ಬಾಗಲಕೋಟೆ (ಜ. 6): ಮುಧೋಳ ಶ್ವಾನ ಭಾರತೀಯ ಸೇನೆಯಲ್ಲಿ ಚಾಕಚಕ್ಯತೆ ತೋರಿದೆ. ಇದೀಗ ವಾಯುಸೇನೆಯಲ್ಲೂ ಮುಧೋಳ ನಾಯಿಯನ್ನು ಬಳಸಿಕೊಳ್ಳಲು ಮುಂದಾಗಿದ್ದು, Mudhol Hound ಶ್ವಾನಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಪ್ರಧಾನಿ ನರೇಂದ್ರ ಮೋದಿ Mann Ki Baatನಲ್ಲಿ ಮುಧೋಳ ಶ್ವಾನದ ಬಗ್ಗೆ ಪ್ರಸ್ತಾಪಿಸಿದ ಬಳಿಕವಂತೂ ಮುಧೋಳ ನಾಯಿಯ ಬೇಡಿಕೆ ದುಪ್ಪಟ್ಟಾಗಿದೆ. ಬೇಟೆಗೆ ಹೆಸರುವಾಸಿಯಾಗಿರುವ ನಾಯಿ ಮುಧೋಳ. ಬೇಟೆಯ ಬೆನ್ನತ್ತಿದರೆ ಮಿಸ್ ಆಗುವ ಚಾನ್ಸೇ ಇಲ್ಲ. ಶರವೇಗದಲ್ಲಿ ಓಡುವ ಮುಧೋಳ ಹೌಂಡ್ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು, ಸಣಕಲು ದೇಹದ ಉದ್ದನೆಯ ಕಾಲು, ಕೋಲು ಮುಖ ಹೊಂದಿದೆ Mudhol Dog.
ಮುಧೋಳ ನಾಯಿ ದೇಶೀಯ ತಳಿ. ಈ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಮುಧೋಳ ಶ್ವಾನದ ಬಗ್ಗೆ ಪ್ರಸ್ತಾಪಿಸಿ, ಮುಧೋಳ ತಳಿಯ ಶ್ವಾನ ಸಾಕಲು ಸಲಹೆ ನೀಡಿದ್ದರು. 2018ರ ಜಮಖಂಡಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮುಧೋಳ ಶ್ವಾನಕ್ಕಿರುವ ದೇಶಪ್ರೇಮ ಕಾಂಗ್ರೆಸ್ನವರಿಗಿಲ್ಲ ಎಂದು ಟೀಕಿಸಿದ್ದರು. ಈಗಾಗಲೇ ಭಾರತೀಯ ಭೂ ಸೇನೆಯ ವಿವಿಧ ವಿಭಾಗದಲ್ಲಿ ಮುಧೋಳ ನಾಯಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಭೂ ಸೇನೆಯ ಬಳಿಕ ಪ್ರಥಮ ಬಾರಿಗೆ ವಾಯುಸೇನೆಯಲ್ಲೂ ಕಾರ್ಯನಿರ್ವಹಿಸಲು ಮುಧೋಳ ಶ್ವಾನ ಸಜ್ಜಾಗುತ್ತಿದೆ.
ಈಗಾಗಲೇ ಭಾರತೀಯ ಸೇನೆ, ಸಶಸ್ತ್ರ ಸೀಮಾ ಪಡೆ, ಇಂಡೋ-ಟಿಬೆಟಿಯನ್ ಬಾರ್ಡ್ ಫೋರ್ಸ್, ಸಿಆರ್ ಪಿಎಫ್ ಸೇರಿ ವಿವಿಧ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಮುಧೋಳ ಶ್ವಾನ ಈಗ ಭಾರತೀಯ ವಾಯುಸೇನೆ ಸೇರಲು ಸಜ್ಜಾಗಿದೆ.ಆಗ್ರಾದ ವಾಯುಸೇನೆಯಿಂದ 7 ಶ್ವಾನ ಮರಿಗಳಿಗೆ ಬೇಡಿಕೆ ಬಂದಿದೆ. ಮೊದಲ ಹಂತದಲ್ಲಿ ಎರಡು ಹೆಣ್ಣು, ಎರಡು ಗಂಡು ಮರಿಗಳನ್ನು ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಕೊನೆಯ ವಾರದಲ್ಲಿ ಮುಧೋಳ ಶ್ವಾನ ತಳಿ ಸಂಶೋಧನಾ ಕೇಂದ್ರದಿಂದ ವಾಯುಸೇನೆಗೆ ಶ್ವಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಮುಧೋಳ ಶ್ವಾನ ತಳಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಮಹೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: Fire Accident - ರಾಮನಗರದ ಶಕ್ತಿ ಅಕ್ಯುಮುಲೇಟರ್ಸ್ ಕಂಪನಿ ಭಸ್ಮ; ಜೀವ ಉಳಿಸಿಕೊಂಡ ಕಾರ್ಮಿಕರು
ಮುಧೋಳ ಶ್ವಾನ ಸೇನೆಯಲ್ಲಿನ ಕಾರ್ಯಕ್ಷಮತೆಯನ್ನು ಮನಗಂಡಿರುವ ರಾಜ್ಯ ಪೊಲೀಸ್ ಇಲಾಖೆಯೂ ಮುಧೋಳ ಶ್ವಾನ ಬಳಕೆಗೆ ಮುಂದಾಗಿದೆ. ಮೊದಲ ಹಂತವಾಗಿ ಬಾಗಲಕೋಟೆಯ ಜಿಲ್ಲಾ ಪೊಲೀಸ್ ಇಲಾಖೆಗೆ ಒಂದು ಮುಧೋಳ ಶ್ವಾನ ಪಡೆಯಲಿದ್ದೇವೆ. ಬಳಿಕ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಮುಧೋಳ ಶ್ವಾನ ನೀಡುವ ಯೋಜನೆ ಇದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ ತಿಳಿಸಿದರು.ಇನ್ನು ಮುಧೋಳ ಶ್ವಾನ ರಾಜ ಮಹಾರಾಜರ ಕಾಲದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಮುಧೋಳ ಮಹಾರಾಜ ಮಾಲೋಜಿರಾವ್ ಮುಧೋಳ ಶ್ವಾನವನ್ನು ಹೆಚ್ಚು ಪ್ರಚುರಪಡಿಸಿದರು. ನಂತರ ಶಿವಾಜಿ ಮಹಾರಾಜರು ತಮ್ಮ ಸೇನೆಯಲ್ಲಿ ಮುಧೋಳ ಶ್ವಾನ ಬಳಸಿಕೊಂಡಿದ್ದರು. ಹಲಗಲಿ ಬೇಡರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳ ಶ್ವಾನ ಭಾಗಿಯಾಗಿತ್ತು.
ಸದ್ಯ ಮುಧೋಳ ಶ್ವಾನ ಭಾರತೀಯ ಸೇನೆ,ಸೀಮಾ ಸುರಕ್ಷಾ ಬಲ ದಳ,ಸೆಂಟ್ರಲ್ ಇಂಡಸ್ಟ್ರಿ ಸೆಕ್ಯುರಿಟಿ ಪೋರ್ಸ್,ಸಿ ಆರ್ ಪಿ ಎಫ್ , ಗ್ವಾಲಿಯರ್ ಬಿಎಸ್ ಎಫ್ ,ಬಂಡೀಪುರದ ಅರಣ್ಯ ಅಪರಾಧ ವಿಭಾಗದಲ್ಲೂ ಮುಧೋಳ ಶ್ವಾನ ಸೇವೆ ಸಲ್ಲಿಸುತ್ತಿದೆ. ವಿಶ್ವದಲ್ಲಿ 332 ಶ್ವಾನ ತಳಿಗಳಿವೆ. ಇದರಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿರುವ ತಳಿಗಳ ಸಂಖ್ಯೆ 20 ಮಾತ್ರ. ಅದರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ದೇಶಿ ತಳಿಯ ಶ್ವಾನ ಅಂದರೆ ಅದು ಮುಧೋಳ ಹೌಂಡ್.
(ವರದಿ: ರಾಚಪ್ಪ ಬನ್ನಿದಿನ್ನಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ