Mushroom Farming: ಕ್ರೀಡಾ ಶಾಲೆ ವಿದ್ಯಾರ್ಥಿಗೆ ಕೃಷಿಯೇ ಖುಷಿಯಂತೆ! ಅಣಬೆ ಬೆಳೆಯುತ್ತಿದ್ದಾನೆ ಈ ಪೋರ

"ಇದೆಲ್ಲವೂ ನನ್ನ ಓದಿನ ಭಾಗವಾಗಿಯೇ ನಾನು ಮಾಡುತ್ತಿದ್ದೇನೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಸ್ನೇಹಿತರೆಲ್ಲರೂ ಕೇವಲ ಆಟ ಆಡುವುದರಲ್ಲಿಯೇ ಕಾಲ ಕಳೆದರು. ಆದರೆ ನನಗೆ ನನ್ನ ತಂದೆಯ ಕೃಷಿ ಕೆಲಸವನ್ನು ನೋಡಿ ಅವರೊಂದಿಗೆ ನಾನು ಏನಾದರೂ ಮಾಡಬೇಕೆಂದು ಚಿಂತಿಸಿ ಇವುಗಳನ್ನು ಸಾಕುತ್ತಿದ್ದೇನೆ" ಎನ್ನುವುದು ದಿಗಂತ್ ಅಭಿಪ್ರಾಯ.

ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಾಲಕ ದಿಗಂತ್

ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಾಲಕ ದಿಗಂತ್

  • Share this:
ಕೊಡಗು: ಈತ ಮಡಿಕೇರಿಯ (Madikeri) ಕ್ರೀಡಾ ಶಾಲೆಯ ವಿದ್ಯಾರ್ಥಿ (Sports School Student). ಹಾಕಿ (hockey) ಈತನ ವಿಶೇಷ ಆಸಕ್ತಿಯ ಕ್ರೀಡೆ (Game). ಆದರೆ ಕೋವಿಡ್ (Covid) ಕಾರಣದಿಂದ ಎರಡು ವರ್ಷ ಮನೆಯಲ್ಲಿಯೇ ಇದ್ದರಿಂದ ಅದೇಕೋ ಕೃಷಿಯ (agriculture) ಉಪಕಸುಬುಗಳ ಬಗ್ಗೆ ಒಲವು ಮೂಡಿತ್ತು. ಮಗನ ಆಸಕ್ತಿ ನೋಡಿದ್ದ ಪೋಷಕರು ಅದನ್ನು ಪ್ರೋತ್ಸಾಹಿಸಿದ್ದರು. ಹೀಗಾಗಿ ವಿದ್ಯಾರ್ಥಿ ಕೋಳಿ, ಮೇಕೆ ಮತ್ತು ಹಂದಿ ಸಾಕಾಣಿಕೆ ಜೊತೆಗೆ ಅಣಬೆ ಬೇಸಾಯವನ್ನೂ (Mushrooms Farming) ಮಾಡುತ್ತಿದ್ದಾನೆ. ಹೌದು ಇಂತಹ ವಿಶೇಷ ಆಸಕ್ತಿ ಮೂಲಕ ಓದಿನ ಜೊತೆಗೆ ಕೃಷಿ ಉಪಕಸುಬು ಮಾಡುತ್ತಿರುವುದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಮರಡಿಯೂರಿನ ದಿನೇಶ್ ಅವರ ಮಗ ದಿಗಂತ್.

ಕೃಷಿಯಲ್ಲೇ ಖುಷಿ ಕಂಡ 6ನೇ ತರಗತಿ ಬಾಲಕ

ಈ ವಿದ್ಯಾರ್ಥಿ ಈಗಷ್ಟೇ ಮಡಿಕೇರಿಯ ಕ್ರೀಡಾ ವಸತಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕೋಳಿ ಸಾಕಾಣಿಕೆಗೆ ಬಗ್ಗೆ ಆಸಕ್ತಿ ಮೂಡುತ್ತಿದ್ದಂತೆ ತಮ್ಮ ತಂದೆಯೊಂದಿಗೆ ಹೋಗಿ ಸಾಮಾನ್ಯ ನಾಟಿ ಕೋಳಿ ಜೊತೆಗೆ ಔಷಧೀಯ ಗುಣ ಹೊಂದಿದೆ ಎನ್ನಲಾಗುವ ಕಳಕನಾಥ, ಹಾಗೆ ಜೂಜಿಗೆ ಬಳಸುವಂತ ಫೈಟರ್ ಮತ್ತು ಟರ್ಕಿ ಕೋಳಿಗಳನ್ನು ಕೊಂಡು ತಂದು ಸಾಕುತ್ತಿದ್ದಾನೆ.

ಹುಡುಗ ಕರೆದರೆ ಓಡೋಡಿ ಬರುವ ಕೋಳಿಗಳು!

ತಮ್ಮ ಮನೆ ತೋಟದಲ್ಲಿಯೇ ಇರುವುದರಿಂದ ಜಮೀನಿನಲ್ಲಿ ಅವು ಮೇಯುತ್ತವೆ. ಆದರೂ ಅವುಗಳಿಗೆ ವಿಶೇಷ ಆಹಾರವನ್ನು ದಿನಕ್ಕೆ ಮೂರು ಬಾರಿ ಫೀಡ್ ಹಾಕುತ್ತಾನೆ. ವಿದ್ಯಾರ್ಥಿ ಅವುಗಳನ್ನು ಕರೆದರೆ ಸಾಕು, ತನ್ನ ಒಡೆಯ ಕೂಗುತ್ತಿದ್ದಾನೆ ಎಂದು ಆ ಕೋಳಿಗಳು ಓಡಿ ಬರುತ್ತವೆ. ಇನ್ನು ಫೈಟರ್ ಮತ್ತು ಕಳಕನಾಥ ಕೋಳಿಗಳು ಈಗಿನ್ನು ಆರು ತಿಂಗಳ ಪ್ರಾಯದವುಗಳಾಗಿದ್ದು, ಒಳ್ಳೆಯ ಬೆಳವಣಿಗೆ ಹೊಂದಿವೆ ಎನ್ನುತ್ತಾನೆ ವಿದ್ಯಾರ್ಥಿ ದಿಗಂತ್.

ಇದನ್ನೂ ಓದಿ: Summer Camp: ಕಾಡಿನಲ್ಲೊಂದು ವಿಶೇಷ ಬೇಸಿಗೆ ಶಿಬಿರ; ಕೋಟೆ-ಬೆಟ್ಟ ಏರಿ, ಕಾಡು ಹಣ್ಣು ತಿಂದು ಪುಟಾಣಿಗಳ ಸಂಭ್ರಮ

ಕುರಿ, ಹಂದಿಗಳ ಸಾಕಣೆಯಲ್ಲೂ ಅನುಭವ

ಇನ್ನು ಕೋಳಿಯಷ್ಟೇ ಅಲ್ಲ ಮೂರು ಮೇಕೆಗಳನ್ನು ಸಾಕಿದ್ದು ಅವುಗಳು ಈಗಾಗಲೇ ಮರಿ ಹಾಕಿವೆ. ಎರಡು ಹಂದಿಗಳನ್ನು ಸಾಕಿರುವ ವಿದ್ಯಾರ್ಥಿ ಅವುಗಳಿಗೆ ಆಹಾರ ಪೂರೈಸುವುದಕ್ಕೆ ತಂದೆಯ ಸಹಾಯ ಪಡೆದಿದ್ದಾನೆ. ಫಾರಂ ತಳಿಯ ಎರಡು ಹಂದಿಗಳನ್ನು ಸಾಕಿದ್ದು, ಅವುಗಳು ಸರಿಯಾಗಿ ಬೆಳೆದರೆ ಒಂದೊಂದು ಹಂದಿಯೂ ಕನಿಷ್ಠ 20 ರಿಂದ 25 ಸಾವಿರ ರೂಪಾಯಿ ಆದಾಯ ತಂದು ಕೊಡುತ್ತವೆ ಎನ್ನುತ್ತಾನೆ.

ಅಣಬೆ ಬೇಸಾಯದಲ್ಲೂ ಸೈ ಎನಿಸಿಕೊಂಡ ಬಾಲಕ!

ಇದರ ಜೊತೆಗೆ ಮನೆಯೊಳಗೆ ಅಣಬೆ ಬೇಸಾಯವನ್ನು ಮಾಡುತ್ತಿರುವ ವಿದ್ಯಾರ್ಥಿ ಮೊದಲು ಪ್ರಾಯೋಗಿಕವಾಗಿ ಒಂದು ಪ್ಯಾಕ್ ಅಣಬೆ ಬೀಜ ತಂದು ಪ್ಲಾಸ್ಟಿಕ್ ಕವರ್ ಗೆ ಭತ್ತದ ಹುಲ್ಲು ತುಂಬಿ ಅದರಲ್ಲಿ ಅಣಬೆ ಬೆಳೆದಿದ್ದನಂತೆ. ಅದು ಸಫಲವಾದ ಹಿನ್ನೆಲೆಯಲ್ಲಿ ಇದೀಗ ಹಲವು ಪ್ಯಾಕ್ ಗಳಲ್ಲಿ ಅಣಬೆ  ಬಿತ್ತನೆ ಮಾಡಿದ್ದಾನೆ. ಒಂದೊಂದು ಪ್ಯಾಕಿನಲ್ಲೂ ಕನಿಷ್ಠ ಐದರಿಂದ ಆರು ಕೆಜಿ ಅಣಬೆ ಬರುತ್ತದೆ. ಇದರಿಂದ ಕನಿಷ್ಠ ಒಂದುವರೆಯಿಂದ ಎರಡು ಸಾವಿರ ಆದಾಯ ಗಳಿಸುತ್ತೇನೆ ಎನ್ನುತ್ತಾನೆ ದಿಗಂತ್.

ಓದಿನ ಭಾಗವಾಗಿಯೇ ಕೃಷಿ ಕೆಲಸ

ಇದೆಲ್ಲವೂ ನನ್ನ ಓದಿನ ಭಾಗವಾಗಿಯೇ ನಾನು ಮಾಡುತ್ತಿದ್ದೇನೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಸ್ನೇಹಿತರೆಲ್ಲರೂ ಕೇವಲ ಆಟ ಆಡುವುದರಲ್ಲಿಯೇ ಕಾಲ ಕಳೆದರು. ಆದರೆ ನನಗೆ ನನ್ನ ತಂದೆಯ ಕೃಷಿ ಕೆಲಸವನ್ನು ನೋಡಿ ಅವರೊಂದಿಗೆ ನಾನು ಏನಾದರೂ ಮಾಡಬೇಕೆಂದು ಚಿಂತಿಸಿ ಇವುಗಳನ್ನು ಸಾಕುತ್ತಿದ್ದೇನೆ ಎನ್ನೋದು ದಿಗಂತ್ ಅಭಿಪ್ರಾಯ.

ಇದನ್ನೂ ಓದಿ: Karwar: ಕಡಲ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ! ನೋಡುಗರಿಗೆ ಭರಪೂರ ಮನರಂಜನೆ

ಮಗನ ಬಗ್ಗೆ ತಂದೆಗೆ ಹೆಮ್ಮೆ

ಇನ್ನು ಈ ಕುರಿತು ಮಾತನಾಡಿರುವ ದಿಗಂತ್ ತಂದೆ ದಿನೇಶ್, ಅವನು ತನ್ನ ಆಸಕ್ತಿಯನ್ನು ನನ್ನ ಬಳಿ ಹೇಳಿಕೊಂಡ. ಹಾಗಾಗಿ ನಾನು ಅದಕ್ಕೆ ಪ್ರೋತ್ಸಾಹ ನೀಡಿದೆ. ಈಗ ಎಲ್ಲವನ್ನು ಅಚ್ಚುಕಟ್ಟಾಗಿಯೇ ಮಾಡುತ್ತಿದ್ದಾನೆ. ಮಗನ ಆಸಕ್ತಿ ನಮಗೂ ಖುಷಿ ತಂದಿದೆ ಎನ್ನುತ್ತಾರೆ. ಸದ್ಯ ಶಾಲೆಗೆ ರಜೆ ಇರುವ ಕಾರಣ ಮನೆಯಲ್ಲಿಯೇ ಇರುವ ವಿದ್ಯಾರ್ಥಿ ಶಾಲೆಗೆ ಹೋದ ಬಳಿಕ ಅವುಗಳನ್ನು ನಾವೇ ನೋಡಿಕೊಳ್ಳಬೇಕು ಎನ್ನುತ್ತಿದ್ದಾರೆ ದಿನೇಶ್.
Published by:Annappa Achari
First published: