ಮೈಸೂರು: ಕಳೆದ ಒಂದುವರೆ ವರ್ಷದಿಂದ ಕೊರೊನಾ ಮಾಹಾಮಾರಿ ಮನುಕುಲವನ್ನ ಕಿತ್ತು ತಿನ್ನುತ್ತಿದೆ. ಜನಸಮೂಹ ಕನಸಲ್ಲೂ ಕೊರೊನಾ ಹೆಸರು ಕೇಳಿದರೆ ಬೆಚ್ಚಿ ಬೀಳ್ತಿದ್ದಾರೆ. ಕುಟುಂಬಸ್ಥರು ಕೂಡ ಸೋಂಕಿತರ ಹತ್ತಿರ ಬರುತ್ತಿಲ್ಲ. ಅದೆಷ್ಟೋ ಮಂದಿ ಹೆದರಿಕೆಯಿಂದಲೇ ಪ್ರಾಣ ಬಿಟ್ಟಿದ್ದಾರೆ. ಅಂತಹವರ ನಡುವೆ ಮೈಸೂರಿನ ಮಹಾ ಕುಟುಂಬವೊಂದು ಕೊರೊನಾ ಗೆದ್ದು ಎಲ್ಲರಿಗೂ ಧೈರ್ಯ ತುಂಬುತ್ತಿದ್ದಾರೆ. ಒಂದೇ ಕುಟುಂಬದ 17 ಮಂದಿ ಪಾಸಿಟಿವ್‌ನಿಂದ ನೆಗೆಟಿವ್ ಆಗಿ ಸಮಾಜಕ್ಕೆ ಪಾಸಿಟಿವ್ ನ್ಯೂಸ್ ಕೊಟ್ಟಿದ್ದಾರೆ.
ರೈತ ಕುಟುಂಬವೊಂದರ 17 ಮಂದಿ ಒಂದೇ ಬಾರಿಗೆ ಕೊರೊನಾ ಗೆದ್ದು ಬೀಗಿದ್ದಾರೆ. ಇಂತಹ ಭರವಸೆಯ ಬೆಳವಣಿಗೆ ನಡೆದಿರೋದು ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಡಗಲಪುರದಲ್ಲಿ. ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಸೋದರರ ಕುಟುಂಬ ಒಟ್ಟಿಗೆ ಕೊರೊನಾ ಗೆದ್ದು ಮಾದರಿಯಾಗಿದ್ದಾರೆ. ಬಡಗಲಪುರ ನಾಗೇಂದ್ರ ಸಹೋದರ ಲಿಂಗರಾಜೇಗೌಡರಿಗೆ ಮೊದಲು ಕೊರೊನಾ ವಕ್ಕರಿಸಿದೆ. ಈಗಾಗಿ ಏಪ್ರಿಲ್ 24ರಂದು ಅವಿಭಕ್ತ ಕುಟುಂಬದ ಸುಮಾರು 30 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು ಅದರಲ್ಲಿ 4 ವರ್ಷದ ಮಗು ಸೇರಿ 17 ಮಂದಿಗೆ ಒಂದೇ ಬಾರಿ ಕೊರೊನಾ ವಕ್ಕರಿಸಿತ್ತು. ನಂತರ ಎಲ್ಲರೂ ಹೋಂ ಐಸೋಲೇಷನ್ ಆಗಿ ಸರ್ಕಾರದ ನಿಯಮ ಪಾಲನೆ ಪಾಲಿಸಿ ಕೊರೊನಾ ಮಹಾಮಾರಿಯನ್ನು ಓಡಿಸಿದ್ದಾರೆ.
ಕುಟುಂಬಕ್ಕೆ ಹೆಮ್ಮಾರಿ ಕಾಡಿದರೂ ಯಾರೊಬ್ಬರು ಎದೆ ಗುಂದಿಲ್ಲ. ಬದಲಿಗೆ ಧೈರ್ಯವಾಗಿ ಕೊರೊನಾ ಎದರಿಸಿ ಎಲ್ಲರೂ ಹುಷಾರಾಗಿ ಬಂದಿದ್ದಾರೆ. ಸೋಂಕು ತಗುಲಿದ ತಕ್ಷಣ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು ಅತ್ಯಂತ ಜಾಗ್ರತೆ ವಹಿಸಿದ್ದಾರೆ. ಪ್ರತಿನಿತ್ಯ ವೈದ್ಯರ ಸಲಹೆ ಪಾಲಿಸುವುದರ ಜೊತೆಗೆ ಸಾಮಾಜಿಕ ಅಂತರವೂ ಸೇರಿ ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಪರಿಣಾಮವಾಗಿ ಯಾರೊಬ್ಬರೂ ಆಸ್ಪತ್ರೆಗೆ ತೆರಳದೆಯೇ ಮನೆಯಲ್ಲೇ ಇದ್ದು ಮಹಾ ಮಾರಿಯನ್ನು ಹೊರ ಹಾಕಿದ್ದಾರೆ.
ಇನ್ನು ತಮ್ಮ ಸೋದರ ಕುಟುಂಬದ ಬಗ್ಗೆ ಸ್ವತಹ ಬಡಗಲಪುರ ನಾಗೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಅನ್ನೋದು ಭಯದ ಕಾಯಿಲೆಯಾಗಿದೆ. ಇದನ್ನ ಆತ್ಮಸ್ತೈರ್ಯದಿಂದ ಎದುರಿಸಬೇಕಿದೆ. ಅಲ್ಲದೆ ನಮ್ಮ ಕುಟುಂಬದ ಎಲ್ಲ ಸದಸ್ಯರು ಸರ್ಕಾರದ ನಿಯಮ ಪಾಲಿಸಿ, ವೈದ್ಯರ ಸಲಹೆಗಳನ್ನ ಅನುಸರಿಸಿದ್ದಾರೆ. ಎಲ್ಲರು ಇದೆ ಮಾರ್ಗದಲ್ಲಿದ್ದರೆ ಧೈರ್ಯದಿಂದಲೇ ಕೊರೊನಾ ಗೆಲ್ಲಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ‘ಪಾಸಿಟಿವ್’ ಸುದ್ದಿ: ಪುಟ್ಟ ಕಂದಮ್ಮನ ಹೋರಾಟದ ಎದುರು ಮಂಡಿಯೂರಿದ ಕೊರೋನಾ..!
ಒಟ್ಟಾರೆ ಕೊರೊನಾಗೆ ಹೆದರಿ ಆತ್ಮಹತ್ಯೆಯನ್ನೇ ಮಾಡಿಕೊಳ್ಳುತ್ತಿರುವ ಇಂತಹ ಭಯದ ಪರಿಸ್ಥಿತಿಯಲ್ಲಿ ರೈತ ಕುಟುಂಬದ ಮನಸ್ಥೈರ್ಯ ಮೆಚ್ಚಲೇಬೇಕು. ಅಷ್ಟು ಮಾತ್ರವಲ್ಲ ಕೊರೊನಾಗೆ ಹೆದರದಂತೆ ಇದು ಒಂದು ಔಷಧಿಯ ರೂಪವಾಗಿದೆ. ಸಾಮಾನ್ಯವಾಗಿ ಹಳ್ಳಿಗರಿಗೆ ಆರೋಗ್ಯದ ಬಗ್ಗೆ ಅಷ್ಟಾಗಿ ಕಾಳಜಿ ಇರೋದಿಲ್ಲ ಅನ್ನೋ ಮಾತಿಗೆ ವಿರುದ್ಧವಾದ ವಾತಾವರಣ ಹೆಚ್.ಡಿ.ಕೋಟೆಯ ಬಡಗಲಪುರ ಈ ಘಟನೆಯಿಂದ ಸಾಬೀತಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಳ್ಳಿಗಳಲ್ಲೂ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೋಂ ಐಸೋಲೇಷನ್ ಅಲ್ಲಿ ಇದ್ದುಕೊಂಡೆ ಕೊರೊನಾ ಗೆಲ್ಲುವುದು ನಗರ ಪ್ರದೇಶಗಳ ಆಸ್ಪತ್ರೆ ಚಿಕಿತ್ಸೆಗಿಂತ ಉತ್ತಮವಾಗಿರಲಿದೆ. ವಾಕ್ಸಿನ್ ಪಡೆದು, ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ಮುಕ್ತವಾಗಿವವರು ನಾವು ಮಾಸ್ಕ್ ಧರಿಸುತ್ತೇವೆ ಎಂಬ ನಿರ್ಧಾರ ಮಾಡಿದ್ರೆ. ಎಂಥ ವೈರಸ್ ಆದ್ರೂ ಜನರಿಂದ ದೂರವೆ ಇರಲಿದೆ ಅನ್ನೋದು ಈ ಘಟನೆಯಿಂದ ಸಾಬೀತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ