ಶ್ರೀಗಂಧ ಮರ ಕದ್ದೊಯ್ಯಲು ಮನೆ ಮಾಲೀಕನ ಹತ್ಯೆ ಪ್ರಕರಣ: ಕಡೆಗೂ ಸಿಕ್ಕಿಬಿದ್ದ ಆರೋಪಿಗಳು

ಮೊಬೈಲ್ ಟವರ್ ಲೊಕೇಷನ್ ಮೂಲಕ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಾಮರಾಜನಗರ (ನ. 05): ಶ್ರೀಗಂಧ ಮರ ಕದ್ದೊಯ್ಯುವ ಸಲುವಾಗಿ  ತಾಲೂಕಿನ ಚಂದಕವಾಡಿಯಲ್ಲಿ ಮನೆಯ ಮಾಲೀಕನನ್ನೇ ಹತ್ಯೆಗೈಯ್ದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೂರ್ವ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಬೈಲ್ ಟವರ್ ಲೊಕೇಷನ್ ಮೂಲಕ ಚಂದಕವಾಡಿ ಗ್ರಾಮದ  ಹುಣಸೆಹಣ್ಣಿನ ವ್ಯಾಪಾರಿ ಇರ್ಫಾನ್ ಅಹಮದ್,  ಬೂದಿಪಡಗ ಗ್ರಾಮದ ಮಹದೇವ ಅಲಿಯಾಸ್ ಕಳ್ಳಮಹದೇವ, ಬೇಡಗುಳಿಯ ಮಹೇಶ್ ಹಾಗು ಕಾಳಿಕಾಂಭ ಕಾಲೋನಿಯ ಮುನಿಯಪ್ಪ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್ 4 ರಂದು ಬೆಳಿಗ್ಗೆ  ಯಳಂದೂರು ಗ್ರಾಮದ ವೈ.ಕೆ. ಮೋಳೆ ಗ್ರಾಮದ ಕೃಷ್ಣಶೆಟ್ಟಿ ಹಾಗು ಬಸವಶೆಟ್ಟಿ ಎಂಬುವರು ಚಂದಕವಾಡಿಯ ಶಿವಬಸಪ್ಪನವರ ಮನೆಗೆ ಬಂದು ಗಂಧದಮರವನ್ನು ಖರೀದಿಗೆ ಕೊಡುವಂತೆ ಕೇಳುತ್ತಿದ್ದರು. ಆದರೆ ಶಿವಬಸಪ್ಪ ಮರಕೊಡಲು ಸುತರಾಂ ಒಪ್ಪಲಿಲ್ಲ. ಇದೇ ಸಮಯದಲ್ಲಿ ಆ ಮಾರ್ಗದಲ್ಲಿ ಹೋಗುತ್ತಿದ್ದ ಇರ್ಫಾನ್ ಅಹಮದ್ ಇದನ್ನೆಲ್ಲಾ  ಗಮನಿಸಿದ್ದ. ಹೇಗಿದ್ದರು ಶಿವಬಸಪ್ಪ   ಈ ಮರವನ್ನು ಕೊಡುವುದಿಲ್ಲ, ಹಾಗಾಗಿ  ಇಂದು ರಾತ್ರಿ ಕಡಿದು ಕದ್ದೊಯ್ದು ಮಾರಾಟ ಮಾಡಿದರೆ  ಸಾಕಷ್ಟು ಹಣ ಸಂಪಾದಿಸಬಹುದು, ಮರ ಕದ್ದೊಯ್ದರೆ   ವೈ.ಕೆ.ಮೋಳೆ ಗ್ರಾಮದ ಕೃಷ್ಣಶೆಟ್ಟಿ ಹಾಗು ಬಸವಶೆಟ್ಟಿ ಅವರ ಮೇಲೆ ಅನುಮಾನ ಬರುತ್ತದೆ. ಹೊರತು  ತನ್ನ ಮೇಲೆ ಅನುಮಾನ ಬರುವುದಿಲ್ಲ ಎಂದುಕೊಂಡು ಮರ ತರಿದು ಕದ್ದೊಯ್ಯಲು ಪ್ಲಾನ್ ಮಾಡಿದ.

  ತನ್ನ ಬಳಿ ಹುಣಸೆಹಣ್ಣು ಕೀಳಲು ಕೂಲಿ ಕೆಲಸಕ್ಕೆ ಬರುತ್ತಿದ್ದ ಬೂದಿಪಡಗ ಗ್ರಾಮದ ಮಹದೇವ ಅಲಿಯಾಸ್ ಕಳ್ಳ ಮಹದೇವನಿಗೆ ಮೊಬೈಲ್ ಕರೆ ಮಾಡಿದ ಇರ್ಫಾನ್ ಅಹಮದ್,   ಒಂದು ಮರ ಕಡಿಯಬೇಕು, ನಿನ್ನ ಜೊತೆ ಕಾಳಿಕಾಂಭ ಕಾಲೋನಿಯ ಮುನಿಯಪ್ಪ ಹಾಗು ಇನ್ನೊಂದಿಬ್ಬರನ್ನು ಕರೆದುಕೊಂಡು ರಾತ್ರಿ ಚಂದಕವಾಡಿಗೆ ಬಾ ಎಂದು ಹೇಳಿದ್ದಾನೆ

  ಅದರಂತೆ ಮಹದೇವ, ಮುನಿಯ ಹಾಗು ಬೇಡಗುಳಿಯ ಮಹೇಶ್, ರಾತ್ರಿ 11.30 ರ ವೇಳೆಗೆ  ಬಂದಿದ್ದಾರೆ. ಅವರ ಕೈಗೆ ಗರಗಸ ನೀಡಿದ ಇರ್ಫಾನ್ ಅಹಮದ್, ಶಿವಬಸಪ್ಪನವರ ಮನೆ ಮುಂದೆ ಬೆಳದು ನಿಂತಿರುವ ಗಂಧದ ಮರ ತೋರಿಸಿ ಈ ಮರವನ್ನು ತರಿದು ಕೊಡಿ, ಎಂದು ತಿಳಿಸಿ ಅಲ್ಲಿಂದ ಹೋಗಿದ್ದಾನೆ.

  ಬಳಿಕ ಮಹದೇವ, ಮಹೇಶ್, ಮುನಿಯಪ್ಪ ಗರಗಸದಿಂದ ಮರಕೊಯ್ಯಲು ಆರಂಭಿಸಿದ್ದಾರೆ. ಇದರ ಸದ್ದಿನಿಂದ ಜಗುಲಿಯಲ್ಲಿ ಮಲಗಿದ್ದ ಶಿವಬಸಪ್ಪನಿಗೆ ಎಚ್ಚರಗೊಂಡಿದ್ದಾರೆ. ತಕ್ಷಣ ಅವರ ಬಾಯಿ ಅದುಮಿ ಮೂವರು ಸೇರಿ ಅನತಿ ದೂರದಲ್ಲಿದ್ದ ಮಾಳವೊಂದಕ್ಕೆ ಎತ್ತಿಕೊಂಡು ಹೋಗಿದ್ದಾರೆ.  ಶಿವಬಸಪ್ಪನನ್ನು ಹೀಗೆ ಬಿಟ್ಟರೆ ಮುಂದೆ ತಮಗೆ ತೊಂದರೆ ಆಗುತ್ತದೆ ಎಂದುಕೊಂಡು ಅವರ ಕೈಕಾಲು ಕಟ್ಟಿ  ಬಾಯಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ,

  ಇದನ್ನು ಓದಿ: ವಿನಯ್ ಕುಲಕರ್ಣಿ ಬಂಧನ ವಿಚಾರ: ಸಿಬಿಐ ವಿಚಾರಣೆ ಸಹಜ – ಸಿಎಂ ಯಡಿಯೂರಪ್ಪ

  ಬಳಿಕ ಮತ್ತೆ ಮನೆಬಳಿಗೆ ಬಂದು ಮರಕೊಯ್ಯಲು ಆರಂಭಿಸಿದ್ದಾರೆ. ಮರಕೊಯ್ಯುವ ಸದ್ದಿಗೆ ಮನೆಯೊಳಗಿದ್ದವರು ಎಚ್ಚರಗೊಂಡು ಬಾಗಿಲ ಚಿಲಕ ಮುರಿದು ಹೊರಬಂದಿದ್ದಾರೆ. ಈ ವೇಳೆ ಮರಕೊಯ್ಯುತ್ತಿದ್ದ ಮಹದೇವ, ಮಹೇಶ್ ಹಾಗು ಮುನಿಯಪ್ಪ ಅಲ್ಲಿಂದ ಪರಾರಿಯಾಗಿದ್ದಾರೆ

  ಈ ಬಗ್ಗೆ ಪ್ರಕರಣವನ್ನು ಬೇಧಿಸಲು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನಂಜಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.  ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗಿಳಿದ ಪೊಲೀಸರು  ಮೊಬೈಲ್ ಟವರ್ ಲೊಕೇಷನ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಅಂದು ರಾತ್ರಿ ಇರ್ಫಾನ್ ಅಹಮದ್ ಹಾಗು ಮಹದೇವನ   ನಡುವೆ ಪೋನ್ ಕರೆಗಳ ವಿನಿಮಯ ಆಗಿರುವುದನ್ನು ಪತ್ತೆ ಹಚ್ಚಿ ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸಿದ್ದಾರೆ.
  Published by:Seema R
  First published: