ಬೆಂಗಳೂರು (ಜ. 18): ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುರುಗೇಶ್ ನಿರಾಣಿಯನ್ನು ಮಂತ್ರಿ ಮಾಡದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶ್ವಾಸಗುರು ವಚನಾನಂದ ಎಚ್ಚರಿಕೆ ನೀಡಿದ್ದರು. ಇದಕ್ಕೆ ವೇದಿಕೆಯಲ್ಲೇ ಕಿಡಿಕಾರಿದ್ದ ಸಿಎಂ ಯಡಿಯೂರಪ್ಪ ಸ್ವಾಮೀಜಿಗಳು ಈ ರೀತಿಯ ಮಾತುಗಳನ್ನು ಆಡಬಾರದು ಎಂದು ಬಿಸಿ ಮುಟ್ಟಿಸಿದ್ದರು. ಈ ಘಟನೆ ನಡೆದ ಬಳಿಕ ಮುರುಗೇಶ್ ನಿರಾಣಿ ಮೇಲೂ ಸಿಎಂ ಕೋಪಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಕೋಪ ಶಮನ ಮಾಡಲು ಇಂದು ಯಡಿಯೂರಪ್ಪನವರ ಮನೆಗೆ ಮುರುಗೇಶ್ ನಿರಾಣಿ ಭೇಟಿ ನೀಡಿದ್ದಾರೆ. ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ತೆರಳಿದ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಕ್ಷಮೆ ಕೋರಿದ್ದಾರೆ.
ಸಾರ್ವಜನಿಕ ವೇದಿಕೆಯಲ್ಲಿ ತನ್ನ ಪರವಾಗಿ ವಚನಾನಂದ ಸ್ವಾಮೀಜಿ ಮಾತನಾಡಿದ್ದಕ್ಕೆ ಕೋಪಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಮುನಿಸನ್ನು ತಣ್ಣಗಾಗಿಸಲು ನಿರಾಣಿ ಪ್ರಯತ್ನಿಸಿದ್ದಾರೆ. ಇದೇವೇಳೆ ತಮಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ- ಸ್ವಾಮಿ ವಚನಾನಂದ ವಾಗ್ವಾದದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ವೇದಿಕೆ ಮೇಲೆ ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರು ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದಾಗ ಕೋಪಗೊಂಡ ಸಿಎಂ ಬಿಎಸ್ವೈ, ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು, ಎಂದು ಕುರ್ಚಿಯಿಂದ ಮೇಲೆದ್ದು ಹೇಳಿದರು. ಈ ವೇಳೆ ಸಿಎಂ ಮತ್ತು ಸ್ವಾಮೀಜಿ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.
ಮುಖ್ಯಮಂತ್ರಿಗಳೇ ಮುರುಗೇಶ್ ನಿರಾಣಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಮ್ಮ ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ಕೈ ಬಿಡಲು ಹೋಗಬೇಡಿ. ಒಂದು ವೇಳೆ ನೀವು ನಿರಾಣಿಯನ್ನು ಕೈಬಿಟ್ಟರೆ ಇಡೀ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದರು.
ಇದನ್ನೂ ಓದಿ: ‘ನಿರಾಣಿಗೆ ಮಂತ್ರಿ ಸ್ಥಾನ ನೀಡಿ ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗಬೇಕಾ?‘: ಯತ್ನಾಳ್
ದರಿಂದ ಸಿಡಿಮಿಡಿಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಅವರ ಮಾತನ್ನು ತಡೆದು, ಕುರ್ಚಿಯಿಂದ ಎದ್ದು, ನೀವು ಹೀಗೆಲ್ಲಾ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ, ಎಂದು ನಿಂತಾಗ, ಸ್ವಾಮೀಜಿಗಳು "ನಾವು ಸತ್ಯವನ್ನು ಹೇಳುತ್ತಿದ್ದೇವೆ. ನೀವು ಕುಳಿತುಕೊಳ್ಳಿ," ಎಂದು ಹೇಳಿದರು. ಆಗ ಸಿಎಂ, "ತಾವು ಹೀಗೆಲ್ಲಾ ಮಾತನಾಡಬಾರದು. ನಿಮ್ಮಿಂದ ಈ ಮಾತು ಬರುತ್ತದೆ ಎಂದುಕೊಂಡಿರಲಿಲ್ಲ. ಈಗಾದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ತಾವು ಸಲಹೆ ನೀಡಬಹುದೇ ಹೊರತು ಬೆದರಿಸಬಾರದು," ಎಂದು ಸಿಎಂ ಗರಂ ಆಗಿ ಹೇಳಿದ್ದರು.
ಈ ಘಟನೆ ಬಿಜೆಪಿಯಲ್ಲಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಕಿಡಿಕಾರಿದ್ದರು. ನಿರಾಣಿಗೆ ಸಚಿವ ಸ್ಥಾನ ನೀಡಿದರೆ ಉಳಿದ ಪಂಚಮಸಾಲಿ ನಾಯಕರು ಕತ್ತೆ ಕಾಯಲು ಹೋಗಬೇಕಾ? ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ