ಕಲಬುರ್ಗಿ (ಜ. 7): ಶಿಸ್ತಿನ ಪಕ್ಷ ಎಂದೆನಿಸಿಕೊಳ್ಳೋ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದಿದೆ. ಅದೂ ಸಹ ಒಂದೇ ಸಮುದಾಯದ ಇಬ್ಬರು ಮುಖಂಡರು ವಾಕ್ಸಮರ ನಡೆಸಿಕೊಂಡಿದ್ದು, ಅದೇ ಕಾರ್ಯಕ್ರಮದ ವೇದಿಕೆ ಮೇಲಿದ್ದರೂ ಸಂಸದ ಉಮೇಶ್ ಜಾಧವ್ ಮಾತ್ರ ಮೂಕ ಪ್ರೇಕ್ಷಕರ ರೀತಿಯಲ್ಲಿ ನೋಡಿ ಸುಮ್ಮನಾಗಿದ್ದಾರೆ. ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಹಾಗೂ ಜಿ.ಪಂ. ಸದಸ್ಯ ಅರವಿಂದ ಚವ್ಹಾಣ ನಡುವೆ ವಾಗ್ವಾದ ನಡೆದಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸನ್ಮಾನಕ್ಕೆ ಬಿಜೆಪಿ ಬೆಂಬಲಿತ ವಿಜೇತ ಗ್ರಾಮ ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸಲಾಗಿತ್ತು. ನೂತನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕೆಂದುಕೊಂಡಿದ್ದ ವಾಲ್ಮೀಕಿ ನಾಯಕ್, ಕಾರ್ಯಕ್ರಮಕ್ಕೆ ಸಂಸದ ಉಮೇಶ್ ಜಾಧವ್ ರನ್ನೂ ಆಹ್ವಾನಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಕರೆಯದೇ ಬಂದ ತಮ್ಮ ಪಕ್ಷದ ಒಬ್ಬ ಮುಖಂಡನನ್ನು ಕಂಡು ವಾಲ್ಮೀಕಿ ನಾಯಕ್ ಕೆಂಡಾಮಂಡಲರಾಗಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಿಗೆ ಸನ್ಮಾನ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಅರವಿಂದ ಚವ್ಹಾಣ ಆಗಮಿಸಿರೋದನ್ನು ಕಂಡು ಕುಪಿತಗೊಂಡ ವಾಲ್ಮೀಕಿ ನಾಯಕ್, ನಾನು ಸೋಲಲು ಅರವಿಂದ ಚವ್ಹಾಣ ನೇರ ಹೊಣೆ. ಯಾರೂ ಕರೆಯದಿದ್ದರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾನೆಂದು ಎಂದು ಅರವಿಂದ ಚವ್ಹಾಣ ವಿರುದ್ಧ ವಾಲ್ಮೀಕಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ನಾನೇನು ಮಾಡಿರುವೆ, ನನ್ನನ್ನೇಕೆ ಬೈಯುತ್ತಿದ್ದೀದ್ದೀರಿ ಎಂದು ಪ್ರಶ್ನೆ ಹಾಕಿದ ಚವ್ಹಾಣ, ವಾಲ್ಮೀಕಿ ನಾಯಕ್ ಕಡೆ ನುಗ್ಗಲು ಯತ್ನಿಸಿದರು. ಪರಸ್ಪರ ಮಾತಿನ ಚಕಮಕಿಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಮುಖಂಡರು, ಇಬ್ಬರ ಜಗಳ ಬಿಡಿಸಿದ್ದಾರೆ. ಆದರೆ ಸ್ಥಳದಲ್ಲಿಯೇ ಇದ್ದರೂ ಸಂಸದ ಉಮೇಶ್ ಜಾಧವ್ ಮೂಕ ಪ್ರೇಕ್ಷಕರ ರೀತಿಯಲ್ಲಿ ನೋಡುತ್ತಾ ನಿಂತಿದ್ದು, ವಾಗ್ವಾದ ಮಾಡೋದನ್ನು ತಡೆಯಲು ಮುಂದಾಗಿಲ್ಲ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಗೆ ಅರವಿಂದ ಚವ್ಹಾಣ ಪೈಪೋಟಿ ನಡೆಸಿದ್ದ. ಆದರೆ ವಾಲ್ಮೀಕಿ ನಾಯಕ್ ಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತಾದರೂ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರದಿಂದ ಗೆಲವು ಸಾಧಿಸಿದ್ದರು. ಇದರಿಂದಾಗಿ ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ಮುಂದುವರೆದಿದೆ. ಒಂದೇ ಪಕ್ಷದವರು, ಒಂದೇ ಬಂಜಾರ ಸಮುದಾಯಕ್ಕೆ ಸೇರಿದ ನಾಯಕರು ಒಂದೇ ವೇದಿಕೆಯಲ್ಲಿ ಪರಸ್ಪರ ವಾಗ್ವಾದ ನಡೆಸಿರೋದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಬಿಜೆಪಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಾಕರ ನಡುವೆ ಅಸಮಾಧಾನದ ಹೊಗೆಯಾಡುತ್ತಿದೆ ಎಂಬುದಕ್ಕೆ ಈ ಘಟನೆ ಪುಷ್ಟಿ ನೀಡಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ