ತುಮಕೂರು (ಆ. 8): ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯುವಲ್ಲಿ ವಲಸಿಗ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಬಿಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ವಲಸಿಗ ಬಿಜೆಪಿ ನಾಯಕರ ಸ್ಥಿತಿ ಏನಾಗಲಿದೆ ಎಂಬ ಚರ್ಚೆ ನಡೆದಿತ್ತು. ಈ ಆತಂಕದ ನಡುವೆಯೂ ಎಲ್ಲಾ ನಾಯಕರು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸಿಎಂ ಹಂಚಿಕೆ ಮಾಡಿದ ಖಾತೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತ್ರ ತಮ್ಮ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ ಇಲಾಖೆ ನೀಡಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಅವರು ಇನ್ನೆರಡು ಮೂರು ದಿನದೊಳಗೆ ಖಾತೆ ಬದಲಾವಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಗಡವು ಕೂಡ ವಿಧಿಸಿದ್ದಾರೆ. ಖಾತೆ ಬದಲಾವಣೆ ಆಗದಿದ್ದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಅವರು ಮಾಡಿದ್ದಾರೆ ಎನ್ನಲಾಗಿದೆ
ಈ ಬೆಳವಣಿಗೆಗಳ ಕುರಿತು ಇಂದು ಸಿದ್ಧಗಂಗಾ ಮಠದಲ್ಲಿ ಮಾತನಾಡಿರುವ ಸಚಿವ ಮುನಿರತ್ನ, ನನಗೆ ಕೊಟ್ಟಿರುವ ಖಾತೆ ಬಗ್ಗೆ ತೃಪ್ತಿ ಇದೆ. ಕಳೆದ ಎರಡು ವರ್ಷದ ಹಿಂದೆ ನಾವು ಇನ್ನೊಂದು ಪಕ್ಷದಿಂದ ಈ ಪಕ್ಷಕ್ಕೆ ಬಂದಿದ್ದೇವೆ. ಬಿಜೆಪಿಗೆ ನಮ್ಮ ಕೊಡಗೆ ಏನು ಇಲ್ಲ. ರಾಜೀನಾಮೆ ಕೊಟ್ಟು, ಪಕ್ಷಕ್ಕೆ ಬಂದ ನಮಗೆ ಶಾಸಕ ಸ್ಥಾನ, ಮಂತ್ರಿ ಸ್ಥಾನ ಎಲ್ಲಾ ಕೊಟ್ಟಿದ್ದಾರೆ. ಈ ಪಕ್ಷದಲ್ಲಿ ನಾವು ಕೆಲದಿನ ಉತ್ತಮ ಕೆಲಸ ಮಾಡಬೇಕು. ಕೆಲಸ ಮಾಡದೇ ಖಾತೆ ಕೊಡಿ ಎಂದು ಕೇಳುವುದು ಸರಿಯಲ್ಲ ಎಂದು ಎಂಟಿಬಿ ಹೆಸರು ಹೇಳದೇ ತಿವಿದಿದ್ದಾರೆ.
ತ್ಯಾಗ ಮಾಡಿ ಬಂದಿದ್ದೇವೆ ಎಂದು ಹೇಳಿಕೊಂಡು ಎಷ್ಟು ದಿನ ಇರುವುದು. ಇದನ್ನೇ ಹೇಳಿಕೊಂಡು ಎಷ್ಟು ಪಡೆಯುವುದು. ಪಕ್ಷದಲ್ಲಿ ಒಬ್ಬರಾಗಿ ನಾವು ಪಕ್ಷಕ್ಕೆ ಸೇವೆ ಮಾಡುವುದನ್ನು ಕಲಿಯಬೇಕು. ಪಕ್ಷ ಸೇವೆ ಮಾಡದೇ ನಾವು ತ್ಯಾಗ ಮಾಡಿ ಬಂದಿದ್ದೇವೆ ಎಂದು ಪದೇ ಪದೇ ಹೇಳುವುದು ನನಗೆ ಸರಿ ಕಾಣುವುದಿಲ್ಲ ಎಂದು ತಮ್ಮ ಎಂಟಿಬಿ ಬಗ್ಗೆ ಅತೃಪ್ತಿ ಹೊರಹಾಕಿದರು.
ಇದನ್ನು ಓದಿ: 2023ರ ವಿಧಾನಸಭೆ ಚುನಾವಣೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ ಕಾಂಗ್ರೆಸ್
ನಮ್ಮ ಮುಂದೆ ಇರುವ ಗುರಿ ಈಗ ಪಕ್ಷ ಸೇವೆ ಮಾಡುವುದು. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದು. ಅದನ್ನು ಬಿಟ್ಟು, ನಮಗೆ ದೊಡ್ಡ ಖಾತೆ ಬೇಕು ಎಂಬುದು ಸರಿಯಲ್ಲ. ಮೊದಲು ಪಕ್ಷದ ಕೆಲಸ ಮಾಡೋಣ ಬಳಿಕ ಖಾತೆ ಕೇಳೋಣ ಎಂದರು. ಇದೇ ವೇಳೆ ಇದು ನನ್ನ ವೈಯಕ್ತಿಯ ಅಭಿಪ್ರಾಯವಷ್ಟೇ ಎಂಬುದನ್ನು ಸ್ಪಷ್ಟಪಡಿಸಿದರು.
ಖಾತೆ ಸಿಗದೇ ಅಸಮಾಧಾನ ಹೊರ ಹಾಕಿರುವ ಎಂಟಿಬಿ ನಾಗರಾಜ್, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ.ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಟ್ವೀಟ್ ಮೂಲಕ ಸಿಎಂಗೆ ಗಡುವು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ