ಬೆಂಗಳೂರು(ಸೆ. 17): ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಈರುಳ್ಳಿ ರಫ್ತನ್ನು ನಿಷೇಧಿಸಿದೆ. ಇದರಲ್ಲಿ ಬೆಂಗಳೂರು ರೋಸ್ ತಳಿಯ ಈರುಳ್ಳಿ ಕೂಡ ಒಳಗೊಂಡಿದೆ. ಆದರೆ, ರಾಜ್ಯದ ಸಾವಿರಾರು ರೈತರ ಜೀವನಾಧಾರವಾಗಿರುವ ರೋಸ್ ತಳಿಯ ಈರುಳ್ಳಿಯ ರಫ್ತನ್ನು ನಿಷೇಧಿಸಬೇಡಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ರಫ್ತು ನಿಷೇಧದಿಂದ ಬೆಂಗಳೂರು ರೋಸ್ ತಳಿಯ ಈರುಳ್ಳಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
“ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿರುವುದರಿಂದ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ನಷ್ಟ ಉಂಟಾಗಲಿದ್ದು, ಈ ಆದೇಶದಿಂದ ಬೆಂಗಳೂರು ರೋಜ್ ತಳಿಯ ಈರುಳ್ಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸಚಿವರಾದ ಪೀಯೂಶ್ ಗೋಯಲ್ ಅವರಲ್ಲಿ ಒತ್ತಾಯಿಸಿ, ಈರುಳ್ಳಿ ಬೆಳೆಗಾರರ ಹಿತ ಕಾಯುವಂತೆ ಮನವಿ ಸಲ್ಲಿಸಿದ್ದೇನೆ” ಎಂದು ತೇಜಸ್ವಿ ಸೂರ್ಯ ಟ್ವೀಟ್ ಕೂಡ ಮಾಡಿದ್ಧಾರೆ.
ಶೇ. 90ರಷ್ಟು ರೋಸ್ ತಳಿಯ ಈರುಳ್ಳಿ ರಫ್ತಾಗುತ್ತದೆ. ಈಗ ರಫ್ತು ನಿಷೇಧಗೊಂಡಿರುವುದರಿಂದ ಬೆಳೆಗಾರರು ಕಿಲೋಗೆ ಕೇವಲ 6 ರೂಪಾಯಿಗೆ ಮಾರಾಟ ಮಾಡಬೇಕಾಗಬಹುದು ಎಂದು ಬಿಜೆಪಿ ಸಂಸದ ಆತಂಕ ವ್ಯಕ್ತಪಡಿಸಿದ್ದಾರೆ.
“…ಬೆಂಗಳೂರು ರೋಸ್ ತಳಿಯ ಈರುಳ್ಳಿಯನ್ನು ಕರ್ನಾಟಕದಲ್ಲಿ ಪ್ರತೀ ವರ್ಷ 60 ಸಾವಿರ ಟನ್ಗಳಷ್ಟು ಬೆಳೆಯಲಾಗುತ್ತದೆ. ಬೆಂಗಳೂರು ನಗರದ ಸುತ್ತಲಿನ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಈ ಬೆಳೆ ಬೆಳೆಯಲಾಗುತ್ತದೆ. ಸರ್ಕಾರ ಕೂಡ ಈ ವಿಷೇಷ ತಳಿಯನ್ನ ಗುರುತಿಸಿ G1 ಟ್ಯಾಗ್ ನೀಡಿದೆ.
”ಬೆಂಗಳೂರ ರೋಸ್ ಈರುಳ್ಳಿಗೆ ಆಗ್ನೇಯ ಏಷ್ಯನ್ ದೇಶಗಳಲ್ಲಿ ದೊಡ್ಡ ಬೇಡಿಕೆ ಇದೆ. ಇದರ ಶೇ. 90ರಷ್ಟು ಈರುಳ್ಳಿ ರಫ್ತಾಗುತ್ತದೆ. ಭಾರತದಲ್ಲಿ ಇದಕ್ಕೆ ಬೇಡಿಕೆ ಕಡಿಮೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳೆಯುವ ಈರುಳ್ಳಿಯಲ್ಲಿ ರೋಸ್ ತಳಿಯೇ ಹೆಚ್ಚು. ಈರುಳ್ಳಿ ರಫ್ತನ್ನು ನಿಷೇಧಿಸಿದರೆ ಇಲ್ಲಿನ ಭಾಗದ ರೈತರಿಗೆ ತೀವ್ರ ಬಾಧೆಯಾಗುತ್ತದೆ… ಕಳೆದ ವರ್ಷ ಈರುಳ್ಳಿ ರಫ್ತನ್ನು ನಿಷೇಧಿಸಿದಾಗ ಬೆಂಗಳೂರು ರೋಸ್ ತಳಿಯ ಈರುಳ್ಳಿಗೆ ವಿನಾಯಿತಿ ನೀಡಲಾಗಿತ್ತೆಂಬುದು ನನ್ನ ಗಮನಕ್ಕೆ ಬಂದಿದೆ. ಈ ವರ್ಷವೂ ಇದಕ್ಕೆ ವಿನಾಯಿತಿ ನೀಡಬೇಕೆಂದು ಕೋರುತ್ತೇನೆ” ಎಂದು ತೇಜಸ್ವಿ ಸೂರ್ಯ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
Ban on onion exports will hurt K'taka farmers growing Bangalore Rose in B'luru Rural, Chikkaballapura & Kolar
90% of this variety is meant for export but farmers may have to sell it for lowly Rs 6/kg
I request Hon @CimGOI Sri @PiyushGoyal to exempt B'lore Rose onions from ban pic.twitter.com/mPTIp5y6ii
— Tejasvi Surya (@Tejasvi_Surya) September 16, 2020
ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿರುವುದರಿಂದ ಕರ್ನಾಟಕದ ಬೆಂಗಳೂರು(ಗ್ರಾ), ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ನಷ್ಟವುಂಟಾಗಲಿದ್ದು, ಈ ಆದೇಶದಿಂದ ಬೆಂಗಳೂರು ರೋಜ್ ತಳಿಯ ಈರುಳ್ಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸಚಿವರಾದ ಶ್ರೀ @PiyushGoyal ರಲ್ಲಿ ಒತ್ತಾಯಿಸಿ, ಈರುಳ್ಳಿ ಬೆಳೆಗಾರರ ಹಿತ ಕಾಯುವಂತೆ ಮನವಿ ಸಲ್ಲಿಸಿದ್ದೇನೆ.
— Tejasvi Surya (@Tejasvi_Surya) September 16, 2020
ಇನ್ನು, ಕರ್ನಾಟಕದಲ್ಲಿ ಬೆಂಗಳೂರು ರೋಸ್ ತಳಿಯ ಈರುಳ್ಳಿ ರಫ್ತಿನಿಂದ ರೈತರಿಗೆ ಒಂದು ಕಿಲೋಗೆ ಸರಾಸರಿಯಾಗಿ 16-18 ರೂಪಾಯಿ ಸಿಗುತ್ತದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಇದಕ್ಕೆ 10 ರೂಗಿಂತ ಕಡಿಮೆ ಬೆಲೆ ಸಿಗುತ್ತದೆ. ಇದರಿಂದ ರೈತರಿಗೆ ಅನನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ