ಬಾಗಲಕೋಟೆ ( ಜ,12): ಜನವರಿ 17ಕ್ಕೆ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ವೇಳೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜ. 17ರ ಬೆಳಿಗ್ಗೆ ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಯ ಕೇದಾರನಾಥ ಸಕ್ಕರೆ ಕಾರ್ಖಾನೆ,ಬಾದಾಮಿ ಸಕ್ಕರೆ ಕಾರ್ಖಾನೆ, ಹಾಗೂ ವಿಶ್ವದಲ್ಲಿ ಮೊದಲನೆಯ ಇಥೇನಾಲ್ ಉತ್ಪಾದನಾ ಘಟಕ, ತೇಜಸ್ ಇಂಟರ್ ನ್ಯಾಷನಲ್ ಶಾಲೆ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ದೇವೇಂದ್ರ ಪಡ್ನವಿಸ್, ಡಿಸಿಎಂ ಗೋವಿಂದ ಕಾರಜೋಳ,ಜಿಲ್ಲೆಯ ಬಿಜೆಪಿ ಹಾಲಿ ಮಾಜಿ ಶಾಸಕರು ಭಾಗಿಯಾಗಲಿದ್ದಾರೆ. ಕೇಂದ್ರ ಗೃಹ ಸಚಿವರ ಆಗಮನದ ಹಿನ್ನಲೆ ಮತ್ತೊಮ್ಮೆ ನಿರಾಣಿ ಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂಬ ಮಾತು ದಟ್ಟವಾಗಿದೆ.
ನಿರಾಣಿ ಮಂತ್ರಿ ಪಟ್ಟಕ್ಕೆ ಅಮಿತ್ ಷಾ ಕಾರ್ಯಕ್ರಮ!?
ಮಾಜಿ ಸಚಿವ, ಬೀಳಗಿ ಕ್ಷೇತ್ರದ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ, ಈಗಾಗಲೇ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ವೇಳೆಯೇ ಮುರುಗೇಶ್ ನಿರಾಣಿ ಸಚಿವರಾಗುತ್ತಾರೆ ಎನ್ನಲಾಗಿತ್ತು. ಆದರೆ, ರಾಜಕೀಯ ಮೇಲಾಟದಿಂದ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೈತಪ್ಪಿತ್ತು. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾತು ಕೇಳಿ ಬಂದಾಗೊಮ್ಮೆ ಮುರುಗೇಶ್ ನಿರಾಣಿ ಹೆಸರು ಸಚಿವರ ಪಟ್ಟಿಯಲ್ಲಿದೆ ಎಂದು ಹರಿದಾಡುತ್ತಿರುತ್ತಲೇ ಇರುತ್ತದೆ. ನಾಳೆ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಈ ಬಾರಿಯೂ ಮುರುಗೇಶ್ ನಿರಾಣಿ ಸಚಿವರಾಗುತ್ತಾರೆ ಎನ್ನಲಾಗುತ್ತಿದೆ. ಈ ಬಾರಿ ಮುರುಗೇಶ್ ನಿರಾಣಿ, ಕೇಂದ್ರ ಗೃಹ ಸಚಿವ ಅಮಿತ್ ಷಾರ ಮೂಲಕ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನು ಓದಿ: ಜನರ ರಕ್ಷಣೆ ಇರುವವರೆಗೂ, ಯಾರು ಏನು ಮಾಡಲು ಸಾಧ್ಯವಿಲ್ಲ; ಡಾ. ರಾಜ್ರಂತೆ ನೀವೇ ನನ್ನ ದೇವರೆಂದ ಸಿದ್ದರಾಮಯ್ಯ
ಜನವರಿ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ತಮ್ಮ ಒಡೆತನದ ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ಮುರುಗೇಶ್ ನಿರಾಣಿ ಮಂತ್ರಿ ಸ್ಥಾನ ಫಿಕ್ಸ್ ಮಾಡಿಕೊಂಡಿದ್ದಾರೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಡಿಸಿಎಂ ಗೋವಿಂದ ಕಾರಜೋಳ , ಈ ಬಾರಿ ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. ಹೀಗಾಗಿ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.
ಬಾದಾಮಿ ತಾಲೂಕಿಗೆ ಎರಡನೇ ಬಾರಿಗೆ ಅಮಿತ್ ಶಾ ಭೇಟಿ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿಗೆ ಎರಡನೇ ಬಾರಿಗೆ ಆಗಮಿಸುತ್ತಿದ್ದು, ಈ ಹಿಂದೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಪಟ್ಟಣಕ್ಕೆ ಪ್ರಚಾರಕ್ಕೆಂದು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ ಶ್ರೀರಾಮುಲು ಸ್ಪರ್ಧಿಸಿದ್ದ ವೇಳೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದು. ಎರಡನೇ ಬಾರಿಗೆ ಬಾದಾಮಿ ತಾಲೂಕಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆರಕಲಮಟ್ಟಿ ಗ್ರಾಮದ ಬಳಿಯ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ