HOME » NEWS » State » MUNIRATNA SAYS HE WILL NOT BE DISAPPOINTED IF NOT GIVEN CABINET BERTH SMH SNVS

Muniratna - ‘ನನ್ನ ಜೊತೆ ಬಂದವರು ಬ್ಯುಸಿಯಾಗಿದ್ದಾರೆ’ – ಮಿತ್ರಮಂಡಳಿ ಬಗ್ಗೆ ಮುನಿರತ್ನ ವ್ಯಂಗ್ಯ

ನನ್ನ ಜೊತೆ ಬಂದವರೆಲ್ಲರೂ ಹುಬ್ಬಳ್ಳಿ ಧಾರವಾಡ ಕಡೆ ಬ್ಯುಸಿಯಾಗಿದ್ಧಾರೆ. ನನ್ನ ಜೊತೆ ಮಾಡನಾಡುವಷ್ಟು ಸಮಯ ಅವರಿಗೆ ಇಲ್ಲ ಎಂದು ಮಂತ್ರಿ ಸ್ಥಾನ ವಂಚಿತ ಮುನಿರತ್ನ ಅವರು ಹೇಳಿದ್ದಾರೆ.

news18-kannada
Updated:January 14, 2021, 2:55 PM IST
Muniratna - ‘ನನ್ನ ಜೊತೆ ಬಂದವರು ಬ್ಯುಸಿಯಾಗಿದ್ದಾರೆ’ – ಮಿತ್ರಮಂಡಳಿ ಬಗ್ಗೆ ಮುನಿರತ್ನ ವ್ಯಂಗ್ಯ
ಮುನಿರತ್ನ
  • Share this:
ಬೆಂಗಳೂರು(ಜ. 14): ಸಂಪುಟ ವಿಸ್ತರಣೆ ವೇಳೆ ಕೊನೆಯ ಘಳಿಗೆಯವರೆಗೆ ಮಂತ್ರಿಸ್ಥಾನಕ್ಕಾಗಿ ಕಸರತ್ತು ನಡೆಸಿದ್ದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ನಿನ್ನೆ ನಿರಾಸೆಯಾಗಿದೆ. ಇಂದು ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಅವರು ತಮಗೆ ಅಸಮಾಧಾನ ಆಗಿಲ್ಲ ಎಂದೇ ಹೇಳಿದ್ದಾರೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಬರುವ ವೇಳೆ ಮಂತ್ರಿಸ್ಥಾನ ಕೊಡುತ್ತೇನೆಂದು ಭರವಸೆ ನೀಡಿದ್ದ ಯಡಿಯೂರಪ್ಪ ತಮ್ಮ ಮಾತಿಗೆ ತಪ್ಪಿದ್ದಾರಲ್ಲವೇ ಎಂಬ ಅಭಿಪ್ರಾಯವನ್ನು ಮುನಿರತ್ನ ಈ ವೇಳೆ ತಳ್ಳಿಹಾಕಿದ್ದಾರೆ. ಯಡಿಯೂರಪ್ಪನವರು ವಚನಬ್ರಷ್ಟರಲ್ಲ. ಮಾತು ತಪ್ಪುವವರಲ್ಲ. ಕೆಲವು ಸಂದರ್ಭದಲ್ಲಿ ಹೀಗೆ ಆಗುತ್ತೆ. ನಮ್ಮ ರಾಷ್ಟ್ರೀಯ ಪಕ್ಷವಾದ್ದರಿಂದ ಹೈಕಮಾಂಡ್​ನಿಂದ ಬರುವುದು ವಿಳಂಬ ಆಗಬಹುದು. ಮುಂದೆ ತನಗೆ ಮಂತ್ರಿಸ್ಥಾನ ಸಿಗಬಹುದು ಎಂದು ಮುನಿರತ್ನ ಆಶಿಸಿದ್ದಾರೆ.

ಇದೇ ವೇಳೆ, ತಮ್ಮ ಜೊತೆ ಬಿಜೆಪಿಯತ್ತ ವಲಸೆ ಬಂದ ಬೆಂಗಳೂರಿನ ಸಹಶಾಸಕರ ಬಗ್ಗೆ ಮುನಿರತ್ನ ವ್ಯಂಗ್ಯಾಸ್ತ್ರ ಬಿಟ್ಟಿದ್ದಾರೆ. ಎಸ್​ಬಿಎಂ ಎಂದೇ ಖ್ಯಾತವಾಗಿದ್ದ ಈ ಗುಂಪಿನಲ್ಲಿರುವ ಗೆಳೆಯರು ಮುನಿರತ್ನರನ್ನು ನಡುನೀರಲ್ಲೇ ಕೈಬಿಟ್ಟರೆಂಬ ಮಾತುಗಳು ಕೇಳಿಬರುತ್ತಿವೆ. ಮುನಿರತ್ನಗೆ ಮಂತ್ರಿಸ್ಥಾನ ಕೊಡಿಸಲು ಇವರಾರೂ ಲಾಬಿ ಮಾಡಲಿಲ್ಲ ಎಂಬ ಮಾತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುನಿರತ್ನ, “ನನ್ನ ಜೊತೆ ಬಂದವರೆಲ್ಲಾ ಈಗ ಹುಬ್ಬಳ್ಳಿ, ಧಾರವಾಡ ಮೊದಲಾದ ಕಡೆ ಬ್ಯುಸಿ ಆಗಿದ್ದಾರೆ. ಯಾರಿಗೂ ಮಾತನಾಡುವುದಕ್ಕೆ ವ್ಯವಧಾನ ಇಲ್ಲ” ಎಂದು ಮುನಿರತ್ನ ವ್ಯಂಗ್ಯ ಮಾಡಿದ್ದಾರೆ.

ವಲಸೆ ಬಂದ ಸಮಯದಲ್ಲಿ ಇದ್ದ ಎಸ್​ಬಿಎಂ (ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಮತ್ತು ಮುನಿರತ್ನ) ಗುಂಪಿನ ಬಗ್ಗೆ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಸ್​ಬಿಎಂ (ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್) ಈಗ ಇದೆಯಾ? ಅದೀಗ ಎಸ್​ಬಿಐ ಆಗಿದೆ. ಅಂದರೆ ನಾವೆಲ್ಲಾ ಇಂಡಿಯಾ ಅಂತ ಅರ್ಥ ಎಂದು ಮುನಿರತ್ನ ತಮ್ಮದೇ ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮಗನ ಒತ್ತಡದಿಂದ ಸಿಎಂ ಯಡಿಯೂರಪ್ಪ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿದ್ದಾರೆ; ಹೆಚ್. ವಿಶ್ವನಾಥ್ ಆರೋಪ

ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯೊಳಗೆ ಎದ್ದ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಮುನಿರತ್ನ, ಕೆಲ ದಿನಗಳ ಕಾಲ ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ. ಆದರೆ ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೂ ಮಾಡಬಾರದು. ಹೋಗುತ್ತಾಹೋಗುತ್ತಾ ಎಲ್ಲಾ ಸರಿಹೋಗುತ್ತದೆ. ಇನ್ನೂ ಎರಡೂವರೆ ವರ್ಷ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಚಿವ ಸ್ಥಾನ ತನ್ನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತೆ. ಇಲ್ಲದಿದ್ದರೆ ಇಲ್ಲ. ಕೆಲ ಸಂದರ್ಭದಲ್ಲಿ ಕೆಟ್ಟ ಸಮಯ ಬರುತ್ತೆ. ಏನೂ ಮಾಡಲು ಆಗಲ್ಲ. ಮಳೆ, ಗಾಳಿ ಇದ್ದೇ ಇರುತ್ತದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು. ತನಗೆ ಸಚಿವ ಸ್ಥಾನ ಸಿಗಲಿ ಬಿಡಲಿ ತಾನು ಶಾಸಕನಾಗಿ ಕ್ಷೇತ್ರದ ಜನರ ಸೇವೆ ಮಾಡಿ ಋಣ ತೀರಿಸುತ್ತೇನೆ. ನಾನು ಸಚಿವ ಆಗುತ್ತೇನೆ ಎಂದು ಜನರು ಮತ ನೀಡಿಲ್ಲ. ಒಬ್ಬ ಕಾರ್ಯಕರ್ತನಾಗಿಯೇ ಮುನಿರತ್ನ ಮುಂದುವರಿಯುತ್ತಾನೆ ಎಂದು ಮುನಿರತ್ನ ಹೇಳಿದ್ದಾರೆ.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: January 14, 2021, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories