HOME » NEWS » State » MYSORE ACTION WILL TAKEN AGAINST OFFICIALS IF REMDESIVIR IS SOLD IN BLACK SAYS HEALTH MINISTER K SUDHAKAR RHHSN

ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದರೆ ಅಧಿಕಾರಿಗಳ ವಿರುದ್ಧ ಕ್ರಮ: ಆರೋಗ್ಯ ಸಚಿವ ಡಾ. ಸುಧಾಕರ್

ಸರ್ಕಾರಕ್ಕೆ ಜೀವನಕ್ಕಿಂತ ಜೀವ ಮುಖ್ಯ ಎಂಬ ಚಿಂತನೆ ಇದೆ. ಕೂಲಿ ಕಾರ್ಮಿಕರು, ಕೃಷಿ ಚಟುವಟಿಕೆ, ಕೈಗಾರಿಕೆ, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಮಾಡಿಲ್ಲ. ಗುಂಪುಗೂಡುವುದನ್ನು ಹಾಗೂ ಸಾಂಕ್ರಾಮಿಕ ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

news18-kannada
Updated:April 22, 2021, 5:35 PM IST
ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದರೆ ಅಧಿಕಾರಿಗಳ ವಿರುದ್ಧ ಕ್ರಮ: ಆರೋಗ್ಯ ಸಚಿವ ಡಾ. ಸುಧಾಕರ್
ಡಾ.ಕೆ. ಸುಧಾಕರ್.
  • Share this:
ಮೈಸೂರು (ಏಪ್ರಿಲ್ 22): ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದರೆ ಡ್ರಗ್ಸ್ ಕಂಟ್ರೋಲರ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಅವರು ಹೇಳಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಔಷಧಿಗಳ ಕಾಳಸಂತೆ ಮಾರಾಟದ ಬಗ್ಗೆ ಬಿಗಿ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.

ಬೆಂಗಳೂರು ಮೆಡಿಕಲ್ ಕಾಲೇಜಿನಷ್ಟೇ ಮೈಸೂರು ಮೆಡಿಕಲ್ ಕಾಲೇಜು ಶಕ್ತವಾಗಿದೆ. ಕೆ.ಆರ್.ಆಸ್ಪತ್ರೆಯಲ್ಲಿ 2000 ಹಾಸಿಗೆಗಳಿದ್ದು, ಇಲ್ಲಿನ ಆಡಳಿತ ಇನ್ನೂ ಚುರುಕಾಗಬೇಕು. 2 ರಿಂದ 3 ದಿನಗಳಲ್ಲಿ ಕೋವಿಡ್ ಚಿಕಿತ್ಸೆಗೆ 1000 ಹಾಸಿಗೆ ವ್ಯವಸ್ಥೆ ಮಾಡಬೇಕು.  ಸೋಂಕಿತರನ್ನು ಬೇಗ ಗುರುತಿಸಿದರೆ ಚಿಕಿತ್ಸೆ ನೀಡಿದರೆ ಬೇಗ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತದಿಂದ ಉತ್ತಮ ಕೆಲಸ ಆಗಿದೆ. ಲಸಿಕೆಯನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗಿದೆ ಎಂದರು.

ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವವರ ಪರೀಕ್ಷೆ ಮಾಡಿದರೂ ಸಾಕು, ಕೋವಿಡ್ ಹರಡುವಿಕೆ ನಿಯಂತ್ರಿಸಬಹುದು. ಸುಮಾರು ಶೇ.95 ರಷ್ಟು ಸೋಂಕಿತರಿಗೆ ಆಸ್ಪತ್ರೆಗೆ ಸೇರಿಸುವುದೇ ಬೇಕಾಗಿಲ್ಲ. ಅವರಿಗೆ ಸೂಕ್ತ ಟೆಲಿಮೆಡಿಷನ್ ಮಾಡಿದರೆ ಮನೆಯಲ್ಲೇ ಗುಣಪಡಿಸಬಹುದಾಗಿದ್ದು, ಇದರ ಬಗ್ಗೆ ಆತಂಕ ಬೇಡ ಎಂದರು.  ರೆಮ್ಡಿಸಿವಿರ್ ಮತ್ತು ಆಕ್ಸಿಜನ್ ನಿರ್ವಹಣೆಗೆ ಪ್ರತ್ಯೇಕ ಹೆಲ್ಪ್‌ಲೈನ್ ಮಾಡುವಂತೆ ತಿಳಿಸಿದರು.

ಏಪ್ರಿಲ್ 1 ರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಿದೆ. ಪರೀಕ್ಷೆ, ಸಂಪರ್ಕ ಪತ್ತೆ, ಲಸಿಕೆ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ. ಈವರೆಗೆ 7 ಲಕ್ಷ ಜನರಿಗೆ ಲಸಿಕೆ ನೀಡಿದ್ದು, ಇನ್ನೂ ಹೆಚ್ಚಿನವರಿಗೆ ನೀಡಲು ಸೂಚಿಸಲಾಗಿದೆ. ಔಷಧ ಲಭ್ಯತೆ, ಆಕ್ಸಿಜನ್ ಕೊರತೆ ನೀಗಿಸಲು ಡ್ರಗ್ ಕಂಟ್ರೋಲರ್ ಕಚೇರಿಯಿಂದ ಸಹಾಯವಾಣಿ, ವಾರ್ ರೂಮ್ ನಿಂದ ಹಾಸಿಗೆ ಲಭ್ಯತೆ ಬಗ್ಗೆ ರಿಯಲ್ ಟೈಮ್ ಮಾಹಿತಿ, ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಕೋವಿಡ್ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ ಎಂದರು.

ಸರ್ಕಾರಕ್ಕೆ ಜೀವನಕ್ಕಿಂತ ಜೀವ ಮುಖ್ಯ ಎಂಬ ಚಿಂತನೆ ಇದೆ. ಕೂಲಿ ಕಾರ್ಮಿಕರು, ಕೃಷಿ ಚಟುವಟಿಕೆ, ಕೈಗಾರಿಕೆ, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಮಾಡಿಲ್ಲ. ಗುಂಪುಗೂಡುವುದನ್ನು ಹಾಗೂ ಸಾಂಕ್ರಾಮಿಕ ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಮರಣ ಪ್ರಮಾಣ ಶೇ.4 ರಷ್ಟಿದೆ. ಬಹುಪಾಲು ಮರಣಗಳು, ರೋಗಿಗಳು ತಡವಾಗಿ ಆಸ್ಪತ್ರೆಗೆ ಬಂದಿರುವುದರಿಂದ ಸಂಭವಿಸಿದೆ. ಹೃದಯ ಸಮಸ್ಯೆ ಮೊದಲಾದ ಬೇರೆ ಸಮಸ್ಯೆಗಳಿಂದಲೂ ಸಾವಾಗಿದೆ. ಸಾವಿನ ಆಡಿಟ್ ಮಾಡುತ್ತಿದ್ದು, ನಿಖರ ಕಾರಣದ ಬಗ್ಗೆ ವರದಿಯನ್ನು ಬಂದಿದೆ. ಮೈಸೂರಿನಲ್ಲಿ ಆರೋಗ್ಯ ಸೌಲಭ್ಯಗಳು ಉತ್ತಮವಾಗಿದ್ದು, ಮರಣ ಪ್ರಮಾಣ ನಿಯಂತ್ರಿಸಬೇಕಿದೆ ಎಂದರು.

ಇದನ್ನು ಓದಿ: ಆಕ್ಸಿಜನ್ ಬಿಕ್ಕಟ್ಟು ಸಂಬಂಧ ಪ್ರಧಾನಿ ಮೋದಿ ಸಭೆ; ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಪೂರೈಕೆಗೆ ಸೂಚನೆಮೈಸೂರು ಜಿಲ್ಲೆಯಲ್ಲಿ ಒಂದೆರಡು ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಡಿ ಇರಲಿಲ್ಲ. ಈಗ ಮತ್ತೆ ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ. ಇನ್ನು ಶೇ.50 ರಷ್ಟು ಹಾಸಿಗೆ ಕೋವಿಡ್‍ಗೆ ಮೀಸಲಿಡಲಾಗುತ್ತದೆ. ಆಸ್ಪತ್ರೆಗಳು ಕೊಡದಿದ್ದರೆ ಸರ್ಕಾರವೇ ಪಡೆಯಲಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಎಲ್. ನಾಗೇಂದ್ರ, ಅಶ್ವಿನ್ ಕುಮಾರ್, ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಮ್, ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್‌.ಪಿ. ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತಿ ಸಿ.ಇ.ಒ. ಎ.ಎಂ. ಯೋಗೀಶ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Published by: HR Ramesh
First published: April 22, 2021, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories