• Home
  • »
  • News
  • »
  • state
  • »
  • Murugha Mutt: ಹುಡುಗಿಯರನ್ನು ಕಳುಹಿಸಲು ಚೀಟಿ, ಚಾಕು ತೋರಿಸಿ ಬಟ್ಟೆ ಬಿಚ್ಚಿಸುತ್ತಿದ್ದ ಸ್ವಾಮೀಜಿ: ಚಾರ್ಜ್ ಶೀಟ್​ನಲ್ಲಿ ಕೊಲೆ ಸೇರಿ ಹಲವು ಗಂಭೀರ ಆರೋಪ

Murugha Mutt: ಹುಡುಗಿಯರನ್ನು ಕಳುಹಿಸಲು ಚೀಟಿ, ಚಾಕು ತೋರಿಸಿ ಬಟ್ಟೆ ಬಿಚ್ಚಿಸುತ್ತಿದ್ದ ಸ್ವಾಮೀಜಿ: ಚಾರ್ಜ್ ಶೀಟ್​ನಲ್ಲಿ ಕೊಲೆ ಸೇರಿ ಹಲವು ಗಂಭೀರ ಆರೋಪ

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ

Murugha Mutt Rape Case: ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು(ನ.10):  ಮುರುಘಾ ಮಠ (Murugha Mutt)  ಸ್ವಾಮೀಜಿಗಳ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ (POCSO Act) ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 694 ಪುಟಗಳ ಚಾರ್ಜ್ ಶೀಟ್​ನಲ್ಲಿ ಮಠದಲ್ಲಿ ನಡೆಯುತ್ತಿರುವ ಹಲವು ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ಸಂತ್ರಸ್ತ ಬಾಲಕಿಯರ ಗಂಭೀರ ಆರೋಪಗಳೂ ಇಲ್ಲಿ ದಾಖಲಾಗಿವೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ (DySP Anil) ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


ಇನ್ನು ಪ್ರಕರಣದ ಸ್ಥಳ ಮಹಜರು ವೇಳೆ 2 ಮೊಬೈಲ್, 4 ಜತೆ ಕಪನಿ, 10 ಲಂಗೋಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕೆಲ‌ ವರದಿ ಸಲ್ಲಿಕೆ ಮಾಡಿದ್ದು, ಇನ್ನೂ ಕೆಲ ವೈದ್ಯಕೀಯ ವರದಿ ಬಾಕಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಸ್ಟೆಲ್​ನ ಇತರೆ 16 ಬಾಲಕಿಯರಿಂದ ಹೇಳಿಕೆ ದಾಖಲು ಮಾಡಲಾಗಿದೆ. ಈ ವೇಳೆ ವಿದ್ಯಾರ್ಥಿನಿಯರು ಮಠದಲ್ಲಿ ನಮ್ಮ ಮೇಲೆ ದೌರ್ಜನ್ಯ ಆಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಚಾರ್ಜ್​ಶೀಟ್​ನಲ್ಲಿ ಏನೇನು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್


16 ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆ ಏನು?


ಚಾರ್ಜ್ ಶೀಟ್​ನಲ್ಲಿ 16ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲೂ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಸಂತ್ರಸ್ತ ಬಾಲಕಿ ನಾನು 7ನೇ ತರಗತಿಯಲ್ಲಿದ್ದಾಗ ಹುಷಾರಿರಲಿಲ್ಲ. ಆಗ ವಾರ್ಡನ್ ರಶ್ಮಿ ಶರಣರ ಬಳಿಗೆ ಹೋಗಲು ಸೂಚಿಸಿದರು. ಹಣ್ಣು ಕೊಡುತ್ತಾರೆಂದು ಶರಣರ ರೂಮಿಗೆ ಕರೆದೊಯ್ದರು. ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗಿ ರೂಮಿಗೆ ಕಳಿಸಿದರು. ಶರಣರು ಕುಡಿಯುತ್ತ ಕುಳಿತಿದ್ದರು, ಹಣ್ಣು ಕೊಟ್ಟರು. ಹಣ್ಣು ತಿಂದ ನಂತರ ತಲೆ ಸುತ್ತು ಬಂದಂತಾಯಿತು. ಎಚ್ಚರ ಆದಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಬಟ್ಟೆ ಹಾಕಿಕೊಂಡು ನಾನು ಹಾಸ್ಟೆಲ್ ಗೆ ಬಂದೆ ಎಂದು ಆರೋಪಿಸಿದ್ದಾರೆ.


ಮೂರು ತಿಂಗಳ ಬಳಿಕ ಮತ್ತೆ ಕರೆದ ಸ್ವಾಮೀಜಿ


3 ತಿಂಗಳ ಬಳಿಕ ಸ್ವಾಮೀಜಿ ಕರೆಯುತ್ತಿದ್ದಾರೆಂದು ರಶ್ಮಿ ಮತ್ತೆ ಕರೆದೊಯ್ದರು. ರೂಮಿಗೆ ಹೋದಾಕ್ಷಣ ನೀನು ಯಾರಿಗಾದರು ಹೇಳಿದ್ದೀಯಾ ಎಂದು ಕೇಳಿದರು‌. ನಂತರ ಸ್ನಾನಕ್ಕೆ ಹೋಗಿ ಬೆನ್ನು ಉಜ್ಜಲು ಕರೆದರು. ನನಗೂ ಬಟ್ಟೆ ಬಿಚ್ಚಲು ಹೇಳಿದರು, ಬೇಡವೆಂದು ಕಾಲು ಹಿಡಿದೆ. ಸ್ವಾಮೀಜಿ ಆಗ ನನಗೆ ಚಾಕು ತೋರಿಸಿ ಬೆದರಿಸಿದರು. ನಾನು 9ನೇ ತರಗತಿಯಲ್ಲಿದ್ದಾಗ ಮತ್ತೆ ಶರಣರ ರೂಂಗೆ ಹೋಗಲು ರಶ್ಮಿ ಹೇಳಿದರು. ರೂಮಿಗೆ ಹೋದಾಗ ಬಲವಂತದಿಂದ ಚಾಕೋಲೇಟ್ ನೀಡಿದರು. ಚಾಕೊಲೇಟ್ ತಿಂದ ಬಳಿಕ ತಲೆ‌ಸುತ್ತು ಬಂತು, ನಂತರ‌ ಏನಾಯಿತು ಗೊತ್ತಿಲ್ಲ ಎಂದಿದ್ದಾಳೆ.


ಒಂದನೇ ತರಗತಿ ಮಗುವಿಗೆ ರಕ್ತ ಬರುವಂತೆ ಹೊಡೆದಿದ್ದ ರಶ್ಮಿ


ರಶ್ಮಿ ಬಗ್ಗೆಯೂ ಸಂತ್ರಸ್ತ ಬಾಲಕಿ ಆರೋಪಗಳನ್ನು ಮಾಡಿದ್ದು, ಒಬ್ಬರು ತಪ್ಪು ಮಾಡಿದರೂ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಒಂದನೇ ಕ್ಲಾಸಿನ ಹುಡುಗಿಗೆ ರಕ್ತ ಬರುವಂತೆ ಹೊಡೆದಿದ್ದರು. ಅಪ್ಪನಿಗೆ ಕರೆ ಮಾಡಿದಾಗ ಯಾವುದೊ ಹುಡುಗನಿಗೆ ಕರೆ ಮಾಡಿದ್ದೀಯಾ ಎಂದು ರಶ್ಮಿ ಕೆಟ್ಟದ್ದಾಗಿ ಬಯ್ದರು. ನನ್ನ ಸಹಪಾಠಿಗೆ ಹೇಳಿದಾಗ ಇಬ್ಬರೂ ಹಾಸ್ಟೆಲ್ ಬಿಡಲು ನಿರ್ಧರಿಸಿದೆವು. 24/07/2022ರಂದು ಬೆಂಗಳೂರಿಗೆ ತೆರಳಿದೆವು. ಆಟೋ ಡ್ರೈವರ್ ಒಬ್ಬರು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಸೌಭಾಗ್ಯ ಬಸವರಾಜನ್ ನಮ್ಮನ್ನು ಮರಳಿ ಕರೆತಂದರು. ನಮ್ಮ ತಂದೆ ತಾಯಿ ಅವರನ್ನು ಸೌಭಾಗ್ಯ ಮನೆಗೆ ಕರೆಸಿದರು. ಸೌಭಾಗ್ಯ ಅವರ ಮನೆಯಲ್ಲಿ ಇರುತ್ತೇನೆಂದು ಹೇಳಿದೆ. ಕೆಲ ದಿನ ನಾವಿಬ್ಬರೂ ಸೌಭಾಗ್ಯ ಮನೆ & ಕೆಲ ದಿನ ನಮ್ಮ ಮನೆಯಲ್ಲಿದ್ದೆವು. ಸ್ವಾಮೀಜಿಯಿಂದ ಅತ್ಯಾಚಾರದ ವಿಚಾರ ಸೌಭಾಗ್ಯ ಅವರ ಬಳಿ ಹೇಳಿಕೊಂಡೆವು. 26/0/2022ರಂದು ಸೌಭಾಗ್ಯ ಅವರು ಮೈಸೂರಿಗೆ ಕರೆದೊಯ್ದರು. ನಜರಾಬಾದ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಿದೆವು ಎಂದಿದ್ದಾರೆ.


Four year old girl baby found in murugha mutt chitradurga mrq
ಮುರುಘಾ ಮಠ


ಗಂಭೀರ ಆರೋಪ ಮಾಡಿದ 15 ವರ್ಷದ ಸಂತ್ರಸ್ತ ಬಾಲಕಿ


15 ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲಿ ಗಂಭೀರ ಆರೋಪಗಳು ಕೇಳಿ ಬಂದಿವೆ. ಚಾರ್ಜ್​ಶೀಟ್​ನಲ್ಲಿ ಇವುಗಳನ್ನು ದಾಖಲಿಸಿದ್ದು, ಇಬ್ಬರು ಹುಡುಗಿಯರನ್ನು ಕಳಿಸಲು ಮುರುಘಾ ಸ್ವಾಮಿ ಚೀಟಿ ನೀಡುತ್ತಿದ್ದರು. ಪ್ರತಿ ಬಾನುವಾರ್ ಟ್ಯೂಷನ್ ನೆಪದಲ್ಲಿ ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಮುರುಘಾ ಸ್ವಾಮಿ ಮೊದಲ ಸಲ ಪಕ್ಕದಲ್ಲಿ ಕೂರಿಸಿ ಚೆನ್ನಾಗಿ ಮಾತಾಡಿದರು. ಹಣ್ಣು ಮತ್ತು ಡ್ರೈಫ್ರೂಟ್ಸ್ ತಿನ್ನಲು ಕೊಟ್ಟಿದ್ದರು ಮತ್ತೊಮ್ಮೆ ಹೋದಾಗ ಖಾಸಗಿ ಅಂಗ ಮುಟ್ಟಿದ್ದರು. ಅವರು ಬೆತ್ತಲೆಯಾಗಿ ನನ್ನನ್ನೂ ಬೆತ್ತಲಾಗಿಸಿ ಅತ್ಯಾಚಾರ ಮಾಡಿದ್ರು. ಅಳುತ್ತ ಕುಳಿತಾಗ ನನ್ನೆದುರೇ ಡ್ರಿಂಕ್ಸ್ ಮಾಡಿ ಕೆಟ್ಟದಾಗಿ ಬೈದರು. ಮುಂದೆ ಸಿಸಿ ಕ್ಯಾಮೆರಾ ಇರುವ ಕಾರಣ ಹಿಂದಿನ ಡೋರಿನಿಂದ ಕರೆಸಿಕೊಳ್ಳುತ್ತಿದ್ದರು. ಪ್ರತಿದಿನ ಹೆಸರು ಬರೆದು ಕಳಿಸಿದ್ದವರನ್ನೇ ರಶ್ಮಿ ಕಳಿಸುತ್ತಿದ್ದರು. ಮರುಘಾ ಸ್ವಾಮಿ ಬಳಿಗೆ ಹೋಗಲು ಒಪ್ಪದಿದ್ದರೆ ರಶ್ಮಿ ಕೆಟ್ಟದಾಗಿ ಬೈಯುತ್ತಿದ್ದರು ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ:  Kodagu: ವಿದ್ಯಾರ್ಥಿಗಳ ಗದ್ದೆ ನಾಟಿ ಕೆಲಸಕ್ಕೆ ಹುಬ್ಬೇರಿಸಿದ ಗ್ರಾಮಸ್ಥರು 


ಅಲ್ಲದೇ ನಿನ್ನ ತಮ್ಮನನ್ನು ಚೆನ್ನಾಗಿ ಓದಿಸುತ್ತೇನೆ ಯಾರಿಗೂ ಹೇಳಬೇಡ ಎಂದು ಮುರುಘಾ ಸ್ವಾಮಿ ಹೇಳಿದ್ದರು. ನಾವು ಬಡವರು ಸ್ವಾಮಿ ಎಂದು ಕಾಲು ಹಿಡಿದಿದ್ದೆ. ಆದರೂ ಕೇಳದೆ ನನ್ನ ಬಟ್ಟೆಯನ್ನು ಬಿಚ್ಚಲು ಹೇಳಿದರು. ಮುರುಘಾ ಸ್ವಾಮೀಜಿಗೆ ಎ5 ವಕೀಲ ಗಂಗಾಧರ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ-17), ಎ2 ರಶ್ಮಿ, ಎ4 ಪರಮಶಿವಯ್ಯ ಸಪೋರ್ಟ್ ಮಾಡುತ್ತಿದ್ದರು. ಬೆಂಗಳೂರಿನ (ಎಸ್ತಾರಾಣಿ) ಎಂಬ ವಿದ್ಯಾರ್ಥಿ ನಮ್ಮ ಹಾಸ್ಟೆಲ್ ನಲ್ಲಿದ್ದಳು. ಆ ಬಾಲಕಿಗೆ ರೇಪ್ & ಮರ್ಡರ್ ಮಾಡಿದ್ದಾರೆ ಎಂದು ಹುಡುಗಿಯರು ಮಾತಾಡುತ್ತಿದ್ದರು. ಬಳಿಕ 24/07/2022ರಂದು ರಶ್ಮಿಗೂ ನನಗೂ ಕಿರಿಕ್ ಆಯಿತು, ರಶ್ಮಿ ಹೊಡೆದರು. ನನಗೆ ಸಾಯಬೇಕೆಂದು ಅನ್ನಿಸಿತ್ತು, ರಶ್ಮಿ ಸಾಯಿ ಅಂದರು.


ಸಹಪಾಠಿ ಜೊತೆ ಮಾತನಾಡಿ ಬೆಂಗಳೂರಿಗೆ


ನಾನು ಮತ್ತು ನನ್ನ ಸಹಪಾಠಿ ಮಾತಾಡಿಕೊಂಡೆವು. ಬಳಿಕ ಸಂಜೆ 4:30ಕ್ಕೆ ಮಠದಿಂದ ಹೊರಬಂದು ಇಬ್ಬರೂ ಆಟೋದಲ್ಲಿ ಬಸ್ ಸ್ಟ್ಯಾಂಡಿಗೆ ಹೋದೆವು. ಅಲ್ಲಿಂದ KSRTC ಬಸ್ ನಲ್ಲಿ ರಾತ್ರಿ 11ಕ್ಕೆ ಬೆಂಗಳೂರು ತಲುಪಿದೆವು. ಶರಣರು ಸಿಎಂ ಗೊತ್ತು, ಪೊಲೀಸರು ಗೊತ್ತು ಎಂದಿದ್ದು ನೆನಪಾಯಿತು. ಓರ್ವ ಆಟೋ ಚಾಲಕ ನಮ್ಮನ್ನು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಪೊಲೀಸರು ಸೌಭಾಗ್ಯ ಬಸವರಾಜನ್ ಅವರಿಗೆ ಕರೆ ಮಾಡಿದರು. ಬೆಳಗ್ಗೆ 4ಕ್ಕೆ ಸೌಭಾಗ್ಯ ಬೆಂಗಳೂರಿಗೆ ಬಂದು ಕರೆತಂದರು. ನಮ್ಮ ಚಿಕ್ಕಪ್ಪನನ್ನು ಕರೆಸಿ ಹೇಳಿದಾಗ ಸ್ಪಂದಿಸಲಿಲ್ಲ. ಸೌಭಾಗ್ಯ ಹಾಗೂ ಗೆಳತಿಯ ಮನೆಯಲ್ಲಿ ಉಳಿದಿದ್ದೆವು. ಸೌಭಾಗ್ಯ ಅವರು 26/08/2022ರಂದು ಮೈಸೂರಿಗೆ ಕರೆದೊಯ್ದರು. ಒಡನಾಡಿ ಸಂಸ್ಥೆಯಲ್ಲಿ ನಮ್ಮಿಬ್ಬರ ವಿಚಾರಣೆ ನಡೆಯಿತು. ಸಿಡಬ್ಲೂಸಿಗೆ ಕರೆದೊಯ್ದರು, ಬಳಿಕ ನಜರಾಬಾದ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯ್ತು ಎಂದಿದ್ದಾಳೆ.


Murugha Swamy judicial custody extend 14 days mrq
ಮುರುಘಾ ಸ್ವಾಮೀಜಿ


ಮುರುಘಾ ಸ್ವಾಮಿ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪೋಟಕ ಮಾಹಿತಿ


2016ರಲ್ಲಿ ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದು 8ನೇ ತರಗತಿ ಅಧ್ಯಯನ ಮಾಡಿದ್ದ ಹಳೇ ವಿದ್ಯಾರ್ಥಿನಿಯಿಂದ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಲಾಗಿದೆ. ಇದರಲ್ಲಿ ಆಕೆ ಇಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ವಿವರಿಸಿದ್ದಾಳೆ. ವಾರ್ಡನ್​ ರಶ್ಮಿ ಸ್ವಾಮೀಜಿ ಹಣ್ಣು ಕೊಡುತ್ತಾರೆಂದು ಅವರ ರೂಮಿಗೆ ಕಳುಹಿಸುತ್ತಿದ್ದರು. ಎರಡ್ಮೂರು ಸಲ ನಾನು ಹಾಗೂ ನನ್ನ ಸಹಪಾಠಿ ಹೋಗಿದ್ದೆವು. ರಾತ್ರಿ ಊಟದ ಬಳಿಕ ಹಿಂದಿನ ಬಾಗಿಲಿನಿಂದ ಹೋಗುತ್ತಿದ್ದೆವು. ನನ್ನನ್ನು ಸ್ವಾಮೀಜಿ ದೊಣಗ ಎಂದು ಕರೆಯುತ್ತಿದ್ದರು. ರೂಮಿಗೆ ಹೋದ ಬಳಿಕ ನನಗೆ ಬಟ್ಟೆ ಬಿಚ್ಚಲು ಹೇಳುತ್ತಿದ್ದರು. ಸ್ವಾಮೀಜಿ ಅವರ ಬಟ್ಟೆಗಳನ್ನು ಬಿಚ್ಚುತ್ತಿದ್ದರು. ತೊಡೆಯ ಮೇಲೆ ಕೂಡಿಸಿಕೊಂಡು ಖಾಸಗಿ ಅಂಗ ಮುಟ್ಟುತ್ತಿದ್ದರು. ಗಂಡ ಹೆಂಡತಿಯಂತೆ ಸೇರುತ್ತಿದ್ದರು, ಅಲಾರಂ ಇಟ್ಟುಕೊಂಡು ಬೆಳಗ್ಗೆ 5ಕ್ಕೆ ಹಾಸ್ಟಲ್ ಗೆ ಕಳಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ.


ಇದಾದ ಬಳಿಕ ಅದೊಂದು ದಿನ ಸ್ವಾಮೀಜಿ ಬಳಿ ಬಂದು ಹೋಗುತ್ತಿರುವ ವಿಚಾರ ಬೇರೆಯವರಿಗೆ ಗೊತ್ತಾಗುತ್ತಿದೆ. ಸಿಸಿ ಕ್ಯಾಮಾರದಲ್ಲಿ ಸೆರೆ ಆಗುತ್ತಿದೆ, ಮಲ್ಲಾಡಿಹಳ್ಳಿಗೆ ಹೋಗು ಅಂತ ಪರಮಶಿವಯ್ಯ ಹೇಳಿದ್ದರು ಎಂದೂ ತಿಳಿಸಿದ್ದಾಳೆ ಸಂತ್ರಸ್ತ ಯುವತಿ. ಆದರೀಗ ನನಗೆ ಮದುವೆಯಾಗಿ ಎರಡು ವರ್ಷ ಆಗಿದೆ ಎಂದಿದ್ದಾರೆ.


ಮುರುಘಾ ಶರಣರನ್ನು ಅಪ್ಪಾಜಿ ಎನ್ನುತ್ತೇನೆ: ರಶ್ಮಿ


ತನಿಖೆ ವೇಳೆ ಎ2 ವಾರ್ಡನ್ ರಶ್ಮಿ ಹೇಳಿಕೆ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ವಾರ್ಡನ್ ರಶ್ಮಿ ನಾನು ಮುರುಘಾ ಸ್ವಾಮೀಜಿಗಳನ್ನು ಅಪ್ಪಾಜಿ ಎನ್ನುತ್ತೇನೆ. ಹಾಸ್ಟೆಲ್ ಬಿಲ್ ಸಹಿ ಮಾಡಿಸಲು ಮುರುಘಾ ಶರಣರ ಬಳಿ ಹೋಗುತ್ತಿದ್ದೆ. ಹಾಸ್ಟೆಲ್ ಹೆಣ್ಣು ಮಕ್ಕಳು ಗಲಾಟೆ ಮಾಡಿ ನನ್ನ ಮಾತು ಕೇಳದಾದಾಗ ಶ್ರೀಗಳ ಬಳಿ ಕರೆದೊಯ್ಯುತ್ತಿದ್ದೆ. ಸ್ವಾಮೀಜಿ ಬುದ್ಧಿವಾದ ಹೇಳಿ‌ ಕಳಿಸುತ್ತಿದ್ದರು. ಈವರೆಗೆ 5-6 ಮಕ್ಕಳಿಗೆ ಮಾತ್ರ ಬುದ್ದಿ ಹೇಳಲು ಕಳಿಸಿದ್ದೆ. ಸಂತ್ರಸ್ತ ಬಾಲಕಿಯರು ಶಾಲೆಗೆ ಹೋಗದೆ ಹಾಸ್ಟೆಲ್ ನಲ್ಲಿರುತ್ತಿದ್ದಳು. ಪೋಷಕರು ಬಂದಾಗ ಸ್ವಾಮೀಜಿ ಬಳಿ ಕರೆದೊಯ್ದು ಬುದ್ಧಿವಾದ ಹೇಳಿಸುತ್ತಿದ್ದೆ. ಹಾಸ್ಟೆಲ್​ನಲ್ಲಿ 29 ರೂಮ್ ಗಳಿದ್ದು 120 ವಿದ್ಯಾರ್ಥಿನಿಯರಿದ್ದಾರೆ. ಸಂತ್ರಸ್ತ ಬಾಲಕಿಯರಿಬ್ಬರು 24/07/2022ರಂದು ಪೋಷಕರ ಭೇಟಿಯಾಗಿ ಬರುವುದಾಗಿ ಹೇಳಿ ಗೇಟ್ ಪಾಸ್ ಪಡೆದಿದ್ದರು. ಬಳಿಕ ಕಾಟನ್ ಪೇಟೆ ಠಾಣೆಯಲ್ಲಿರುವ ಮಾಹಿತಿ ಸಿಕ್ಕಿತು. ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಮಠದ ಆಡಳಿತಾಧಿಕಾರಿ ಬಸವರಾಜನ್ , ಸೌಭಾಗ್ಯ ಮಕ್ಕಳನ್ನು ಕರೆದೊಯ್ದ ಮಾಹಿತಿ ಸಿಕ್ಕಿತು. ಬಳಿಕ ಪೋಷಕರನ್ನು ಭೇಟಿ ಮಾಡಿದಾಗ ಸರಿಯಾದ ಮಾಹಿತಿ‌ ಸಿಗಲಿಲ್ಲ ಎಂದಿದ್ದಾರೆ.


ಇದನ್ನೂ ಓದಿ:  Muruga Mutt Case: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ, ಅಟ್ರಾಸಿಟಿ ಪ್ರಕರಣವೂ ದಾಖಲು!


ಇನ್ನು ಸಂತ್ರಸ್ತ ಮಕ್ಕಳಿಗೆ ತೊಂದರೆ ನೀಡಿಲ್ಲ, ಯಾರ ಬಳಿಯೂ ಕಳಿಸಿಲ್ಲ. 2018 ಜನವರಿಯಿಂದ ಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಕ್ಕಳು ತಪ್ಪು ಮಾಡಿದಾಗ ಕೈಗೆ ಮರದ ಸ್ಕೇಲ್‌ನಿಂದ ಹೊಡೆದು ಬುದ್ಧಿ ಹೇಳಿದ್ದೇನೆ. ಯಾವ ಅಪರಾಧ ಮಾಡಿಲ್ಲ ಎಂದು ರಶ್ಮಿ ಹೇಳಿದ್ದಾರೆ.


ಎ1 ಆರೋಪಿ ಮುರುಘಾ ಸ್ವಾಮೀಜಿ ಕೊಟ್ಟ ಸ್ಪಷ್ಟನೆ ಏನು?


ಇನ್ನು ಚಾರ್ಜ್​ಶೀಟ್​ನ ಎರಡನೇ ಭಾಗದಲ್ಲಿ ಪ್ರಕರಣದ ಪ್ರಮುಖ ಆರೋಪಿ ಮುರುಘಾ ಸ್ವಾಮೀಜಿ ಹೇಳಿಕೆಯನ್ನೂ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಅವರು 4-5ವರ್ಷಗಳಿಂದ ವಾರ್ಡನ್ ಆಗಿ ರಶ್ಮಿ ನೇಮಕ ಆಗಿದೆ. ರಶ್ಮಿ ಯಾವಾಗಿನಿಂದ ಮಠದಲ್ಲಿದ್ದರು ಎಂಬುದು ಗೊತ್ತಿಲ್ಲ. ಹಾಸ್ಟೆಲ್ , ವಿದ್ಯಾರ್ಥಿನಿಯರಿಗೆ ಸಂಬಂಧಿತ ವಿಚಾರ ಮ್ಯಾನೇಜರ್ ಪರಮಶಿವಯ್ಯ ಜತೆ ಚರ್ಚಿಸುತ್ತಿದ್ದರು. ಹಾಸ್ಟೆಲ್ ವಿದ್ಯಾರ್ಥಿನಿಯರು ನಮಗೆ ಪ್ರೀತಿಯಿಂದ ಅಪ್ಪಾಜಿ ಎನ್ನುತ್ತಾರೆ. ನಮ್ಮ ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇಲ್ಲ. ಸ್ವಚ್ಚತೆಯ ಕೆಲಸಕ್ಕೆ ನಾವು ಮಕ್ಕಳನ್ನು ಬಳಸಲ್ಲ. ಸಂತ್ರಸ್ತ ವಿದ್ಯಾರ್ಥಿನಿಯರ ಬಗ್ಗೆ ನನಗೆ ಒಯಕ್ತಿಕ ಪರಿಚಯ ಇಲ್ಲ. ಗುಂಪಿನಲ್ಲಿ ಬಂದು ವಿದ್ಯಾರ್ಥಿಗಳು ಭೇಟಿ ಆಗುತ್ತಿದ್ದರು. ಭೇಟಿಗೆ ಬಂದವರಿಗೆ ಹಣ್ಣು, ಡ್ರೈಫ್ರೂಟ್ಸ್, ಚಾಕೊಲೇಟ್ ಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದೆವು, ಮತ್ತು ಬರುವ ಪದಾರ್ಥ ಬೆರೆಸಿ ಮಕ್ಕಳಿಗೆ ನೀಡಿಲ್ಲ. ಮದ್ಯಪಾನ ಮಾಡುವ ಅಭ್ಯಾಸ ನಮಗೆ ಇಲ್ಲ. ಕೆಲ ಹೆಣ್ಣು ಮಕ್ಕಳ ಬಗ್ಗೆ ನಮಗೆ ಸಂಪರ್ಕ‌ ಕಲ್ಪಿಸಿ ಮಾತಾಡಿದ್ದು ತಿಳಿದಿಲ್ಲ. ನಮ್ಮ ಖಾಸಗಿ ಕೊಠಡಿ ಸ್ವಚ್ಛತೆಗೆ ಮಹಾಲಿಂಗ, ಕರಿಬಸಪ್ಪ, ಪ್ರಜ್ವಲ್ ಎಂಬುವರನ್ನು ಮಾತ್ರ ಉಪಯೋಗಿಸುತ್ತಿದ್ದೆವು ಎಂದಿದ್ದಾರೆ.


ಮಾರಿಷಸ್​ಗೆ ಹೋಗಿದ್ದೆ


23/07/2022 ರಿಂದ 28/07/2022ರವರೆಗೆ ಭಕ್ತರ ಕೋರಿಕೆಯಂತೆ ಮಾರಿಷಸ್ ದೇಶಕ್ಕೆ ತೆರಳಿದ್ದೆವು. ಆಗ ಅಕ್ಕಮಹಾದೇವಿ ಹಾಸ್ಟೆಲ್ ನ ಇಬ್ಬರು ಮಕ್ಕಳು ಕಾಣೆ ಆಗಿದ್ದರು. ಮಠದ ಆಡಳಿತಾಧಿಕಾರಿ ಆಗಿದ್ದ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯ ಕಾಟನ್ ಪೇಟೆ ಠಾಣೆಗೆ ತೆರಳಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ. 1994ರಿಂದ 2007ರವರೆಗೆ ಬಸವರಾಜನ್ ಮಠದ ಆಡಳಿತಾಧಿಕಾರಿ ಆಗಿದ್ದರು. ಆಗ MLA, MLC ಚುನಾವಣೆಗೆ ಸ್ಪರ್ದಿಸಿ ಮಠದ ಹಣ ದುರುಪಯೋಗ ಮಾಡಿದ್ದರು. ಮಠದ ಹಣದಿಂದ ಆಸ್ತಿ ಖರೀಧಿಸಿ ಮಠಕ್ಕೆ ವಂಚನೆ ಮಾಡಿದ್ದರು. ಹೀಗಾಗಿ, ಮಠದ ಆಡಳಿತಾಧಿಕಾರಿ ಸ್ಥಾನದಿಂದ ವಜಾ ಮಾಡಲಾಗಿತ್ತು. 2022ರಲ್ಲಿ ಮಠದ ವಿರುದ್ಧದ ಸಿವಿಲ್‌ದಾವೆ ಹಿಂಪಡೆಯುವ ಭರವಸೆ ನೀಡಿದ್ದರು. 2022ರ ಡಿಸೆಂಬರ್ ನಲ್ಲಿ ಮಠದ ಆಡಳಿತಾಧಿಕಾರಿಯಾಗಿ ನೇಮಿಸಿದೆ ಎಂದಿದ್ದಾರೆ.


ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ


ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ ಎಂದಿರುವ ಮುರುಘಾ ಸ್ವಾಮೀಜಿ ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು. ಷಡ್ಯಂತ್ರ, ಪ್ರಚೋದಿತವಾಗಿದ್ದು ಸತ್ಯಕ್ಕೆ ದೂರಾಗಿವೆ. ಈ ದೇಶದ ಕಾನೂನು ಗೌರವಿಸುವ ದೃಷ್ಠಿಯಿಂದ ಸ್ವಇಚ್ಛೆಯಿಂದ ನಿಮ್ಮೆದುರು ಹಾಜರಾಗಿದ್ದೇನೆ ಎಂದಿದ್ದಾರೆ.

Published by:Precilla Olivia Dias
First published: