ಅತೃಪ್ತರಿಗೆ ಅನರ್ಹತೆಯ ಭಯ ನಿವಾರಿಸಲು ಬಿಜೆಪಿಯಿಂದ ಸುಪ್ರೀಂ ರಕ್ಷಣೆಯ ಭರವಸೆ

ವಿಶ್ವಾಸ ಮತ ಯಾಚನೆ ವೇಳೆ ಗೈರಾದರೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ರೋಹಟಗಿ ಅವರು ಪರೋಕ್ಷವಾಗಿ ತಿಳಿಸಿ, ಅತೃಪ್ತರ ಶಾಸಕರಿಗೆ ಧೈರ್ಯ ತುಂಬವ ಕೆಲಸ ಮಾಡಿದ್ದಾರೆ.

news18
Updated:July 13, 2019, 6:49 PM IST
ಅತೃಪ್ತರಿಗೆ ಅನರ್ಹತೆಯ ಭಯ ನಿವಾರಿಸಲು ಬಿಜೆಪಿಯಿಂದ ಸುಪ್ರೀಂ ರಕ್ಷಣೆಯ ಭರವಸೆ
ಸುಪ್ರೀಂ ಕೋರ್ಟ್
  • News18
  • Last Updated: July 13, 2019, 6:49 PM IST
  • Share this:
ನವದೆಹಲಿ(ಜುಲೈ 13): ರಾಜೀನಾಮೆ ನೀಡಿರುವ ಮೈತ್ರಿಪಕ್ಷಗಳ ಶಾಸಕರ ನೆತ್ತಿಯ ಮೇಲೆ ಅನರ್ಹತೆಯ ಕತ್ತು ತೂಗುತ್ತಿದೆ. ಅತೃಪ್ತರ ರಾಜೀನಾಮೆ ವಾಪಸ್ ಪಡೆಯಲು ಮೈತ್ರಿಪಾಳಯದಲ್ಲಿ ಪ್ರಮುಖ ಅಸ್ತ್ರವಾಗಿ ಉಳಿದಿರುವುದು ಅನರ್ಹತೆ ಶಿಕ್ಷೆಯೇ. ಬಿಜೆಪಿಯ ಆರನೇ ಆಪರೇಷನ್ ಕಮಲದ ಯಶಸ್ಸಿಗೆ ಅಡ್ಡಿಯಾಗಿರುವುದು ಇದೇ ಅನರ್ಹತೆಯ ಅಸ್ತ್ರವೇ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಾಸಕರ ಅನರ್ಹತೆಯ ಭಯ ನಿವಾರಿಸುವ ಪ್ರಯತ್ನ ನಡೆದಿದೆ. ಶಾಸಕರ ರಾಜೀನಾಮೆ ಮತ್ತುಅನರ್ಹತೆಯ ವಿಚಾರವಾಗಿ ಯಥಾಸ್ಥಿತಿ ಪಾಲಿಸಬೇಕೆಂದು ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೇ ಮುಂದಿಟ್ಟುಕೊಂಡು ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇದೆ.

ಈ ಸಂಬಂಧ ಅತೃಪ್ತರ ಪರ ವಕೀಲ ಮುಕುಲ್ ರೋಹಟಗಿ ಅವರು ಪತ್ರ ಬರೆದು ಭರವಸೆ ನೀಡಿದ್ದಾರೆ. ಪ್ರಕರಣವು ಸ್ಪೀಕರ್ ಬದಲು ಸುಪ್ರೀಂ ಕೋರ್ಟ್ ಅಂಗಳದಲ್ಲಿರುವುದರಿಂದ ಅನರ್ಹತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಅತೃಪ್ತರಿಗೆ ವಕೀಲರು ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ಗೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದ ಸ್ಪೀಕರ್ ರಮೇಶ್​ ಕುಮಾರ್

ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವಂತೆ ಮೈತ್ರಿಪಕ್ಷಗಳು ತಮ್ಮ ಶಾಸಕರೆಲ್ಲರಿಗೂ ವಿಪ್ ಹೊರಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ರಾಜೀನಾಮೆ ಮತ್ತು ಅನರ್ಹತೆಯ ವಿಷಯವಷ್ಟೇ ಅಲ್ಲದೇ, ವಿಪ್ ಕೂಡ ಒಳಗೊಂಡಿದೆ. ಹೀಗಾಗಿ, ಸುಪ್ರೀಂ ಕೋರ್ಟ್​ನಿಂದ ಅಂತಿಮ ತೀರ್ಪು ಬರುವವರೆಗೂ ಯಾವ ಶಾಸಕರೂ ಅನರ್ಹತೆಯ ಭಯ ಹೊಂದಿರಬೇಕಿಲ್ಲ ಎಂದು ಮುಕುಲ್ ರೋಹಟಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ವಿಶ್ವಾಸ ಮತ ಯಾಚನೆ ವೇಳೆ ಗೈರಾದರೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ರೋಹಟಗಿ ಅವರು ಪರೋಕ್ಷವಾಗಿ ತಿಳಿಸಿ, ಅತೃಪ್ತರ ಶಾಸಕರಿಗೆ ಧೈರ್ಯ ತುಂಬವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಎದೆ ಬಗೆದರೆ ನಾನೇ ಇರುತ್ತೇನೆ ಎಂದವನಿಗೆ ರಾಜೀನಾಮೆ ನೀಡುವಾಗ ರಾಮ ಸ್ವರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೇ?; ಎಂಟಿಬಿ​ಗೆ ಸಿದ್ದು ಪ್ರಶ್ನೆ

ಮುಕುಲ್ ರೋಹಟಗಿ ಬರೆದ ಪತ್ರದಲ್ಲೇನಿದೆ?ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 10 ಶಾಸಕರ ಅನರ್ಹತೆಯ ವಿಚಾರವನ್ನು ಸ್ಪೀಕರ್ ನಿರ್ಧರಿಸಲು ಬರುವುದಿಲ್ಲ. ಇದು ವಿಪ್ ವಿಚಾರಕ್ಕೂ ಅನ್ವಯವಾಗುತ್ತದೆ. ಈ ತೀರ್ಪು ಯಾವುದೇ ನಿರ್ದಿಷ್ಟ ಅನರ್ಹತೆಯ ಅರ್ಜಿಗಷ್ಟೇ ಸೀಮಿತವಾಗುವುದಿಲ್ಲ ಎಂದು ಮುಕುಲ್ ರೋಹಟಗಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

10 ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ಜುಲೈ 16, ಮಂಗಳವಾರದಂದು ವಿಚಾರಣೆ ನಡೆಸಲಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಪಾಲನೆಯಾಗಬೇಕು. ಶಾಸಕರ ರಾಜೀನಾಮೆ ಮತ್ತು ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠ ನಿನ್ನೆ ತಿಳಿಸಿದೆ.

ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಬೇಕೆಂದು ಮೈತ್ರಿಪಕ್ಷಗಳ ಸಚೇತಕರು ಮೊನ್ನೆ ಎಲ್ಲಾ ಶಾಸಕರಿಗೂ ವಿಪ್ ಹೊರಡಿಸಿದ್ದರು. ಆದರೆ, ನಿನ್ನೆ ಆರಂಭವಾದ ಅಧಿವೇಶನದ ಮೊದಲ ದಿನದಂದು ಯಾವ ಭಿನ್ನಮತೀಯರೂ ಹಾಜರಾಗಲಿಲ್ಲ. ಬಳಿಕ ರಾಜ್ಯದ ಮೂರೂ ಪಕ್ಷಗಳ ಬಹುತೇಕ ಶಾಸಕರು ವಿವಿಧ ರೆಸಾರ್ಟ್ ಮತ್ತು ಹೋಟೆಲ್​ಗಳಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಪ್ರಾದೇಶಿಕತೆಯ ಕಹಳೆ ಊದಿದ ಉಪರಾಷ್ಟ್ರಪತಿ; ಮುದ್ದೆ, ನಾಟಿ ಕೋಳಿ ಊಟ ನೆನೆದ ವೆಂಕಯ್ಯ ನಾಯ್ಡು

ಕೆಲ ಅತೃಪ್ತ ಶಾಸಕರನ್ನು ಮನವೊಲಿಸಿ ವಾಪಸ್ ಕರೆಸಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ಧಾರೆ. ರಾಮಲಿಂಗಾ ರೆಡ್ಡಿ, ಎಂಟಿಬಿ ನಾಗರಾಜು, ಡಾ| ಕೆ. ಸುಧಾಕರ್ ಮೊದಲಾದವರು ಕಂಬ್ಯಾಕ್ ಮಾಡಿದರೂ ಅಚ್ಚರಿ ಇಲ್ಲ. ಸಿಎಂ ಕುಮಾರಸ್ವಾಮಿ ಅವರು ಬುಧವಾರಂದು ವಿಶ್ವಾಸ ಮತಯಾಚನೆ ಮಾಡುವ ನಿರೀಕ್ಷೆ ಇದೆ. ಅಷ್ಟರೊಳಗೆ ಭಿನ್ನಮತ ಶಮನ ಮಾಡಿ ಆಪರೇಷನ್ ಕಮಲವನ್ನು 6ನೇ ಬಾರಿ ವಿಫಲಗೊಳಿಸುವ ಯೋಜನೆ ಮೈತ್ರಿಸರ್ಕಾರದ್ದಾಗಿದೆ.

ಈವರೆಗೆ ಮೈತ್ರಿಪಕ್ಷಗಳಿಂದ ಒಟ್ಟು 16 ಶಾಸಕರು ರಾಜೀನಾಮೆ ನೀಡಿದ್ಧಾರೆ. ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಇದರೊಂದಿಗೆ ವಿಧಾನಸಭೆಯಲ್ಲಿ 119 ಇದ್ದ ಮೈತ್ರಿಪಕ್ಷಗಳ ಬಲಾಬಲ ಈಗ 101ಕ್ಕೆ ಇಳಿದಂತಾಗುತ್ತದೆ. ಬಿಜೆಪಿಯ ಬಲ 107ಕ್ಕೆ ಏರಿದೆ. ವಿಶ್ವಾಸಮತ ಯಾಚನೆ ವೇಳೆ ರಾಜೀನಾಮೆ ನೀಡಿದ ಶಾಸಕರೆಲ್ಲರೂ ಗೈರಾದರೆ ಹೆಚ್​ಡಿಕೆ ನೇತೃತ್ವದ ಸರ್ಕಾರ ಪತನವಾಗುತ್ತದೆ.

(ವರದಿ: ಧರಣೀಶ್ ಬೂಕನಕೆರೆ)
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ