ಮೂರು ಸಾವಿರ ಮಠದಲ್ಲಿ ಉತ್ತರಾಧಿಕಾರಿ ನೇಮಕ ಕಗ್ಗಂಟು- ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನಿರಾಕರಿಸಿದ ಮೂಜಗು ಸ್ವಾಮೀಜಿ

ದಿಂಗಾಲೇಶ್ವರ ಸ್ವಾಮೀಜಿ ಫೆಬ್ರುವರಿ 23ರಂದು ಕರೆದಿರುವ ಬಹಿರಂಗ ಸತ್ಯದರ್ಶನ ಸಭೆ ಈಗಾಗಲೆ ಸಂಚಲನವನ್ನು ಸೃಷ್ಟಿಸಿದೆ. ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಇಬ್ಬಾಗ ಸೃಷ್ಟಿಸಿದೆ

news18-kannada
Updated:February 20, 2020, 9:59 PM IST
ಮೂರು ಸಾವಿರ ಮಠದಲ್ಲಿ ಉತ್ತರಾಧಿಕಾರಿ ನೇಮಕ ಕಗ್ಗಂಟು- ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನಿರಾಕರಿಸಿದ ಮೂಜಗು ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ
  • Share this:
ಹುಬ್ಬಳ್ಳಿ(ಫೆ.20) : ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಚಾರ ದಿನಕ್ಕೊಂದು ಹೈಡ್ರಾಮಾ ಸೃಷ್ಟಿಸುತ್ತಿದೆ. ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿಯನ್ನು ಭೇಟಿಯಾಗಲು ಬಂದಿದ್ದ ದಿಂಗಾಲೇಶ್ವರ ಸ್ವಾಮೀಜಿಯನ್ನು ಮಠದಿಂದ ವಾಪಸ್‌ ಕಳಿಸಲಾಗಿದೆ. ತನ್ನ ಉತ್ತರಾಧಿಕಾರಿ ಎಂದು ದಿಂಗಾಲೇಶ್ವರರನ್ನು ನೇಮಿಸಿದ್ದ ಮೂಜಗು ಸ್ವಾಮೀಜಿಗಳು ಶಿಷ್ಯನ ಭೇಟಿಗೆ ನಿರಾಕರಿಸಿದ್ದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಲಿಂಗಾಯತ ಮಠದಲ್ಲಿ ಇವತ್ತು ಹೈಡ್ರಾಮಾ ಸೃಷ್ಟಿಯಾಗಿತ್ತು. ಹಾಲಿ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ದಿಂಗಾಲೇಶ್ವರ ಸ್ವಾಮೀಜಿಗಳು ಮಠಕ್ಕೆ ಬಂದಿದ್ದರು. ಆದರೆ ದಿಂಗಾಲೇಶ್ವರರ ಭೇಟಿಗೆ ಮೂಜಗು ನಿರಾಕರಿಸಿದರು. ಹೀಗಾಗಿ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮಠದ ಬಾಗಿಲಿಗೆ ನಿಂತಿದ್ದ ಪೊಲೀಸರು ದಿಂಗಾಲೇಶ್ವರ ಸ್ವಾಮೀಜಿಗಳನ್ನು ಮಠ ಪ್ರವೇಶಿಸದಂತೆ ತಡೆದರು. ಹೀಗಾಗಿ ದಿಂಗಾಲೇಶ್ವರರು ಮಠದ ಆವರಣದಲ್ಲಿ ನೆಲದ ಮೇಲೆ ಕುಳಿತಿರಬೇಕಾಯಿತು.

ಮೂಜಗು‌ ಸ್ವಾಮೀಜಿ ಭೇಟಿ ಆಗುವವರೆಗೆ ಮಠದಿಂದ ಹೋಗಲ್ಲಾ ಎಂದು ದಿಂಗಾಲೇಶ್ವರ ಸ್ವಾಮೀಜಿ ಪಟ್ಟು ಹಿಡಿದಿದ್ದರು. ಈ ವೇಳೆ ಮಠದ ದಾಸೋಹ ಸಮಿತಿ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟರ್ ಬಂದು ದಿಂಗಾಲೇಶ್ವರ ಸ್ವಾಮೀಜಿಗಳ ಬಳಿ ಮಾತುಕತೆ ನಡೆಸಿದರು. ಮೂಜಗು ಸ್ವಾಮೀಜಿ ಭೇಟಿಗೆ ಒಪ್ಪುತ್ತಿಲ್ಲ. ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸುತ್ತಾರೆ ಎಂದು ಸಂದೇಶ ನೀಡಿದರು. ಇದರಿಂದ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುರುಗಳ ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಮೂಜಗು ಸ್ವಾಮೀಜಿಗಳನ್ನು ಮುಚ್ಚಿಡುವ ಕೆಲಸ ನಡೆಯುತ್ತಿದೆ. ಮಠದಲ್ಲಿ ರಾಜಕೀಯ ಬರಬಾರದು. ಫೆಬ್ರುವರಿ 23ರಂದು ಶಾಂತಿಯುತ ಸಭೆ ನಡೆಸುತ್ತೇವೆ. ಈ ಕುರಿತು ಗುರುಗಳಿಗೆ ಮಾಹಿತಿ ಕೊಡಲು ಬಂದಿದ್ದೆ. ಮೂಜಗು ಸ್ವಾಮೀಜಿ ಭೇಟಿಯಾಗದಿರುವುದು ತೀರ ಬೇಸರದ ವಿಚಾರ ಎಂದು ಕಿಡಿಕಾರಿದರು. ತಂದಿದ್ದ ಮಾಲೆ ಮತ್ತು ಶಾಲನ್ನು ಭಕ್ತರ ಕೈಗೆ ಕೊಟ್ಟರು. ಮನವಿ ಪತ್ರವನ್ನು ಗುರುಸಿದ್ದೇಶ್ವರರ ಗದ್ದುಗೆಯ ಮೇಲಿಟ್ಟು ಮಠದಿಂದ ನಿರ್ಗಮಿಸಿದರು.

ದಿಂಗಾಲೇಶ್ವರ ಸ್ವಾಮೀಜಿ ಫೆಬ್ರುವರಿ 23ರಂದು ಕರೆದಿರುವ ಬಹಿರಂಗ ಸತ್ಯದರ್ಶನ ಸಭೆ ಈಗಾಗಲೆ ಸಂಚಲನವನ್ನು ಸೃಷ್ಟಿಸಿದೆ. ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಇಬ್ಬಾಗ ಸೃಷ್ಟಿಸಿದೆ. ದಿಂಗಾಲೇಶ್ವರರ ವಿರೋಧಿ ಬಣ ಸತ್ಯದರ್ಶನ ಸಭೆಯನ್ನು ರದ್ದುಪಡಿಸಲು ಎಲ್ಲಾ ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ :  ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದ: ದಿಂಗಾಲೇಶ್ವರ ಸ್ವಾಮೀಜಿ ಪರ ನಿಂತ ವಿಜಯ ಸಂಕೇಶ್ವರ

ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಲು ಶಂಕ್ರಣ್ಣ ಮುನವಳ್ಳಿ ಮತ್ತು ಮೊಹನ್‌ ಲಿಂಬಿಕಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಂಕ್ರಣ್ಣ ಮುನವಳ್ಳಿಯವರು ಮೂಜಗು ಸ್ವಾಮೀಜಿಗಳನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ನಾಳೆ ಉನ್ನತ ಮಟ್ಟದ ಸಮಿತಿ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದವರು ಹೇಳಿದ್ದಾರೆ.ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿ ಮಾಡಿರುವುದಾಗಿ 2014ರಲ್ಲಿ ಮೂಜಗು ಸ್ವಾಮೀಜಿಗಳು ಘೋಷಿಸಿದ್ದರು. ಘೋಷಣಾ ಪತ್ರದಲ್ಲಿ 52 ಜನ ಗಣ್ಯರ ಸಹಿಗಳಿವೆ. ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಿದ್ದು ನಿಜ ಎಂದು ಮೂಜಗು ಸ್ವಾಮೀಜಿಗಳೇ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ. ಆದರೆ ಈಗ ದಿಂಗಾಲೇಶ್ವರರ ಭೇಟಿಗೆ ನಿರಾಕರಿಸುವ ಮೂಲಕ ದ್ವಂದ್ವ ನಿಲುವು ಪ್ರಕಟಿಸಿದ್ದಾರೆ. ಇದು ವಿವಾದ ಮತ್ತಷ್ಟು ಕಾವೇರುವಂತೆ ಮಾಡಿದೆ. ಇದು ಫೆಬ್ರುವರಿ 23ರ ಸತ್ಯದರ್ಶನ ಸಭೆಯ ಕುರಿತ ಕುತೂಹಲವನ್ನು ಹೆಚ್ಚಿಸಿದೆ.
First published: February 20, 2020, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading