ಬೆಂಗಳೂರು (ಫೆ.5): ಉಪಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಪೂರ್ಣಗೊಳ್ಳುತ್ತಾ ಬಂದರೂ ಸಂಪುಟ ವಿಸ್ತರಣೆ ಕಸರತ್ತು ಪೂರ್ಣಗೊಂಡಿಲ್ಲ. ಪಕ್ಷಾಂತರ ಮಾಡಿದವರೆಲ್ಲರೂ ಸಚಿವ ಸ್ಥಾನಕ್ಕಾಗಿ ಭಾರೀ ಲಾಭಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಕೆಲ ಮೂಲ ಬಿಜೆಪಿಗರೂ ಕೂಡ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ನಿತ್ಯ ಹಲವು ಬಿಜೆಪಿ ಶಾಸಕರು ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಬಿಎಸ್ವೈ ಮಗ ಬಿ.ವೈ. ವಿಜಯೇಂದ್ರ ಮನೆಗೆ ಸಚಿವ ಸ್ಥಾನ ಆಕಾಂಕ್ಷಿಗಳು ಭೇಟಿ ನೀಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ವಿಜಯೇಂದ್ರ ಮನೆಯಲ್ಲಿ ಇಂದು ರಾಜಕೀಯ ಚರ್ಚೆ ಗರಿಗೆದರಿದೆ. ಸಿಎಂ ಮನೆಯಿಂದ ಒಂದೇ ಕಾರಿನಲ್ಲಿ ಸಿಪಿ ಯೋಗೆಶ್ವರ್ ಹಾಗೂ ವಿಜಯೆಂದ್ರ ಆಗಮಿಸಿದರು. ಇದರ ಜೊತೆ ಬಿಜೆಪಿ ಶಾಸಕ ಶಂಕರಗೌಡ ಪಾಟೀಲ್, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಶಾಸಕ ಶಿವರಾಜ್ ಪಾಟೀಲ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರು ವಿಜಯೇಂದ್ರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಿಎಸ್ವೈ ಮಗ ವಿಜಯೇಂದ್ರ ಅವರಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದಾಗ್ಯೂ, ರಾಜ್ಯ ಸರ್ಕಾರ ನಡೆಸಿದ ಸಾಕಷ್ಟು ಸಭೆಗಳಲ್ಲಿ ಅವರು ಪಾಲ್ಗೊಂಡ ಉದಹಾರಣೆ ಇದೆ. ರಾಜ್ಯದ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಹೈಕಮಾಂಡ್ಗೆ ಈ ಮೊದಲು ದೂರು ನೀಡಿದ್ದರು. ಈಗ ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ವಿಜಯೇಂದ್ರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸರ್ಕಾರದ ಆಡಳಿತದಲ್ಲಿ ಮತ್ತೆ ಬಿಎಸ್ವೈ ಮಗ ವಿಜಯೇಂದ್ರ ಹಸ್ತಕ್ಷೇಪ?; ಬಿಜೆಪಿ ನಾಯಕರಿಂದಲೇ ವಿರೋಧ
ಜೆಡಿಎಸ್ ಭದ್ರಕೋಟೆ
ಕೆ.ಆರ್. ಪೇಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೆಆರ್ ಪೇಟೆ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಇದೇ ವಿಜಯೇಂದ್ರ. ಹೀಗೆ ಅನೇಕ ವಿಚಾರಗಳಿಗೆ ಇವರು ಮುನ್ನೆಲೆಗೆ ಬರುತ್ತಿದ್ದಾರೆ. ಹೀಗಾಗಿ ವಿಜಯೇಂದ್ರ ಮನೆ ಕದ ತಟ್ಟಿದರೆ ಸಚಿವ ಸ್ಥಾನ ಸಿಗಬಹುದು ಎನ್ನುವ ಆಲೋಚನೆ ಕೆಲ ಶಾಸಕರದ್ದು.
ಸಮಯ ಬರುವವರೆಗೂ ಕಾಯುತ್ತೇನೆ:
ಉಪಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿ ಸೋತಿದ್ದ
ಎಂಟಿಬಿ ನಾಗರಾಜ್ ಅವರು ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ಈ ಬಳಿಕ ಪ್ರತಿಕ್ರಿಯಿಸಿದ ಅವರು, “ಹೊಸಕೋಟೆ ಸ್ಥಳೀಯ ಸಂಸ್ಥೆಯ ಚುನಾವಣೆ ವಿಚಾರ ವಾಗಿ ಚರ್ಚಿಸಲು ಬಂದಿದ್ದೆ. ಶರತ್ ಬಚ್ಚೇಗೌಡ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು. ಅವಕಾಶ ಬಂದಾಗ ನನ್ನನ್ನೂ ಸಚಿವನನ್ನಾಗಿ ಮಾಡುತ್ತಾರೆ. ಅಲ್ಲಿಯವರೆಗೆ ಕಾಯುತ್ತೇನೆ. ಮುಂದೆ ಏನಾಗುತ್ತದೆಯೋ ನೋಡೋಣ,” ಎಂದರು.
ವಿಜಯೇಂದ್ರ ಭೇಟಿ ಮಾಡಿದರೆ ತಪ್ಪೇನು?:
ಬಿಜೆಪಿ ಶಾಸಕರು ವಿಜಯೇಂದ್ರ ಭೇಟಿ ಮಾಡಿದರೆ ತಪ್ಪೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ. “ವಿಜಯೇಂದ್ರ ಅವರಿಗೆ ಯುವ ಮೋರ್ಚಾ ಜವಾಬ್ದಾರಿ ಇದೆ. ಹೀಗಾಗಿ ಅವರನ್ನು ಶಾಸಕರು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ. ಸಂಪುಟ ವಿಸ್ತರಣೆಯಲ್ಲಿ ಸಿಎಂ ತೀರ್ಮಾನವೇ ಅಂತಿಮ,” ಎಂದರು ಅವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ