ಚಿಕ್ಕಮಗಳೂರು: ದತ್ತಪೀಠದಲ್ಲಿನ ಉರುಸ್ (Dattpeeta Urus) ವಿಚಾರವಾಗಿ ಮುಸ್ಲಿಂ ಸಮುದಾಯ (Muslim Community) ಮತ್ತೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ. ಉರುಸ್ ಮಾಡೋದು ಜಿಲ್ಲಾಡಳಿತವಲ್ಲ, ಮುಸ್ಲಿಂ ಸಮುದಾಯ. ನಾವು ದತ್ತಜಯಂತಿಗೆ (Datta Jayanti) ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ನಮ್ಮ ಉರುಸ್ಗೂ ಜಿಲ್ಲಾಡಳಿತ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ತಾಕೀತು ಮಾಡಿದೆ.
ಚುನಾವಣೆ ಸಂದರ್ಭದಲ್ಲಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಉರುಸ್ ಮಾಡಲು ಮುಂದಾಗಿದ್ದ ಶಾಸಕ ಸಿ.ಟಿ.ರವಿ ಅವರಿಗೆ ಶಾಕ್ ಎದುರಾಗಿದೆ. ಮಾರ್ಚ್ 8, 9, 10 ರಂದು ಉರುಸ್ ನಡೆಯಬೇಕಿದೆ. ಜಿಲ್ಲಾಡಳಿತ ನೇತೃತ್ವದ ಉರುಸ್ಗೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರವೇ ರಚಿಸಿದ ವ್ಯವಸ್ಥಾಪನ ಸಮಿತಿಯಲ್ಲಿನ ಏಕೈಕ ಮುಸ್ಲಿಂ ಅಲ್ಲಿ ನಮಾಜ್ (Namaz), ಫಾತಿಹಾ (Fatiha) ಏನನ್ನೂ ಮಾಡೋದಕ್ಕೆ ಬಿಡುತ್ತಿಲ್ಲ. ನಮಾಜ್ ಮತ್ತು ಫಾತಿಹಾ ಮಾಡಬೇಡಿ ಎಂದು ಹೇಳುತ್ತಿದ್ದಾನೆ. ನಮ್ಮ ಮುಸ್ಲಿಂ ಸಮಾಜ ಸರ್ಕಾರದ ವ್ಯವಸ್ಥಾಪನಾ ಸಮಿತಿಯನ್ನೂ ಒಪ್ಪಲ್ಲ. ಉರುಸ್ನಲ್ಲಿ ವ್ಯವಸ್ಥಾಪನ ಸಮಿತಿಯ ಮಧ್ಯಸ್ಥಿಕೆಯನ್ನೂ ಒಪ್ಪಲ್ಲ, ಜಿಲ್ಲಾಡಳಿತ ಉರುಸ್ ಮಾಡಿದ್ರೆ ನಾವ್ಯಾರು ಹೋಗಲ್ಲ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ.
ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮತ್ತೆ ದತ್ತಜಯಂತಿ ಹಾಗೂ ಉರುಸ್ ವಿವಾದ ಮುನ್ನೆಲೆಗೆ ಬಂದಿದೆ. ಇದೇ ಮಾರ್ಚ್ 8 ರಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತದಿಂದ ಉರುಸ್ ನಡೆಯಲಿದೆ. ಆದರೀಗ ಅದೇ ಉರುಸ್ ವಿವಾದ ಕಾರಣವಾಗಿದೆ.
ಮುಸ್ಲಿಂ ಸಮುದಾಯದ ಆಗ್ರಹವೇನು?
ಜಿಲ್ಲಾಡಳಿತದಿಂದ ಉರುಸ್ ನಡೆಸೋದಕ್ಕೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಉರುಸ್ ಮಾಡೋದು ಜಿಲ್ಲಾಡಳಿತವಲ್ಲ. ಮುಸ್ಲಿಂ ಸಮುದಾಯ. ಜಿಲ್ಲಾಡಳಿತ ಮಾಡಿದ್ರೆ ಹೇಗೆ? ನಮ್ಮ ಸಮುದಾಯದ ಪ್ರಕಾರ ಉರುಸ್ ನಡೆಯಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.
ಇಡೀ ಮುಸ್ಲಿಂ ಸಮುದಾಯ ಒಪ್ಪಬೇಕು. ಹಾಗೇ ಮಾಡ್ತೀರಾ? ನಮ್ಮ ಗುರುಗಳ ನೇತೃತ್ವದಲ್ಲಿ ನಡೆಯಬೇಕು. ಜಿಲ್ಲಾಡಳಿತ ಉಸ್ತುವಾರಿ ತೆಗೆದುಕೊಳ್ಳಬಹುದಷ್ಟೆ. ಉರುಸ್ ಮಾಡೋದಕ್ಕೆ ಆಗಲ್ಲ ಎಂದು ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ.
ಉರುಸ್ಗೆ ಮಸೀದಿ ತೆಗೆದುಕೊಡಲಿ
ದತ್ತಜಯಂತಿಗೆ ನಾವು ವಿರೋಧ ಮಾಡಿಲ್ಲ. ನಮ್ಮ ಕಾರ್ಯಕ್ರಮಕ್ಕೂ ಅವಕಾಶ ನೀಡಿ. ದರ್ಗಾ ಪಕ್ಕ ಮಸೀದಿ ಇದೆ. ನಮ್ಮ ಕಾರ್ಯಕ್ರಮಕ್ಕೆ ಅದನ್ನ ಓಪನ್ ಮಾಡಿಕೊಡಲಿ. ನಮಾಜ್ ಮಾಡಿ ನಾವು ಪೂಜೆಗೆ ಹೋಗ್ತೀವಿ. ಫಾತಿಹಾ ಮಾಡಬೇಕು. ಗೋರಿಗಳ ಮೇಲೆ ಬಟ್ಟೆ ಹಾಕೋದಕ್ಕೆ ಬಿಡುತ್ತಿಲ್ಲ. ವ್ಯವಸ್ಥಾಪನಾ ಸಮಿತಿಯಲ್ಲಿರುವ ಮುಸ್ಲಿಂ ಮುಸ್ಲಿಮನೇ ಅಲ್ಲ. ನಮ್ಮ ಸಮುದಾಯ ಒಪ್ಪಲ್ಲ ಎಂದು ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಸ್ಲಿಂ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಸಮಿತಿಯಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ
ದತ್ತಪೀಠದ ಆಡಳಿತಕ್ಕೆ ಸರ್ಕಾರ ರಚಿಸಿದ ಸಮನ್ವಯ ಸಮಿತಿ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸೋದನ್ನ ಇನ್ನೂ ನಿಲ್ಲಿಸಿಲ್ಲ. ಆ ಸಮಿತಿಯನ್ನ ನಮ್ಮ ಮುಸ್ಲಿಂ ಸಮುದಾಯ ಒಪ್ಪಲ್ಲ. ಆ ಸಮಿತಿಯಲ್ಲಿರೋ ಎಂಟು ಜನರಲ್ಲಿ ಏಳು ಜನ ಹಿಂದೂ ಒಬ್ಬನೇ ಒಬ್ಬ ಮುಸ್ಲಿಂ. ಆತ ಮುಸ್ಲಿಮನೇ ಅಲ್ಲ ಎಂದು ಆರೋಪಿಸಲಾಗುತ್ತಿದೆ.
ಸಮಿತಿಯಲ್ಲಿ ಇರುವ ಮುಸ್ಲಿಂ ವ್ಯಕ್ತಿ 2004ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ಅವನನ್ನ ನಮ್ಮ ಸಮುದಾಯ ಮುಸ್ಲಿಂ ಎಂದು ಒಪ್ಪಿಲ್ಲ. ಸರ್ಕಾರ ಭಾವೈಕ್ಯತೆ ನ್ಯಾಯ ಒದಗಿಸಬೇಕು ಅಂದ್ರೆ ಆ ಸಮಿತಿಯಲ್ಲಿ ನಾಲ್ಕು ಹಿಂದೂ ನಾಲ್ಕು ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ.
ಆತ ಅಲ್ಲಿ ಮುಸ್ಲಿಂ ಪದ್ಧತಿಗಳನ್ನ ಮಾಡೋದಕ್ಕೆ ಬಿಡುತ್ತಿಲ್ಲ. ನಮಾಜ್, ಫಾತಿಹಾ, ಲೋಬಾನ ಹಾಕೋದಕ್ಕೆ ಬಿಡುತ್ತಿಲ್ಲ. ಆತ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾನೆ ಎಂದು ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾಡಳಿತ ಹೇಳೋದೇನು?
ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಸರ್ಕಾರ ಆದೇಶದಂತೆ ಜಾಹಿರಾತು ನೀಡಿಯೇ ಮುಜರಾಯಿ ಆಯುಕ್ತರ ನೇತೃತ್ವದಲ್ಲೇ ಎಲ್ಲಾ ಪ್ರಕ್ರಿಯೆ ಮಾಡಿರೋದು. ನಿಮಗೆ ಅಸಮಾಧಾನ ಇದ್ದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.
ಇಷ್ಟು ದಿನ ದತ್ತಜಯಂತಿ-ಉರುಸ್ ಎರಡೂ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಆದರೀಗ, ಸರ್ಕಾರ ದತ್ತಪೀಠದ ಆಡಳಿತಕ್ಕೆ ಸಮನ್ವಯ ಸಮಿತಿ ರಚಿಸಿದ ಬಳಿಕ ದತ್ತಜಯಂತಿಯೂ ಬದಲಾಗಿತ್ತು.
ಈಗ ಮುಸ್ಲಿಮರು ನಮಗೂ ನಮ್ಮ ಪದ್ಧತಿಯಂತೆ ಉರುಸ್ ಮಾಡೋದಕ್ಕೆ ಅವಕಾಶ ನೀಡಿ ಅಂತಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಎಲ್ಲಾ ನಡೆದಿರೋದು, ನಡೆಯುತ್ತಿರೋದು ಸರ್ಕಾರದ ಆದೇಶದಂತೆ. ಮುಂದೆ ನಡೆಯೋದು ಅದೇ ರೀತಿ ಅಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ