Muthappa Rai: ದುಷ್ಮನಿಯನ್ನು ಕಂಡರೆ ಸಾಕು ಎಲ್ಲೆಂದರಲ್ಲಿ ಯಾವುದೇ ಯೋಜನೆ ಇಲ್ಲದೆ ಯುದ್ಧಕ್ಕೇ ಮುಂದಾಗುತ್ತಿದ್ದ ಬೆಂಗಳೂರು ಭೂಗತ ಲೋಕದಲ್ಲಿ, ಹುಲಿಯೊಂದನ್ನು ಭೇಟೆಯಾಡುವ ಮುನ್ನ ಎಷ್ಟು ತಯಾರಿ ನಡೆಸಬೇಕು? ಹೇಗೆ ಹೊಂಚು ಹಾಕಬೇಕು? ಎಂದು ಲೆಕ್ಕಾಚಾರ ಹಾಕುವ ಕಲೆಯನ್ನು ಕಲಿಸಿದ ಮೊದಲ ವ್ಯಕ್ತಿ ಮುತ್ತಪ್ಪ ರೈ
ಬೆಂಗಳೂರು ಭೂಗತ ಲೋಕದ ಮಾಸ್ಟರ್ ಮೈಂಡ್ ಮುತ್ತಪ್ಪ ರೈ ಮತ್ತು ಎಂ. ಪಿ. ಜಯರಾಜ್
ಅದು 1989 ನವೆಂಬರ್ 21. ಲಾಲ್ಬಾಗ್ನಿಂದ ಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದರ ತಿರುವಿನಲ್ಲಿ ಬೆಂಗಳೂರು ಭೂಗತ ಜಗತ್ತಿನ ಅನಭಿಕ್ಷಿಕ್ತ ದೊರೆಯೊಬ್ಬನ ಬರ್ಬರ ಹತ್ಯೆ ನಡೆದೇ ಹೋಗಿತ್ತು. ಇಡೀ ಬೆಂಗಳೂರನ್ನು ಕಾಡಿದ ಹೈ ಪ್ರೊಫೈಲ್ ಕಿಲ್ಲರ್ ಹಳೆಯ ಅಂಬಾಸಿಡರ್ ಕಾರಿನಲ್ಲಿ ರಕ್ತದ ಮಡುವಿನ ನಡುವೆ ಯಕಶ್ಚಿತ್ ಹೆಣವಾಗಿ ಮಲಗಿದ್ದ. ನೇರ ಕಣ್ಣಿಗೆ ಬಿದ್ದಿದ್ದ ಗುಂಡು ತಲೆಯನ್ನು ಸೀಳಿ ಹಾಕಿತ್ತು. ಅಲ್ಲಿಗೆ ಬೆಂಗಳೂರು ಭೂಗತ ಲೋಕದ ಕರಾಳ ಅಧ್ಯಾಯವೊಂದು ಮುಗಿದಿತ್ತು.
ಅಸಲಿಗೆ ಬೆಂಗಳೂರಿನಲ್ಲಿ ಬಂದೂಕಿನ ಗುಂಡಿಗೆ ಬಲಿಯಾದ ಮೊದಲ ಭೂಗತ ದೊರೆ ಎಂ.ಪಿ. ಜಯರಾಜ್ ಮತ್ತು ಆ ಗುಂಡು ಹಾರಿಸಿದ್ದು Master Mind ಮುತ್ತಪ್ಪ ರೈ ಅಲಿಯಾಸ್ ರೈ.
ದುಷ್ಮನಿಯನ್ನು ಕಂಡರೆ ಸಾಕು ಎಲ್ಲೆಂದರಲ್ಲಿ ಯಾವುದೇ ಯೋಜನೆ ಇಲ್ಲದೆ ಯುದ್ಧಕ್ಕೇ ಮುಂದಾಗುತ್ತಿದ್ದ ಬೆಂಗಳೂರು ಭೂಗತ ಲೋಕದಲ್ಲಿ, ಹುಲಿಯೊಂದನ್ನು ಭೇಟೆಯಾಡುವ ಮುನ್ನ ಎಷ್ಟು ತಯಾರಿ ನಡೆಸಬೇಕು? ಹೇಗೆ ಹೊಂಚು ಹಾಕಬೇಕು? ಎಂದು ಲೆಕ್ಕಾಚಾರ ಹಾಕುವ ಕಲೆಯನ್ನು ಕಲಿಸಿದ ಮೊದಲ ವ್ಯಕ್ತಿ ಮುತ್ತಪ್ಪ ರೈ. ಇದೇ ಕಾರಣಕ್ಕೆ ಆತನಿಗೆ Master Mind Killer ಎಂಬ ಹೆಸರು ಸಹ ಜೊತೆ ಜೊತೆ ಸೇರಿಕೊಂಡಿತ್ತು. ಆ ನಂತರ ನಡೆದದ್ದು ಮಾತ್ರ ಸಾಲು ಸಾಲು ಸರಣಿ ಕೊಲೆಗಳು.
ಅದಕ್ಕಿಂತ ಹಿಂದೆಯೂ ಸಹ ಎಂ.ಪಿ. ಜಯರಾಜ್ ಹತ್ಯೆಗೆ ಎರಡು ಬಾರಿ ಪ್ರಯತ್ನ ನಡೆದಿತ್ತು. ಜಯರಾಜ್ ಪಕ್ಕಾ ವಿರೋಧಿಗಳಾದ ಪುಷ್ಪಾ, ಶ್ರೀನಗರ ಕಿಟ್ಟಿ, ಬೆಕ್ಕಿನ ಕಣ್ಣು ರಾಜೇಂದ್ರ ಕೆ.ಆರ್. ಆಸ್ಪತ್ರೆ ಮತ್ತು ಪರಪ್ಪನ ಅಗ್ರಹಾರ ಜೈಲಿನ ಎದುರೇ ಎರಡು ಬಾರಿ ಹುಲಿ ಭೇಟೆಗೆ ಹೊಂಚು ಹಾಕಿದ್ದರು. ಆದರೆ, ಈ ಎರಡೂ ಭೇಟೆಯಲ್ಲಿ ತಪ್ಪಿಸಿಕೊಂಡಿದ್ದ ಹುಲಿ ಅಂದು ಅನಾಮತ್ತಾಗಿ ಗುಂಡಿಗೆ ಬಲಿಯಾಗಿತ್ತು.
70-80 ದಶಕದ ಬೆಂಗಳೂರು ಭೂಗತ ಲೋಕದ ಒಳ ಹೊರಗು ತಿಳಿದವರಿಗೆ ಈಗಲೂ ಮರೆಯಲು ಸಾಧ್ಯವಾಗದ ಹತ್ಯೆ ಎಂದರೆ ಡಾನ್ ಎಂ.ಪಿ. ಜಯರಾಜನ ಹತ್ಯೆ. ಬೆಂಗಳೂರಿನ ಭೂಗತ ಲೋಕಕ್ಕೆ ದುಬೈ ವರೆಗೆ ಲಿಂಕ್ ಕೊಡಿಸಿದ ಹತ್ಯೆ ಎಂದೇ ಈ ಹತ್ಯೆಯನ್ನು ಗುರುತಿಸಲಾಗುತ್ತದೆ. ಇದೇ ಕಾರಣಕ್ಕೆ ಬೆಂಗಳೂರಿನ ಭೂಗತ ಲೋಕವನ್ನು ಜಯರಾಜನ ಹತ್ಯೆಗೆ ಮುನ್ನ ಮತ್ತು ಹತ್ಯೆಯ ನಂತರ ಎಂದು ಗುರುತಿಸಲಾಗುತ್ತದೆ. ಇಂತಹ Hi Profile ಹತ್ಯೆಯೊಂದಿಗೆ ಭೂಗತ ಲೋಕದಲ್ಲಿ ಮುತ್ತಪ್ಪ ರೈ ಎಂಬ ಹೊಸ ಹೆಸರೊಂದು ಸದ್ದು ಮಾಡಲು ಶುರುವಿಟ್ಟಿತ್ತು. ಜಯರಾಜ್ ಮತ್ತು ರಾಮಚಂದ್ರ ಕೊತ್ವಾಲನ ಶಿಷ್ಯರನ್ನೂ ಸಹ ಈ ಹತ್ಯೆ ಅಕ್ಷರಶಃ ಬೆದರಿಸಿತ್ತು. ಈ ಹತ್ಯೆಯೊಂದಿಗೆ ಬೆಂಗಳೂರು ಭೂಗತ ಲೋಕ ಅನಾಮತ್ತಾಗಿ ಆಯಿಲ್ ಕುಮಾರನ ಕೈಸೇರಿತ್ತು. ಅವನಿಗೆ ಶಕ್ತಿಯಾಗಿ ನಿಂತದ್ದು ಮುತ್ತಪ್ಪ ರೈ.
ಅಸಲಿಗೆ ಅಂದು ಜಯರಾಜನ ಹತ್ಯೆ ನಡೆಯುತ್ತೆ, ಮುತ್ತಪ್ಪ ರೈ ಎಂಬ ಹೊಸ ಕಿಲ್ಲರ್ ಬೆಂಗಳೂರು ಭೂಗತ ಲೋಕದಲ್ಲಿ ಹೊಸ ತಾರೆಯಾಗಿ ಮೆರೆಯುತ್ತಾನೆ ಎಂಬುದು ಸ್ವತಃ ಪೊಲೀಸ್ ಇಲಾಖೆಗೂ ಗೊತ್ತಿಲ್ಲ. ಪೊಲೀಸರ ಸಹಾಯದೊಂದಿಗೆ ಜಯರಾಜನ ಹತ್ಯೆ ನಡೆದಿತ್ತು. ಭೂಗತ ಲೋಕದ ಅಧ್ಯಾಯವೊಂದು ಮುಗಿತ್ತು ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ?
ಹಾಗೇ ನೋಡಿದರೆ ಡಾನ್ ಜಯರಾಜನ ಹತ್ಯೆಗಾಗಿ ನಡೆದ ಯೋಜನೆಯೇ ಒಂದು ರೋಚಕ ಸ್ಟೋರಿ. ಇನ್ನೂ ಬೆಂಗಳೂರಿನ ರೌಡಿಗಳು ಶ್ರೀರಾಂ ಪುರದ ಗಲ್ಲಿಯಲ್ಲಿ ಜನಿಸಿ, ಮೆಜೆಸ್ಟಿಕ್ನಲ್ಲಿ ಬೆಳೆಯುತ್ತಾರೆ ಎಂಬ ಸಿದ್ದ ಸೂತ್ರವನ್ನು ಮುರಿದ ವ್ಯಕ್ತಿಯ ಹೆಸರು ಮುತ್ತಪ್ಪ ರೈ.
ಅಸಲಿಗೆ ಡಾನ್ ಜಯರಾಜನ ಕೊಲೆ ನಡೆದದ್ದು ಹೇಗೆ? ಕೊಲೆಗೆ ತಯಾರಿ-ಯೋಜನೆ ಹೇಗಿತ್ತು? ಯಾರೀ ಮುತ್ತಪ್ಪ ರೈ? ಬೆಂಗಳೂರು ಭೂಗತ ಲೋಕ ಅನಾಮತ್ತಾಗಿ ಈತನ ಕಾಲ ಕೆಳಗೆ ಬಂದದ್ದು ಹೇಗೆ? ದಾವೂದ್ ಇಬ್ರಾಹಿಂ ನಂಟು ಬೆಳದದ್ದು ಹೇಗೆ? ನೋಡೋಣ ಮುಂದಿನ ಸಂಚಿಕೆಯಲ್ಲಿ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ