ಬೆಂಗಳೂರು (ಮಾರ್ಚ್ 31); ಕಳೆದ ಒಂದು ತಿಂಗಳಿನಿಂದ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯದತ್ತ ಸಮೀಪಿಸಿದೆ. ಇಷ್ಟು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಸಂತ್ರಸ್ತ ಯುವತಿ ನಿನ್ನೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಯುವತಿ ತನ್ನ ಹೇಳಿಕೆಯಲ್ಲಿ "ಮಾಜಿ ಸಚಿವ ರಮೇಶ್ ಜಾರಕಿಹೊಳಿ ತನಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಕೆಲಸ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳನ್ನು ಬಳಸಿ ನಿಂಧನೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆಯೂ ಒಡ್ಡಿದ್ದರು" ಎಂದು ಹೇಳಿಕೆ ನೀಡಿದ್ದಾಳೆ. ಅಲ್ಲದೆ, ಇದಕ್ಕೆ ಪೂರಕ ಸಾಕ್ಷ್ಯಗಳನ್ನೂ ಒದಗಿಸಿದ್ದಾಳೆ. ಹೀಗಾಗಿ ಆರೋಪಿ ರಮೇಶ್ ಜಾರಕಿಹೊಳಿ ಯಾವಾಗ ಬೇಕಾದರೂ ಬಂಧನಕ್ಕೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ. ಆದರೆ, ಈ ನಡುವೆ ಕೋರ್ಟ್ ಮೆಟ್ಟಿಲೇರಿರುವ ಯುವತಿಯ ಪೋಷಕರು, "ನಮ್ಮ ಮಗಳು ಸ್ಚ ಇಚ್ಚೆಯಿಂದ ಹೇಳಿಕೆ ನೀಡಿಲ್ಲ. ಒತ್ತಡ ಮತ್ತು ಬಲವಂತದಿಂದ ಹೇಳಿಕೆ ಕೊಟ್ಟಿರೋ ಸಾಧ್ಯತೆ ಇದೆ. ಹೀಗಾಗಿ ಈ ಹೇಳಿಕೆಯನ್ನು ಪರಿಗಣಿಸಬೇಡಿ" ಎಂದು ಮನವಿ ಮಾಡಿದ್ದಾರೆ.
ಇಷ್ಟು ದಿನ ತಲೆ ಮರೆಸಿಕೊಂಡಿದ್ದ ಯುವತಿ ದಿನಕ್ಕೊಂದು ವಿಡಿಯೋ ಬಿಡುಗಡೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ತನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಳು. ಆದರೆ, ಆಗಿಂದಲೂ ಅವರ ಪೋಷಕರು ನಮ್ಮ ಮಗಳನ್ನು ಯಾರೋ ಅಪಹರಿಸಿದ್ದಾರೆ. ಅಪಹರಿಸಿ ಆಕೆಯಿಂದ ಹೀಗೆ ದೂರು ನೀಡಿದ್ದಾರೆ ಎಂದೇ ಆರೋಪಿಸುತ್ತಿದ್ದರು.
ಆದರೆ, ನಿನ್ನೆ ಸ್ವತಃ ಸಂತ್ರಸ್ತ ಯುವತಿಯೇ ಕೋರ್ಟ್ಗೆ ಹಾಜರಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿದ ನಂತರ ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿದ್ದ ಈ ಪ್ರಕರಣಕ್ಕೆ ಮತ್ತಷ್ಟೂ ತೂಕ ಬಂದಿದೆ. ಆದರೆ, ಇದರ ಬೆನ್ನಿಗೆ ಸಂತ್ರಸ್ತ ಯುವತಿಯ ಪೋಷಕರು ತಮ್ಮ ಮಗಳ ಹೇಳಿಕೆಯನ್ನು ಕೋರ್ಟ್ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಇಂದು ನ್ಯಾಯಾಲಯದ ಮೆಟ್ಟಿಲೇರಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆದರೆ, ಈ ಕುರಿತು ಮಾತನಾಡಿರುವ ಯುವತಿಯ ಪರ ವಕೀಲ ಸೂರ್ಯ ಮುಕುಂದರಾಜ್, "ನಿನ್ನೆ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾದಾಗ ನಾನು ಇದ್ದೆ. ಆಕೆಗೆ ಅನ್ಯಾಯ ಆಗಿರುವುದು ನಿಜ. ವಕೀಲನಾಗಿ ಪ್ರಾಮಾಣಿಕವಾಗಿ ನನ್ನ ಸೇವೆ ಬಯಸುವವರ ಪರ ವಕಾಲತ್ತು ವಹಿಸಿದ್ದೇನೆ. ವಕೀಲ ಜಗದೀಶ್ ನನ್ನ ಸಹಾಯ ಕೇಳಿದಾರೆ ಅವರಿಗೂ ನಾನು ಬೆಂಬಲವಾಗಿದ್ದೇನೆ. ಯುವತಿಯೂ ನನ್ನನ್ನು ಪ್ರಕರಣ ಮುನ್ನಡೆಸುವಂತೆ ಕೇಳಿದ್ದಾಳೆ ಆಕೆ ಏನು ಚಿಕ್ಕ ಮಗು ಅಲ್ಲ. ಬಿಜೆಪಿ ಆಕೆಯ ಪೋಷಕರ ದಾರಿ ತಪ್ಪಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ