ಬಾಗಲಕೋಟೆ (ಜ. 13) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಪ್ತ ಶಾಸಕ ಮುರುಗೇಶ್ ನಿರಾಣಿ ಪಾಲಿಗೆ 2020 ಸಂಕ್ರಾಂತಿ ಅಕ್ಷರಶಃ ಕಹಿ ಆಗಿತ್ತು.ಆದರೆ 2021ನೇ ಮಕರ ಸಂಕ್ರಾಂತಿ ಸಿಹಿಯಾಗಿದೆ. ಬರೋಬ್ಬರಿ ವರ್ಷದ ಹಿಂದೆ ಅಂದರೆ ಜನವರಿ 14, 2020ರಂದು ದಾವಣಗೆರೆ ಹರಿಹರ ಪೀಠದಿಂದ ನಡೆದಿದ್ದ ಹರಜಾತ್ರೆಯಲ್ಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ವೇದಿಕೆ ಮೇಲೆ ಮುಖ್ಯಮಂತ್ರಿಯವರೇ ನಮ್ಮ ಸಮಾಜಕ್ಕೆ 3 ಸಚಿವ ಸ್ಥಾನ ಕೊಡಬೇಕು, ಅದರಲ್ಲಿ ಪ್ರಥಮವಾಗಿ ಮುರುಗೇಶ್ ನಿರಾಣಿಗೆ ಕೊಡಲೇಬೇಕು, ಮುರುಗೇಶ್ ನಿರಾಣಿ ನಿಮ್ಮ ಹೆಗಲಿಗೆ ಹೆಗಲಾಗಿದ್ದಾರೆ. ನೀವೂ ಈ ಬಾರಿ ಅವರನ್ನು ಕೈಬಿಟ್ಟರೆ ನಿಮ್ಮನ್ನು ಅಖಂಡ ಪಂಚಮಸಾಲಿ ಸಮಾಜ ಕೈಬಿಡುತ್ತೆ ಎಂದಾಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೇದಿಕೆಯಲ್ಲೇ ಸ್ವಾಮೀಜಿ ವಿರುದ್ಧ ಫುಲ್ ಗರಂ ಆಗಿ, ಸ್ವಾಮೀಜಿಗಳು ನೀವು ಹೀಗೆಲ್ಲಾ ಮಾತನಾಡಿ, ಬೆದರಿಕೆ ಹಾಕಬಾರದು. ವೇದಿಕೆಯಿಂದ ಹೊರಗೆ ಹೋಗುತ್ತೇನೆ ಎಂದು ವೇದಿಕೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಳಿ ಕುಳಿತಿದ್ದ ಶಾಸಕ ಮುರುಗೇಶ್ ನಿರಾಣಿಗೆ ಗದರಿದ್ದರು.
ಆ ಬಳಿಕ ಸ್ವಾಮೀಜಿಯೊಬ್ಬರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದಿಕೆಯಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಮುಜುಗರಕ್ಕೊಳಗಾಗಿದ್ದರು. ಹೀಗಾಗಿ 2020ರ ಸಂಕ್ರಾಂತಿ ಮುರುಗೇಶ್ ನಿರಾಣಿ ಪಾಲಿಗೆ ಕಹಿಯಾಗಿತ್ತು ಆ ಬಳಿಕ ಶಾಸಕ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಅಂತರ ಕಾಯ್ದುಕೊಂಡು, ತಮ್ಮ ಕೈಗಾರಿಕೋದ್ಯಮಿಯತ್ತ ಗಮನ ಹರಿಸಿದ್ದರು.
ಹೆಚ್ಚಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡದೆ ದೂರು ಉಳಿದಿದ್ದರು. ಸಚಿವ ಸಂಪುಟ ವಿಸ್ತರಣೆ ಸುದ್ದಿ ಬಂದಾಗೊಮ್ಮೆ ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿತ್ತು. ಈ ಬಾರಿಯ ಸಂಕ್ರಾಂತಿ ಶಾಸಕ ಮುರುಗೇಶ್ ನಿರಾಣಿ ಪಾಲಿಗೆ ಸಿಹಿಯಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷದ ಕಹಿ ಘಟನೆ ಮಾಸಿ, ಈ ಬಾರಿ ಮುರುಗೇಶ್ ನಿರಾಣಿಗೆ ಮಂತ್ರಿ ಭಾಗ್ಯ ಲಭಿಸುತ್ತಿದ್ದು ಸಂಕ್ರಾಂತಿಗೆ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ. ಈ ಬಗ್ಗೆ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ ಶಾಸಕ ಮುರುಗೇಶ್ ನಿರಾಣಿ, ಸಚಿವ ಸ್ದಾನ ಖಚಿತವಾಗಿದೆ. ಸಿಎಂ ಅವರನ್ನು ಭೇಟಿಯಾಗಿದ್ದೆ, ಭರವಸೆ ನೀಡಿದ್ದರು, ನಿನ್ನೆ ಸಂಜೆ ವೇಳೆಗೆ ಫೋನ್ ಕರೆ ಬಂದಿದೆ ಎಂದಷ್ಟೇ ಹೇಳಿದರು.
ಊರ್ ಮಂದ್ ನಮ್ಮೆ ಕಾರ್ಯಕ್ರಮದಲ್ಲಿ ಮಿಂಚಿದ ಕೊಡವರು; ಕೊಂಬು ಮೀಸೆ, ಉದ್ದ ಜಡೆಗೂ ಸ್ಪರ್ಧೆ..!
ಮುರುಗೇಶ್ ನಿರಾಣಿ ರಾಜಕೀಯ ಹಾದಿ ..!
ಮುರುಗೇಶ್ ನಿರಾಣಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದವರು.ತಂದೆ ರುದ್ರಪ್ಪ,ತಾಯಿ ಸುಶೀಲಾಬಾಯಿ, 01ಜೂನ್ 1965ರಲ್ಲಿ ಜನಿಸಿದ ಮುರುಗೇಶ್ ನಿರಾಣಿ, ಹುಬ್ಬಳ್ಳಿಯ ಬಿ ವಿ ಭೂಮರೆಡ್ಡಿ ಕಾಲೇಜು ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ಬಿಇ (ಸಿವಿಲ್) ಓದಿದ್ದು, ಮುಂದೆ ಪುಣೆಯಲ್ಲಿ ಡಿಪ್ಲೋಮಾ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್ ಕಲಿತಿದ್ದಾರೆ. ಪತ್ನಿ ಕಮಲಾ, ವಿಜಯ್, ವಿಶಾಲ್ ಇಬ್ಬರು ಸುಪುತ್ರರಿದ್ದು, ನಾಲ್ಕು ಜನ ಸಹೋದರರು, ಅದರಲ್ಲಿ ಹನಮಂತ ನಿರಾಣಿ ವಿಧಾನಪರಿಷತ್ ಸದಸ್ಯ, ಸಂಗಮೇಶ ನಿರಾಣಿ ಸಕ್ಕರೆ ಕಾರ್ಖಾನೆ ಉಸ್ತುವಾರಿ, ಜೊತೆಗೆ ಬಿಜೆಪಿ ಯುವ ಮುಖಂಡ, ನೀರಾವರಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುರುಗೇಶ್ ನಿರಾಣಿ 30ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. 30ವರ್ಷದ ಹಿಂದೆ ಬಿ ಎಸ್ ಯಡಿಯೂರಪ್ಪರೊಂದಿಗೆ ಆತ್ಮೀಯತೆ ಬೆಳೆದು,ಅವರ ರಾಜಕೀಯ ಗರಡಿಯಲ್ಲಿ ಮುರುಗೇಶ್ ನಿರಾಣಿ ಪಳಗಿದ್ದಾರೆ.ಹೀಗಾಗಿ ಬಿ ಎಸ್ ಯಡಿಯೂರಪ್ಪ ಆಪ್ತ ಶಾಸಕರಲ್ಲಿ ಮುರುಗೇಶ್ ನಿರಾಣಿ ಪ್ರಥಮರು. ಪಂಚಮಸಾಲಿ ಲಿಂಗಾಯತ ಕೋಟಾದಡಿ ಸಚಿವ ಸ್ಥಾನ ಲಭಿಸುತ್ತಿದ್ದು, ಬೀಳಗಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ,ಎರಡನೇ ಬಾರಿಗೆ ಸಚಿವರಾಗುತ್ತಿದ್ದಾರೆ.ಇನ್ನು 1993ರಿಂದ 2000ವರೆಗೆ ಮುರುಗೇಶ್ ನಿರಾಣಿ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ರಾಜಕಾರಣದೊಂದಿಗೆ ಕೈಗಾರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುರುಗೇಶ್ ನಿರಾಣಿ, ಎಂ ಆರ್ ಎನ್ (ನಿರಾಣಿ) ಉದ್ಯಮ ಸಂಸ್ಥೆ ಸ್ಥಾಪಿಸಿ, ಕೈಗಾರಿಕೆ, ಜೊತೆಗೆ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದಾರೆ. ಸದ್ಯ 6ಸಕ್ಕರೆ ಕಾರ್ಖಾನೆ,1ಸಿಮೆಂಟ್ ಕಾರ್ಖಾನೆ ಒಡೆತನಹೊಂದಿದ್ದು, ವಿಜಯ್ ಸೌಹಾರ್ದ ಸಹಕಾರಿ ಬ್ಯಾಂಕ್, ತೇಜಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸ್ಥಾಪಿಸಿದ್ದು, ಕೈಗಾರಿಕೆಯಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಬೀಳಗಿಯಿಂದ ವಿಧಾನಸೌಧದವರೆಗೆ..!
ಮುರುಗೇಶ್ ನಿರಾಣಿ ,2004-08ವರೆಗೆ ಪ್ರಥಮ ಬಾರಿಗೆ ಅವಿಭಜಿತ ಜಮಖಂಡಿ -ಬೀಳಗಿ ಕ್ಷೇತ್ರದ ಶಾಸಕರಾದರು.2008ರಿಂದ 2013ವೆರೆಗೆ ಎರಡನೇ ಬಾರಿಗೆ ಬೀಳಗಿ ಕ್ಷೇತ್ರದ ಶಾಸಕ. ಕಾಂಗ್ರೆಸ್ ನ ಜೆ ಟಿ ಪಾಟೀಲ್ ವಿರುದ್ಧ 2013-14ರಲ್ಲಿ ಬೀಳಗಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು.2018ರಲ್ಲಿ ಬೀಳಗಿ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಆಗುತ್ತಿದ್ದಾರೆ.
ನಿರಾಣಿ ಸಚಿವರಾಗಿ ಸೇವೆ..!
2008ರಿಂದ 2013-14ವರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರ ಮುಖ್ಯಮಂತ್ರಿ ಅವಧಿಯಲ್ಲೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ 2010-11ರಲ್ಲಿ ರಾಜ್ಯದಲ್ಲಿ ಎರಡು ಬಾರಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ, ಕೈಗಾರಿಕೆ ಕ್ಷೇತ್ರದಲ್ಲಿ ಸಾಧನೆ ಅಮೂಲಾಗ್ರ ಬದಲಾವಣೆಗೆ ಕಾರಣರಾಗಿದ್ದಾರೆ.