ಉಡುಪಿ (ಡಿ.08): ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಡುಪಿಯಲ್ಲಿ (Udupi) ಆರಂಭವಾದ ವ್ಯಾಪಾರ ಬಹಿಷ್ಕಾರ, ಈ ವರ್ಷವೂ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ. ಉಡುಪಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎಂದು ಕರೆಸಿಕೊಳ್ಳುವ ಕುಂದಾಪುರದ ಕೊಡಿ ಹಬ್ಬದಲ್ಲೂ ಧರ್ಮ ದಂಗಲ್ (Dharma Dangal) ಶುರುವಾಗಿದೆ. 1 ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುತ್ತಾರೆ. ಆದರೆ ಅನ್ಯ ಧರ್ಮೀಯ (Religion) ವ್ಯಾಪಾರಿಗಳಿಗೆ ದೇವಸ್ಥಾನದ (Temple) ಆವರಣದಲ್ಲಿ ಅವಕಾಶ ನೀಡದ ಹಿನ್ನೆಲೆ ಧರ್ಮ ದಂಗಲ್ ಮುಂದುವರೆದಿದೆ .
ಕುಂದಾಪುರದ ಕೊಡಿ ಹಬ್ಬ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡಿ ಹಬ್ಬ ಅಂದ್ರೆ ಹಲವು ನಂಬಿಕೆಗಳ ಪ್ರತೀಕ. ಮದುವೆಯಾಗದವರಿಗೆ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ನವದಂಪತಿಗಳಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕೇಂದ್ರ. ಉತ್ತಮ ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರೋದ್ರಿಂದ ಇದನ್ನು ಕುಡಿ ಹಬ್ಬ ಅಂತಾನೂ ಕರೆಯಬಹುದು. ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗೋದು ಇಲ್ಲಿನ ಪದ್ಧತಿ. ಕಬ್ಬಿನ ಜಲ್ಲೆಯ ಕೊಡಿ ಕೊಂಡೊಯ್ಯುವುದರಿಂದಲೂ ಇದನ್ನು ಕೊಡಿ ಹಬ್ಬ ಎಂದು ಕರೆಯಲಾಗುತ್ತೆ.
ಕೋಟಿಲಿಂಗೇಶ್ವರ ದರ್ಶನಕ್ಕೆ ಬರ್ತಾರೆ ಭಕ್ತರು
ಇಲ್ಲಿನ ರಥೋತ್ಸವ ಅಂದ್ರೆ ಅದ್ದೂರಿತನಕ್ಕೆ ಇನ್ನೊಂದು ಹೆಸರಾಗಿದೆ. ಹೊಸದಾಗಿ ಮದುವೆಯಾದವರಿಗೆ ತಮ್ಮ ಸುಖ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ ದೇವ ಸನ್ನಿಧಿಯಲ್ಲಿ ದಾಂಪತ್ಯಗೀತೆ ಆರಂಭವಾದ್ರೆ ಪೂರ್ಣ ಜೀವನ ಸುಖವಾಗಿರುತ್ತೆ ಅನ್ನೋದು ಜನರ ವಿಶ್ವಾಸ. ಹಾಗಂತಲೇ ಸಾವಿರ ಸಾವಿರ ಮಂದಿ ಕುಂದಾಪುರದ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ.
ಏಳು ದಿನಗಳ ಕಾಲ ಜಾತ್ರೆ
ಕರಾವಳಿ- ಮಲೆನಾಡು ಭಾಗದ ಅತೀ ದೊಡ್ಡ ಜಾತ್ರೆ ಅಂದ್ರೆ ಕೊಡಿ ಹಬ್ಬ. ಏಳು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತೆ. ಹೊಸದಾಗಿ ಮದುವೆಯಾದ ದಂಪತಿಗಳು ಕೈ ಕೈಹಿಡಿದು ಬಂದು, ಮನದಲ್ಲಿ ನೂರು ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಬಂದು ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ. ಇಲ್ಲಿಂದ ಮುಂದೆ ಹೊಸ ಜೀವನ ಆರಂಭಿಸುತ್ತಾರೆ. ಉತ್ತಮ ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರೋದ್ರಿಂದ ಇದನ್ನು ಕುಡಿ ಹಬ್ಬ ಅಂತಾನೂ ಕರೆಯಬಹುದು.
ಗಾತ್ರದಲ್ಲಿ ಅತೀದೊಡ್ಡದೆನಿಸಿದ ಬ್ರಹ್ಮರಥವನ್ನು ಭಕ್ತರೆಲ್ಲಾ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ದೇವರು ಕೋಟಿ ಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾನೆ ಅನ್ನೋದು ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲಾ ಕಾಯ್ತಾರೆ. ಏಳು ದಿನದ ಜಾತ್ರೆಯಲ್ಲಿ ನಿತ್ಯವೂ ಬಂದು ಪಾಲ್ಗೊಂಡು ಸಂಭ್ರಮಿಸ್ತಾರೆ.
ಅದ್ದೂರಿ ಕೋಡಿ ಹಬ್ಬದಲ್ಲೂ ವ್ಯಾಪಾರ ಬಹಿಷ್ಕಾರ ಶುರು
ಉಡುಪಿಯಲ್ಲಿ ಹಿಜಾಬ್ ವಿವಾದ ಶುರುವಾದ ಮೇಲೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕಾಪು ಮಾರಿಪೂಜೆಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ಬಹಿಷ್ಕಾರ ಶುರುವಾಗಿ ಕೊನೆಗೆ ರಾಜ್ಯಾದ್ಯಂತ ಇದು ಧರ್ಮದಂಗಲ್ ಗೆ ಕಾರಣವಾಗುತ್ತೆ. ಧರ್ಮ ದಂಗಲ್ ಶುರುವಾದ ಉಡುಪಿಯಲ್ಲಿ ತಣ್ಣಗಾಗಿದ್ದ ವ್ಯಾಪಾರ ಬಹಿಷ್ಕಾರ ಇದೀಗ ಮತ್ತೆ ಶುರುವಾಗಿದೆ. ಅತೀ ದೊಡ್ಡ ಎರಡು ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ಬಹಿಷ್ಕಾರ ಹೇರಲಾಗಿದೆ.
ಇದನ್ನೂ ಓದಿ: Belagavi Dispute: ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಕನ್ನಡಿಗರನ್ನು ಕೆರಳಿಸಿದ ರಾಜ್ ಠಾಕ್ರೆ!
ಹಿಂದೂ ಜಾಗರಣ ವೇದಿಕೆ ದೇವಾಲಯದ ಆಡಳಿತ ಮಂಡಳಿಗೆ ಮನವಿ ಕೊಟ್ಟ ಹಿನ್ನಲೆ ಇದೀಗ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಕಾಪು ಕೋಡಿ ಹಬ್ಬ ಇಂದಿನಿಂದ ಒಂದು ವಾರ ನಡೆಯಲಿದ್ದು ಅನ್ಯಧರ್ಮೀಯ ವ್ಯಾಪಾರಿಗಳಿಗೆ ಕೋಟಿಲಿಂಗೇಶ್ವರ ದೇವಾಲಯದ ರಥಬೀದಿಯಿಂದ ಹೊರಗಿಡಲಾಗಿದೆ. ಸಧ್ಯ ಹಿಂದುಯೇತರ ವ್ಯಾಪಾರಿಗಳು ರಥಬೀದಿಯಿಂದ ಹೊರಗಾದರೂ ಅವಕಾಶ ನೀಡಿದ್ದಾರಲ್ಲ ಅಂತ ಸಮಾಧಾನ ಪಟ್ಟುಕೊಂಡಿದ್ದಾರೆ. ಇನ್ನು ಮಂದಾರ್ಥಿ ದುರ್ಗಾಪರಮೇಶ್ವರಿ ದೇವಾಲಯದಲ್ಲೂ ನಾಳೆಯಿಂದ ನಡೆಯುವ ಜಾತ್ರೆಯಲ್ಲೂ ವ್ಯಾಪಾರ ಬಹಿಷ್ಕಾರ ನಿರ್ಧರಿಸಲಾಗಿದ್ದು ಅಲ್ಲೂ ವ್ಯಾಪಾರಿಗಳು ಅದ್ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ