HOME » NEWS » State » MTB NAGARAJ TAKES CHARGE OF HIS NEW MINISTRY KGV SNVS

ಹೊಸ ಖಾತೆಯಿಂದ ಎಂಟಿಬಿಗೆ ಸಮಾಧಾನ; ಆದರೆ ಬೆಂ. ಗ್ರಾಮಾಂತರ ಉಸ್ತುವಾರಿ ಸ್ಥಾನದ ಮೇಲೆ ಕಣ್ಣು?

ವಸತಿ ಖಾತೆ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್ ಸದ್ಯಕ್ಕೆ ತಮಗೆ ಸಿಕ್ಕಿರುವ ಪೌರಾಡಳಿತ ಮತ್ತು ಸಕ್ಕರೆ ಖಾತೆಗಳ ಬಗ್ಗೆ ತೃಪ್ತರಾದಂತಿದೆ. ಇಂದು ವಿಧಾನಸೌಧದಲ್ಲಿ ತಮ್ಮ ಕೊಠಡಿಯಲ್ಲಿ ಪೂಜೆ ಮಾಡಿ ಅಧಿಕೃತವಾಗಿ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ.

news18-kannada
Updated:January 25, 2021, 11:35 AM IST
ಹೊಸ ಖಾತೆಯಿಂದ ಎಂಟಿಬಿಗೆ ಸಮಾಧಾನ; ಆದರೆ ಬೆಂ. ಗ್ರಾಮಾಂತರ ಉಸ್ತುವಾರಿ ಸ್ಥಾನದ ಮೇಲೆ ಕಣ್ಣು?
ಎಂಟಿಬಿ ನಾಗರಾಜ್
  • Share this:
ಬೆಂಗಳೂರು(ಜ. 25): ಅಬಕಾರಿ ಖಾತೆ ಬದಲು ಸಿಕ್ಕಿದ ಪೌರಾಡಳಿತ ಮತ್ತು ಸಕ್ಕರೆ ಖಾತೆಗಳು ಎಂಟಿಬಿ ನಾಗರಾಜ್ ಅವರಿಗೆ ಸಮಾಧಾನ ತಂದಿರುವಂತಿದೆ. ಅಬಕಾರಿ ಖಾತೆ ಕೊಟ್ಟಿದ್ದರಿಂದ ಮುನಿಸಿಕೊಂಡಿದ್ದ ಎಂಟಿಬಿ ನಾಗರಾಜ್, ತಮ್ಮ ಖಾತೆ ಬದಲಾವಣೆ ಆದ ನಂತರವಷ್ಟೇ ಇಂದು ವಿಧಾನಸೌಧದಲ್ಲಿ ತಮ್ಮ ಕೊಠಡಿ ಪೂಜೆ ಮಾಡಿದರು. ವಸತಿ ಖಾತೆ ಮೇಲೆ ಕಣ್ಣಿಟ್ಟಿದ್ದರೂ ಸದ್ಯಕ್ಕೆ ಪೌರಾಡಳಿತ ಖಾತೆಯಿಂದ ಅವರು ತೃಪ್ತರಾದಂತಿದೆ. ಇಂದು ನಡೆದ ಪೂಜೆಯಲ್ಲಿ ಅವರ ಕುಟುಂಬ ಸದಸ್ಯರೂ ಭಾಗಿಯಾಗಿದ್ದರು. ಇದರೊಂದಿಗೆ ಅವರು ಅಧಿಕೃತವಾಗಿ ಪೌರಾಡಳಿತ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ತನಗೆ ಸಿಕ್ಕಿರುವ ಎರಡು ಖಾತೆಗಳನ್ನ ಸಮರ್ಥವಾಗಿ ನಿಭಾಯಿಸಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

“ಈ ಹಿಂದೆ ವಸತಿ ಖಾತೆ ಕೇಳಿದ್ದು ನಿಜ. ಆದರೆ ಕಾರಣಾಂತರದಿಂದ ಅದನ್ನ ನನಗೆ ಕೊಡಲು ಆಗಿಲ್ಲ. ಈಗ ಪೌರಾಡಳಿತ ಮತ್ತು ಸಕ್ಕರೆ ಖಾತೆ ಕೊಟ್ಟಿದ್ದಾರೆ. ಸಮಾಧಾನದಿಂದ ಪೂಜೆ ಮಾಡಿಯೇ ಕೆಲಸ ಪ್ರಾರಂಭ ಮಾಡಿದ್ದೇನೆ” ಎಂದು ಎಂಟಿಬಿ ತಿಳಿಸಿದ್ದಾರೆ.

ನಾನು ಹೊಸಕೋಟೆ ಕ್ಷೇತ್ರದವನು. ಹೀಗಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಹಾಗಂತ ನಾನು ಬೇಡಿಕೆ ಮುಂದಿಟ್ಟಿಲ್ಲ. ಈ ಸ್ಥಾನ ಬೇಕೆಂದು ಮುಖ್ಯಮಂತ್ರಿ ಬಳಿ ಕೇಳಿಲ್ಲ. ಈ ಬಗ್ಗೆ ಸಿಎಂ ತೀರ್ಮಾಣ ಮಾಡುತ್ತಾರೆ. ಪಕ್ಷದ ಯಾವುದೇ ತೀರ್ಮಾನಕ್ಕೂ ನಾವೆಲ್ಲರೂ ಬದ್ಧವಾಗಿರುತ್ತೇವೆ ಎಂದು ಹೇಳುವ ಮೂಲಕ ಎಂಟಿಬಿ ನಾಗರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಿಯಲ್ ಲೈಫ್​ನಲ್ಲಿ ಮುದಲ್ವನ್; ಒಂದು ದಿನ ಸಿಎಂ ಆಗಿ 20 ವರ್ಷದ ಹುಡುಗಿ ಮಾಡಿದ್ದೇನು?

ತಮ್ಮ ಮಿತ್ರಮಂಡಳಿಯ ಸಹ ಸದಸ್ಯ ಹೆಚ್ ವಿಶ್ವನಾಥ್ ಅವರು ಬೇಸರ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಇಂಥ ಸಂದರ್ಭಗಳಲ್ಲಿ ಬೇಸರ ಸಹಜ. ಆದರೆ, ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಸಿಎಂ ಯಡಿಯೂರಪ್ಪ ಈ ಅಸಮಾಧಾನವನ್ನು ಸರಿಪಡಿಸುತ್ತಾರೆಂಬ ವಿಶ್ವಾಸ ಇದೆ. ನಮ್ಮ ಮಿತ್ರ ಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಯಾವುದೇ ಅಸಮಾಧಾನ ಇಲ್ಲ. ನಾವೆಲ್ಲರೂ ಸಮಾಧಾನವಾಗಿಯೇ ಇದ್ಧೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ ವೈದ್ಯಕೀಯ ಶಿಕ್ಷಣ ಖಾತೆ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಗೂ ಸಮಾಧಾನ ಮಾಡುವ ಪ್ರಯತ್ನವನ್ನು ಸಿಎಂ ಮಾಡುತ್ತಿದ್ದಾರೆ. ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮರಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಇತ್ತೀಚೆಗೆ ನಡೆದ ಖಾತೆ ಹಂಚಿಕೆ ವೇಳೆ ಸುಧಾಕರ್ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿ ಅವರಿಗೆ ಸಿಎಂ ಕೊಟ್ಟಿದ್ದರು. ಅದಕ್ಕೆ ಬದಲಾಗಿ ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ ಖಾತೆಯನ್ನೂ ನೀಡುವ ಸಾಧ್ಯತೆ ಇದೆ. ಸದ್ಯ, ಈ ಪ್ರವಾಸೋದ್ಯಮ ಖಾತೆ ಆನಂದ್ ಸಿಂಗ್ ಬಳಿ ಇದೆ. ಆನಂದ್ ಸಿಂಗ್ ಅವರಿಗೆ ಪರಿಸರ ಇಲಾಖೆ, ಹಜ್, ವಕ್ಫ್ ಖಾತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಕೊಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ಉಪಕ್ರಮಗಳು ಪಕ್ಷದೊಳಗೆ ಹಾಗೂ ಸಂಪುಟದೊಳಗೆ ಇರುವ ಅಸಮಾಧಾನದ ಬೇಗುದಿಯನ್ನ ಒಂದಷ್ಟು ಮಟ್ಟಕ್ಕಾದರೂ ಶಮನ ಮಾಡುವ ನಿರೀಕ್ಷೆ ಇದೆ. ಇಂದು ಸಂಜೆ ಯಡಿಯೂರಪ್ಪ ಸಂಪುಟದ ಪರಿಷ್ಕೃತ ಪಟ್ಟಿ ಬಿಡುಗಡೆ ಆಗಲಿದೆ ಎನ್ನುತ್ತಿವೆ ಮೂಲಗಳು.

ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: January 25, 2021, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories