ಮೈಸೂರಿನ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ರೋಹಿಣಿ ಸಿಂಧೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ರೋಹಿಣಿ ಸಿಂಧೂರಿ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವಿನ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಯಾವ ಕ್ಷೇತ್ರವನ್ನೂ ಜನರು ಶಾಸಕರು ಹಾಗೂ ಸಂಸದರಿಗೆ ಬರೆದು ಕೊಟ್ಟಿರುವುದಿಲ್ಲ. ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಮೇಲೆ ನಾನು ಕೂಡ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೋ ನೋಡೋಣ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಸಿಎಂ ಬೆಂಬಲವಿದೆಯೆಂಬ ದುರಹಂಕಾರ ಬೇಡ, ನೀವು ಸರ್ವಾಧಿಕಾರಿಯಲ್ಲ; ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಮಂಜುನಾಥ್ ಕಿಡಿ

ನಾಲ್ಕು ಜನ ಶಾಸಕರು ಒಟ್ಟಾಗಿ ಡಿಸಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ‌ ಎದುರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವೂ ಜನರ ಸಮಸ್ಯೆ ಬಗೆಹರಿಸಿದರೆ ಡಿಸಿ ಬಳಿ ಜನ ಯಾಕೆ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು? ನೀವು ಮಾಡಲು ಆಗದ ಕೆಲಸವನ್ನು ಡಿಸಿ‌ ರೋಹಿಣಿ ಸಿಂಧೂರಿ ಮಾಡುತ್ತಿದ್ದಾರೆ. ಅವರಿಗೆ ಅವರ ಕೆಲಸ ಮಾಡಲು ಬಿಡಿ. ಮೊದಲು ಶಾಸಕರ ಹಕ್ಕು ಚ್ಯುತಿ ಕುರಿತು ಪುಸ್ತಕ ಓದಿಕೊಳ್ಳಿ. ಮೂರ್ನಾಲ್ಕು ಬಾರಿ ಶಾಸಕರು ಆದವರು ನೀವು. ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ವ? ಜನರ ಸಮಸ್ಯೆ ಕೇಳುವ ಸಭೆಯಲ್ಲಿ ನಿಮ್ಮನ್ನ ಗದ್ದುಗೆ ಮೇಲೆ‌ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ? ಡಿಸಿಗಳು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಆ ಕೆಲಸವನ್ನು ಡಿಸಿ ಮಾಡುತ್ತಿದ್ದಾರೆ. ಅವರಿಗೆ ಜನರ ಕೆಲಸ ಮಾಡಲು ಬಿಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಹುಣಸೂರು ಶಾಸಕ ಮಂಜುನಾಥ್ ಡಿಸಿ ರೋಹಿಣಿ ಸಿಂಧೂರಿಯವರನ್ನು ಮಹಾರಾಣಿ ಎಂದಿದ್ದು ತಪ್ಪು. ಆ ಮಾತನ್ನ ನಾನು ಸಭೆಯಲ್ಲೇ ವಿರೋಧಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ. ಮೈಸೂರು ರಾಜಮನೆತನಕ್ಕೆ ನಾವು ಬೆಲೆ ಕೊಡುವುದು ಅವರು ಮಾಡಿರುವ ಕೆಲಸಕ್ಕಾಗಿ. ಅದು ಬಿಟ್ಟು ಜಿಲ್ಲಾಧಿಕಾರಿಯೊಬ್ಬರ ಮಹಾರಾಣಿಗೆ ಹೋಲಿಕೆ ಮಾಡಿದ್ದು ತಪ್ಪು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಅಧಿಕಾರಿಗಳನ್ನು ಯಾವಾಗಲೂ ತುಚ್ಛವಾಗಿ ಕಾಣೋದು ಯಾಕೆ? ಅಧಿಕಾರಿಗಳೆಂದರೆ ನಿಮಗ್ಯಾಕೆ ಅಸಡ್ಡೆ? ಜಿಲ್ಲಾಧಿಕಾರಿಗೆ ಇರುವ ಅಧಿಕಾರ ನಮಗ್ಯಾರಿಗೂ ಇಲ್ಲ ಎಂಬುದು ಕಾಂಗ್ರೆಸ್​ನವರಿಗೆ ನೆನಪಿರಲಿ. ಜನಸ್ಪಂದನ ಕಾರ್ಯಕ್ರಮವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮವನ್ನು ನಿಲ್ಲಿಸೋ ಅಧಿಕಾರ ಇರೋದು ಕೂಡ ಜಿಲ್ಲಾಧಿಕಾರಿಗೆ ಮಾತ್ರ. ಹಾಗಾಗಿ ಸುಖಾಸುಮ್ಮನೆ ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಮಾತನಾಡಬೇಡಿ. ಅವರು ಮಾಡುವ ಒಳ್ಳೆ ಕೆಲಸಕ್ಕೆ ಬೆಂಬಲ ನೀಡಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
Published by:Sushma Chakre
First published: