ಕೊಡಗಿಗೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ ನಿಗೂಢ ಸಾವು; Home Stayನಲ್ಲಿ ಆಗಿದ್ದೇನು?

ಈ ಸಂಬಂಧ ಮಾತನಾಡಿರುವ ಯುವತಿಯ ತಂದೆ ಈಶ್ವರ್ ನನ್ನ ಮಗಳು ಆರೋಗ್ಯವಾಗಿದ್ದಳು.  ನಿತ್ಯ ವಾಕ್ ಕೂಡ ಮಾಡುತ್ತಿದ್ದವಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ಓಡಾಡಿ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ ಎಂದಿದ್ದಾರೆ.

ಮೃತ ಯುವತಿ

ಮೃತ ಯುವತಿ

  • Share this:
ಕೊಡಗು : ಪ್ರವಾಸಕ್ಕೆಂದು ಕೊಡಗಿಗೆ ಬಂದು ಮಡಿಕೇರಿಯ ಹೋಂಸ್ಟೇನಲ್ಲಿ ತಂಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮುಂಬೈ ಮೂಲದ ಈಶ್ವರ್ ಎಂಬುವರ ಮಗಳು ವಿಘ್ನೇಶ್ವರಿ (24) ಮೃತ ಯುವತಿ. ಮುಂಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ವಿಘ್ನೇಶ್ವರಿ ತನ್ನ ಹಳೆಯ ಸ್ನೇಹಿತೆಯರೊಂದಿಗೆ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದಳು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಯುವತಿ ವಿಘ್ನೇಶ್ವರಿ ಬಾತ್ ರೂಮಿನಲ್ಲಿ ಮೃತಪಟ್ಟಿದ್ದಾಳೆ. ಸ್ನಾನಕ್ಕೆಂದು ತೆರಳಿದ್ದ ಯುವತಿ ಬಾತ್ ರೂಮಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗಿದೆ.

ಜೊತೆಯಲ್ಲಿದ್ದ ಗೆಳೆತಿಯರಿಗೂ ಏಕಾಏಕಿ ಶಾಕ್​

ಯುವತಿ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಉಳಿದ ನಾಲ್ವರು ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಬಂದಿದ್ದಾನೆ. ಅಷ್ಟರಲ್ಲಿ ಯುವತಿ ಮೃತಪಟ್ಟಿರೋದು ಗೊತ್ತಾಗಿದೆ. ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾತ್​ರೂಮ್​ನಲ್ಲಿ ಆಗಿದ್ದೇನು? 

ಕೊಡಗಿಗೆ ಬಂದಿದ್ದ ವಿಘ್ನೇಶ್ವರಿ ಮತ್ತು ಸ್ನೇಹಿತೆಯರು ಅಬ್ಬಿಫಾಲ್ಸ್, ದುಬಾರೆ ಸೇರಿದಂತೆ ವಿವಿಧೆಡೆ ಸುತ್ತಾಡಿದ್ದಾರೆ. ಭಾನುವಾರ ಭಾಗಮಂಡಲ ತಲಕಾವೇರಿಯಲ್ಲಿ ಸುತ್ತಾಡಿದ್ದಾರೆ. ಬಳಿಕ ಪುನಃ ಹೋಂಸ್ಟೇಗೆ ಬಂದು ತಂಗಿದ್ದಾರೆ. ನಿನ್ನೆ ಇಂಡಿಯಾ ಪಾಕಿಸ್ತಾನ ಟಿ 20 ಕ್ರಿಕೆಟ್ ಮ್ಯಾಚ್ ಅನ್ನು ಹೋಂಸ್ಟೇನಲ್ಲೇ ನೋಡಿದ್ದಾರೆ. ವಿಘ್ನೇಶ್ವರಿ ಜೊತೆಗೆ ಇದ್ದ ಉಳಿದ ನಾಲ್ವರ ಪೈಕಿ ಮೂವರು ಸ್ನಾನ ಮುಗಿಸಿದ ಬಳಿಕ ವಿಘ್ನೇಶ್ವರಿ ಸ್ನಾನ ಮಾಡೋದಕ್ಕೆ ಅಂತ ಬಾತ್ ರೂಮಿಗೆ ಹೋಗಿದ್ದಾಗ ಅಲ್ಲಿಯೇ ಮೃತಪಟ್ಟಿದ್ದಾರೆ. ಆದರೆ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಹೆತ್ತವರ ಕಣ್ಣೀರು 

ಈ ಸಂಬಂಧ ಮಾತನಾಡಿರುವ ಯುವತಿಯ ತಂದೆ ಈಶ್ವರ್ ನನ್ನ ಮಗಳು ಆರೋಗ್ಯವಾಗಿದ್ದಳು.  ನಿತ್ಯ ವಾಕ್ ಕೂಡ ಮಾಡುತ್ತಿದ್ದವಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ಓಡಾಡಿ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ. ಗ್ಯಾಸ್ ಗೀಜರ್ ಲೀಕ್ ಆಗಿ ಮೃತಪಟ್ಟಿರುವ ಅನುಮಾನ ಇದೆ. ಈ ಕುರಿತು ಸರಿಯಾದ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಗ್ಯಾಸ್ ಲೀಕ್​ ಆಗಲು ಗೀಜರ್ ಗೆ ಕನೆಕ್ಷನ್ ಕೊಟ್ಟಿರಲಿಲ್ಲ

ಇನ್ನು ಹೋಂಸ್ಟೇ ಮಾಲೀಕ ಮುಕ್ತರ್ ಗ್ಯಾಸ್ ಗೀಜರ್ ಗೆ ಕನೆಕ್ಷನ್ ಕೊಟ್ಟಿಲ್ಲ. ಹೇಗೆ ಮೃತಪಟ್ಟಿದ್ದಾರೆ ಎನ್ನೋದು ಗೊತ್ತಾಗಿಲ್ಲ ಎಂದಿದ್ದಾರೆ. ಅವರ ಸ್ನೇಹಿತೆಯರು ಕಾಲ್ ಮಾಡಿ ಹೇಳಿದ್ದಾಗಲೇ ನಮಗೂ ಗೊತ್ತಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೈದ್ಯರ ವರದಿಯಿಂದಷ್ಟೇ ಸಾವಿಗೆ ಕಾರಣವೇನು ಎನ್ನೋದು ಗೊತ್ತಾಗಬೇಕಾಗಿದೆ.

ಇದನ್ನೂ ಓದಿ: Unseasonal Rain; ನಿರಂತರ ಮಳೆ, ರೈತ ಕಂಗಾಲು: ಕಣ್ಣೀರು ತರಿಸುತ್ತೆ ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದ ರೈತರ ಸ್ಥಿತಿ

ಕೊರೊನಾ ಕಡಿಮೆಯಾಗುತ್ತಿದ್ದು ಜನ ಪ್ರವಾಸಗಳತ್ತ ಮುಖ ಮಾಡುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಮಂದಿ ಗೆಳೆಯರೊಂದಿಗೆ ಟ್ರಿಪ್​ ಗೆ ಹೋಗುತ್ತಿದ್ದಾರೆ. ಆದರೆ ಕೊರೊನಾ ಕಮ್ಮಿಯಾದ ಮಾತ್ರಕ್ಕೆ ಬೇರೆ ಯಾವ ಅಪಾಯವೂ ಇಲ್ಲ ಎಂದು ಹೇಳಲು ಆಗುವುದಿಲ್ಲ. ಹೊಸ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ಸಮಸ್ಯೆಗಳಿದ್ದರೆ ಸ್ವಯಂ ನಿಯಂತ್ರಣ, ಮುನ್ನೆಚ್ಚರಿಕೆ ಬಹಳನೇ ಮುಖ್ಯ. ಜೊತೆಯಲ್ಲಿ ಇರುವವರಿಗೂ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ತಿಳಿಸಿರುವುದು ಒಳ್ಳೆಯದು.
Published by:Kavya V
First published: