ಮುಧೋಳ ಶ್ವಾನಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್​; ದೇಶದ ರಕ್ಷಣೆಯಿಂದ ಮನೆಯಲ್ಲಿ ಸಾಕಲು ಕೂಡ ದೇಸಿ ತಳಿಯೇ ಬೇಕು

ಸೇನೆಯಲ್ಲಿ ದೇಶಿಯ ತಳಿಯ ಸಾಮರ್ಥ್ಯ ಹೆಚ್ಚುತ್ತಿರುವ ಹಿನ್ನಲೆ ಈಗ ಈ ತಳಿಗಳ ಅಭಿವೃದ್ಧಿಗೆ ಸಂಸ್ಥೆ ಮುಂದಾಗಿದೆ. ಜನರು ಕೂಡ ಈಗ ಈ ಶ್ವಾನಗಳನ್ನು ಸಾಕುವತ್ತ ಮನಸು ಮಾಡುತ್ತಿದ್ದಾರೆ.

ಮುಧೋಳ ನಾಯಿ

ಮುಧೋಳ ನಾಯಿ

  • Share this:
ಬಾಗಲಕೋಟೆ (ಅ. 15): ಅಪ್ಪಟ ದೇಸಿ ತಳಿಯ ಮುಧೋಳ ನಾಯಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಮನ್​ ಕೀ ಬಾತ್​ನಲ್ಲಿ ಮುಧೋಳದ ಶ್ವಾನಗಳನ್ನು ಉಲ್ಲೇಖಿಸಿದ ಬಳಿಕ ಇದರ ಬೇಡಿಕೆ ದುಪ್ಪಟ್ಟಾಗಿದೆ. ದೇಶದ ರಕ್ಷಣೆಯಿಂದ ಮನೆಯಲ್ಲಿ ಸಾಕಲು ಕೂಡ ಜನರು ಈ ತಳಿಯೇ ಬೇಕು ಎನ್ನುತ್ತಿದ್ದಾರೆ. ಈಗಾಗಲೇ ಸೇನೆಯಲ್ಲಿ ತನ್ನ ಮಿಂಚಿನ ಕಾರ್ಯಾಚರಣೆ ಮೂಲಕ ಮುಧೋಳ ನಾಯಿಗಳು ಹೆಸರು ಪಡೆದಿದೆ. ಇದೇ ಹಿನ್ನಲೆ ಸೇನೆ ಹೊರತಾಗಿ ಅರಣ್ಯ ಸೇರಿದಂತೆ ಮತ್ತಿತ್ತರ ಇಲಾಖೆಗಳಲ್ಲಿಯೂ ಈ ಶ್ವಾನಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಿಂದ  ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿಯಲ್ಲಿರುವ  ಶ್ವಾನ ಸಂಶೋಧನಾ ಕೇಂದ್ರದಲ್ಲಿ ಇದರ ವಂಶಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. 

ಈಗಾಗಲೇ ಭಾರತೀಯ ಸೇನೆಗೆ ಸೇರಿ, ಕಾಶ್ಮೀರದಲ್ಲಿ ಸದ್ದು ಮಾಡಿರುವ ಮುಧೋಳ ಶ್ವಾನಗಳ ಪರಾಕ್ರಮದ ಬಗ್ಗೆ ಈಗಾಗಲೇ ಮೆಚ್ಚುಗೆ ಮಾತು ಕೇಳಿಬಂದಿವೆ. ಪ್ರಧಾನಿ ಮೋದಿ ಕೂಡ ಇದರ ಸಾಮರ್ಥ್ಯ ಕೊಂಡಾಡಿದ್ದು, ದೇಶಿಯ ಶ್ವಾನಗಳನ್ನು ಶೂರತ್ವವನ್ನು ಕೊಂಡಾಡಿದ್ದರು. ಈ ಮುಧೋಳ ಶ್ವಾನಗಳ ಸಾಮರ್ಥ್ಯ ಅರಿತ ಬಳಿಕ ಈಗ ಗ್ವಾಲಿಯರ್​ ಗಡಿ ಭದ್ರತಾ ಪಡೆ ಕೂಡ ನಾಲ್ಕು ಮುಧೋಳ ತಳಿಯ ಶ್ವಾನವನ್ನು ಸೇನೆಗೆ ಸೇರ್ಪಡನೆ ಮಾಡಿಕೊಂಡಿದೆ

ಗ್ವಾಲಿಯರ್​ ಗಡಿ ಭದ್ರತಾ ಪಡೆ ಇಂದು ನಾಲ್ಕು ಮರಿಗಳನ್ನು ತೆಗೆದುಕೊಂಡು ಹೋಗಿರುವ ಚಿತ್ರಣ


ಇಂದು ಮುಧೋಳ ಶ್ವಾನಗಳ ಕೇಂದ್ರಕ್ಕೆ ಆಗಮಿಸಿದ ಗ್ವಾಲಿಯರ್​  ಬಿಎಸ್​ಎಫ್​ನ  ಡೆಪ್ಯುಟಿ ಕಮಾಂಡೆಂಟ್ ರೋಹಿಂದ್ರ ಸಿಂಗ್ ನೇತೃತ್ವದ ತಂಡ ನಾಲ್ಕು ಮರಿಗಳನ್ನು ಪಡೆದಿದ್ದಾರೆ. ಇನ್ನು ಬಂಡೀಪುರದ  ಅರಣ್ಯ ಅಪರಾಧದಳ ಕೂಡ ಈಗಾಗಲೇ ಎರಡು ಮುಧೋಳ ಶ್ವಾನ ಮರಿಗಳನ್ನು ತೆಗೆದುಕೊಂಡು ಹೋಗಿ ತರಬೇತಿ ನೀಡಲು ಮುಂದಾಗಿದ್ದಾರೆ.

ಮುಧೋಳದ ಮಹಾರಾಜ ಮಾಲೋಜಿರಾವ್ ಘೋರ್ಪಡೆ ಪರ್ಶಿಯನ್ ನಾಯಿಗಳು ಹಾಗೂ ಸ್ಥಳೀಯ ನಾಯಿ ತಳಿಗಳ ಸಂಕರದ ಮುಧೋಳ ನಾಯಿ ತಳಿಗಳ ಅಭಿವೃದ್ಧಿ ಗೆ ಒತ್ತು ನೀಡಿದ್ದರು.

ವಂಶಾಭಿವೃದ್ಧಿ ಹೆಚ್ಚಳಕ್ಕೆ ಒತ್ತು

ಸೇನೆಯಲ್ಲಿ ದೇಶಿಯ ತಳಿಯ ಸಾಮರ್ಥ್ಯ ಹೆಚ್ಚುತ್ತಿರುವ ಹಿನ್ನಲೆ ಈಗ ಈ ತಳಿಗಳ ಅಭಿವೃದ್ಧಿಗೆ ಸಂಸ್ಥೆ ಮುಂದಾಗಿದೆ. ಜನರು ಕೂಡ ಈಗ ಈ ಶ್ವಾನಗಳನ್ನು ಸಾಕುವತ್ತ ಮನಸು ಮಾಡುತ್ತಿದ್ದಾರೆ. ಇದರಿಂದ ಈ ಶ್ವಾನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಚಿಕ್ಕ ಮರಿಗಳಿಗೆ 10ಸಾವಿರ ,ದೊಡ್ಡ ಶ್ವಾನಕ್ಕೆ 2 ಲಕ್ಷದವರೆಗೂ ಮಾರಾಟವಾಗುತ್ತಿದೆ.ಈ ಶ್ವಾನಗಳ ಅಭಿವೃದ್ಧಿಗಾಗಿ   2010ರಲ್ಲಿ  ಮುಧೋಳ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶ್ವಾನ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ(ಮುಧೋಳ ಹೌಂಡ್ ) ಸ್ಥಾಪಿಸಲಾಗಿದೆ. ಇಲ್ಲಿ ಮುಧೋಳ ತಳಿಗಳ ವಂಶಾಭಿವೃದ್ಧಿ ಕೈಗೊಳ್ಳಲಾಗುತ್ತಿದೆ.  50 ಶ್ವಾನಗಳಿಂದ ತಳಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ‌. ಸದ್ಯ ಇಲ್ಲಿ 14 ಶ್ವಾನದ ಮರಿಗಳಿವೆ. ಈವರೆಗೆ ರಕ್ಷಣಾ ಪಡೆಗಳು 20 ನಾಯಿಗಳನ್ನು ತರಬೇತಿಗಾಗಿ ಇಲ್ಲಿಂದ ಪಡೆಯಲಾಗಿದೆ.

ಇದನ್ನು ಓದಿ: ರಾಣಾನ ಸ್ಥಾನ ತುಂಬಲು ಬಂಡೀಪುರಕ್ಕೆ ಬರಲಿದೆ ಮುಧೋಳ ತಳಿಯ ಶ್ವಾನದಳ

ಎಲ್ಲಾ ಹವಾಮಾನಕ್ಕೂ ಈ ಶ್ವಾನಗಳು ಹೊಂದಿಕೊಳ್ಳುತ್ತಿರುವುದರಿಂದ ಸೇನೆಯಲ್ಲಿ ಈ ಶ್ವಾನಗಳ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ  ಸೈನಿಕರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುವ ಕಾಯಕದಲ್ಲಿ ತೊಡಗಿಕೊಂಡು ಈ ಶ್ವಾನಗಳು ಶಹಬ್ಬಾಸ್ ಗಿರಿ ಪಡೆದವು. ಅಲ್ಲದೇ   ಸುಧಾರಿತ ಸ್ಪೋಟಕಗಳ ಪತ್ತೆ, ಬಂಡಾಯ ನಿಗ್ರಹ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಕೂಡ ಇವು ಯಶಸ್ವಿಯಾಗಿವೆ.

ಈಗಾಗಲೇ  ಭಾರತೀಯ ಸೇನೆ-6, ರಾಜಸ್ಥಾನದ ಸಶಸ್ತ್ರ ಸೀಮಾ ಬಲ-4,  ಬೆಂಗಳೂರಿನ ಸಿಆರ್ ಪಿ ಎಫ್ -4 ,ಸಿಐಎಸ್ ಎಫ್ ಶ್ರೀಹರಿಕೋಟಾ-1 ಮುಧೋಳ ಶ್ವಾನಗಳನ್ನು ಭದ್ರತೆಗಾಗಿ ಪಡೆದುಕೊಳ್ಳಲಾಗಿದೆ.

ವಿಶೇಷತೆ: 

ತೀಕ್ಷ್ಣ ಕಣ್ಣು, ಚಿರತೆ ವೇಗ, ತೆಳುವಾದ ಚಪ್ಪಟೆ ತಲೆ, ಅಗಲವಾದ ಕಾಲು, ತೆಳ್ಳನೆ ದೇಹ, ಬಿಳಿ ಮತ್ತು ಕಂದು ಬಣ್ಣ ಇದರ ವೈಶಿಷ್ಟ್ಯ.  ಕ್ರಿಪೂ 500ರಲ್ಲಿಯೇ ಮುಧೋಳ್ ನಾಯಿ ನಮ್ಮ ಕರ್ನಾಟಕದವರಿಗೆ ಪರಿಚಯಿಸಲಾಗಿದೆ.
Published by:Seema R
First published: