'ಕಾಂಗ್ರೆಸ್​ ತಾಯಿಗೆ ಚೂರಿ ಹಾಕಿದ ನಿನ್ನನ್ನು ಜನ ನಂಬ್ತಾರಾ?'; ಮುನಿರತ್ನ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಜನರನ್ನು ಹೆದರಿಸಿ ಈ ಚುನಾವಣೆಯಲ್ಲಿ ಗೆಲ್ಲಬಹುದು ಎಂದುಕೊಂಡಿದ್ದರೆ ನಿನ್ನಂತಹ ಮೂರ್ಖ ಬೇರೆ ಯಾರೂ ಇಲ್ಲ. ಕಾಂಗ್ರೆಸ್ ತಾಯಿಗೆ ಚೂರಿ ಹಾಕಿ ಹೋದ ನಿನ್ನನ್ನು ಜನ ನಂಬ್ತಾರಾ? ಎಂದು ಮುನಿರತ್ನ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಅ. 30): ಆರ್​ಆರ್​ ನಗರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ನೀನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದಿ. ನಿನ್ನನ್ನು ಸೋಲಿಸಲೇಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ. ನಿನ್ನಂಥವರು ರಾಜಕೀಯದಲ್ಲಿ ಇರಬಾರದು. ಕಣ್ಣೀರು ಹಾಕಿದ್ರೆ ಅನುಕಂಪ ಬರುತ್ತದೆ ಅಂತ ನೀನು ಅಂದ್ಕೊಂಡಿದ್ರೆ ತಪ್ಪು. ಕಾಂಗ್ರೆಸ್ ತಾಯಿಗೆ ಚೂರಿ ಹಾಕಿ ಹೋದ ನಿನ್ನನ್ನು ಜನ ನಂಬ್ತಾರಾ? ಎಂದು ಮುನಿರತ್ನ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಉಪಚುನಾವಣಾ ಪ್ರಚಾರ ಜೋರಾಗಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ. ರಾಮಲಿಂಗಾ ರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಂಟಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಜಾಲಹಳ್ಳಿ ವಾರ್ಡ್​ನಲ್ಲಿ ರೋಡ್ ಶೋ ನಡೆಸಿದ್ದಾರೆ. ಕಾಂಗ್ರೆಸ್​ನ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಸಿದ್ದರಾಮಯ್ಯ, ಆರ್‌ಆರ್‌ ನಗರದಲ್ಲಿ ಅಪರಾಧ ರಾಜಕಾರಣ ಜಾಸ್ತಿಯಾಗುತ್ತಿದೆ. ನಿರಪರಾಧಿಗಳ ಮೇಲೆ ಸುಳ್ಳು ಕೇಸ್ ಹಾಕೋದು, ಅರೆಸ್ಟ್ ಮಾಡೋದು, ಅವರನ್ನು ಹೆದರಿಸೋದು ಹೆಚ್ಚುತ್ತಿದೆ. ಆ ಮೂಲಕ ಮತದಾನ ಮಾಡಲು ಬರಬಾರದು ಅಂತ ಮುನಿರತ್ನ ಪ್ರಯತ್ನ ಮಾಡಿದ್ದಾರೆ. ನಾನು ರೋಡ್ ಶೋ ಮಾಡುವಾಗ, ಒಂದು ಗುಂಪು ಗಲಾಟೆ ಮಾಡಿತು. ಪ್ರಜಾಪ್ರಭುತ್ವದಲ್ಲಿ ನಿರ್ಭಯವಾಗಿ ಮತ ಚಲಾಯಿಸುವ ಹಕ್ಕು ಎಲ್ಲರಿಗೂ ಇದೆ. ಹಾಗೇ ಪ್ರಚಾರ ಮಾಡಲು ಕೂಡ ಎಲ್ಲರಿಗೂ ಹಕ್ಕಿದೆ. ಆದರೆ ಹೆದರಿಸಿ, ಬೆದರಿಸಿ ಓಟ್ ತೆಗೆದುಕೊಳ್ಳೋದು ಅನ್ಯಾಯ. ಪೊಲೀಸರು ಸಹ ತಮಗೆ ಒಳ್ಳೆಯ ಹುದ್ದೆ ಕೊಡಿಸಿದ್ದಾರೆ ಅಂತ ಕೆಲಸ ಮಾಡಬಾರದು. ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು, ಕಾನೂನು ಪ್ರಕಾರ ಸರಿ ಅನಿಸಿದ್ದನ್ನು ಮಾಡಬೇಕು. ಅದು ಬಿಟ್ಟು ಹೆದರಿಸಿ ಮಾಡೋದಾದ್ರೆ ಮುಂದಿನ ದಿನಗಳಲ್ಲಿ ನಿಮಗೆ ಕೆಟ್ಟದಿನಗಳು ಕಾದಿವೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: Darshan: ಪಕ್ಷಕ್ಕಿಂತ ನನಗೆ ವ್ಯಕ್ತಿ ಮುಖ್ಯ; ಮುನಿರತ್ನ ಪರ ನಟ​ ದರ್ಶನ್​ ಪ್ರಚಾರ

ಜನರನ್ನು ಹೆದರಿಸಿ ಈ ಚುನಾವಣೆಯಲ್ಲಿ ಗೆಲ್ಲಬಹುದು ಎಂದುಕೊಂಡಿದ್ದರೆ ಮುನಿರತ್ನನಂತಹ ಮೂರ್ಖ ಬೇರೆ ಯಾರೂ ಇಲ್ಲ. ಮುನಿರತ್ನ ನೀನು ಗೆದ್ದಿರೋದು ಕಾಂಗ್ರೆಸ್ ಅಭ್ಯರ್ಥಿಯಾಗಿ. ನಾನು ಅಭಿವೃದ್ಧಿ ಮಾಡಿದ್ದೇನೆ ಅಂತ ತಮಟೆ ಹೊಡಿತೀಯಲ್ಲ. ನಿನಗೆ ದುಡ್ಡು ಕೊಟ್ಟೋರು ಯಾರು? ನಾನು ಮುಖ್ಯಮಂತ್ರಿಯಾಗಿದ್ದರಿಂದ ನಿನಗೆ ಅಭಿವೃದ್ಧಿಗೆ ದುಡ್ಡು ಕೊಟ್ಟಿದ್ದೆ. ಕೆಲಸ, ದುಡ್ಡು ಎಲ್ಲವೂ ಕಾಂಗ್ರೆಸ್​ ಸರ್ಕಾರದ್ದು. ಆದರೆ, ಹೆಸರು ಮಾತ್ರ ನಿನ್ನದು. ಇವತ್ತು ನಾನು ಹಾಗೆ ಮಾಡಿದೆ, ನಾನು ಹೀಗೆ ಮಾಡಿದೆ ಅಂತ ಹೇಳಿಕೊಳ್ಳುತ್ತೀಯಲ್ಲ, ಅದೇನು ನಿಮ್ಮ ಮನೆ ದುಡ್ಡಾ? ಮನೆಯಿಂದ ದುಡ್ಡು ಪ್ರಿಂಟ್ ಮಾಡಿಕೊಂಡು ಬಂದಿದ್ದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಾಸಕನಾಗಿದ್ದಾಗಲೇ ಇಷ್ಟೊಂದು ಭ್ರಷ್ಟಾಚಾರ ಮಾಡಿದವರು ಇನ್ನು ಮಂತ್ರಿ ಆದರೆ ಮುಗಿಯಿತು. ಯಾವುದೇ ಕಾರಣಕ್ಕೂ ಮುನಿರತ್ನ ನಾಯ್ಡು ಗೆಲ್ಲಬಾರದು. ಬಿಜೆಪಿ ಸರ್ಕಾರ ಏನು ಮಾಡಿದೆ? ಕೊರೋನಾದಲ್ಲಿ ಎರಡು ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಎಲ್ಲಾ ದಾಖಲಾತಿಯನ್ನು ಅಸೆಂಬ್ಲಿಯಲ್ಲಿ ತೋರಿಸಿದ್ದೇನೆ. ಕೋರೋನಾ ಹೆಸರಲ್ಲಿ ಸಾರ್ವಜನಿಕರ ಹಣವನ್ನ ಲೂಟಿ ಮಾಡಿದ್ದಾರೆ. ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಈಗ ಮತ ಕೇಳೋಕೆ ನಿಮಗೆ ನಾಚಿಕೆ ಆಗಲ್ವಾ? ಸಂಬಳ ಕೊಡೋಕೆ ನಿಮ್ಮ ಬಳಿ ದುಡ್ಡಿಲ್ಲ. ಬಿಡಿಎ, ಸರ್ಕಾರದ ಆಸ್ತಿ ಮಾರಾಟ ಮಾಡ್ತಿದ್ದೀರ. ಒಂದೇ ವರ್ಷದಲ್ಲಿ 83 ಸಾವಿರ ಕೋಟಿ ರೂ. ಸಾಲ ಮಾಡಿದ್ದೀರ. ಈ ಹೊರೆ ಯಾರ ಮೇಲೆ? ಇದಕೋಸ್ಕರ ಮುನಿರತ್ನನನ್ನು ಗೆಲ್ಲಿಸಬೇಕಾ? ನಿಮಗೆ ಅಧಿಕಾರ ನಡೆಸಲು ಬರೋದಿಲ್ಲ. ಸುಮ್ಮನೆ ಅಧಿಕಾರ ಬಿಟ್ಟು ಕೆಳಗೆ ಇಳಿಯಿರಿ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published by:Sushma Chakre
First published: