ಬೆಂಗಳೂರು(ಸೆ.30): ಬೆಂಗಳೂರು ಉಗ್ರರ ತಾಣ ಎಂದು ಹೇಳಿಲ್ಲ. ಭಯೋತ್ಪಾದಕರ ತಾಣವಾಗುತ್ತಿದೆ ಎಂದು ಹೇಳಿದೆ. ಬೆಂಗಳೂರು ನನಗೆ ಅಸ್ಮಿತೆ ಕೊಟ್ಟಿದೆ. ಇಲ್ಲಿನ ಹುಡುಗನಾಗಿರುವ ನನಗೆ, ನಗರವನ್ನು ಉಳಿಸಿ, ಬೆಳೆಸುವ ಹೊಣೆ ಕೂಡ ಇದೆ. ಆದರೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಟೀಕೆ ಮಾಡಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆ ಕುರಿತು ಸ್ಪಷ್ಟನೆ ನೀಡಿದ ಅವರು, ನಾವು ಬೆಂಗಳೂರನ್ನು ಪ್ರೀತಿಸುತ್ತೇನೆ. ದೇಶಾದ್ಯಾಂತ ಜನ ಗುರುತಿಸುತ್ತಿರುವುದು ಬೆಂಗಳೂರು ಹುಡುಗ ಎಂದರು. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷನಾದ ಬಳಿಕ ಮೊದಲ ಬಾರಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.
ನನಗೆ ಶಿಕ್ಷಣ, ಉದ್ಯೋಗ, ಊಟವನ್ನು ಈ ನಗರ ನೀಡಿದೆ. ನನನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದು ಇದೇ ನಗರದ ಜನರು . ಇದೇ ಕಾರಣಕ್ಕೆ ಬೆಂಗಳೂರನ್ನು ರಕ್ಷಿಸಲು ಎನ್ಐಎ ಬೇಕು ಎಂದು ಹೇಳಿದೆ. ಈ ಕುರಿತು ಗೃಹ ಮಂತ್ರಿಗಳ ಮುಂದೆ ಮನವಿ ಮಾಡಿದೆ. ಆದರೆ, ನಾನು ಬೆಂಗಳೂರನ್ನು ಉಗ್ರರ ತಾಣ ಎಂದು ಹೇಳಿದೆ ಎಂದು ವಿಪಕ್ಷಗಳು ಟೀಕಿಸಿವೆ ಎಂದರು.
ಇದೇ ವೇಳೆ ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕುರಿತು ಸಮಜಾಯಿಷಿ ನೀಡಿದ ಅವರು, ಕಾರ್ಯಕರ್ತರು ಉತ್ಸಾಹದಿಂದ ಬಂದಿದ್ದರು. ಕೊರೋನಾ ನಿಯಮ ನಮ್ಮೆಲ್ಲರಿಗೂ ಅನ್ವಯವಾಗುತ್ತದೆ. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷನಾದ ಮೇಲೆ ಮೊದಲ ಸಲ ಬೆಂಗಳೂರಿಗೆ ಬಂದಿದ್ದೇನೆ. ಪಕ್ಷದ ಕಡೆಯಿಂದ ಪದಾಧಿಕಾರಿಗಳಿಗೆ ಬರಲು ಅವಕಾಶ ಇಲ್ಲ ಎಂದು ಸೂಚಿಸಲಾಗಿತ್ತು. ಆದರೆ, ಬಿಜೆಪಿ ಕಾರ್ಯಕರ್ತರ ಪಕ್ಷ. ಆದ್ದರಿಂದ ಕಾರ್ಯಕರ್ತರು ಸಂತೋಷ ಆಗಿ ಮೆರವಣಿಗೆ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ಮಾಸ್ಕ್ ಧರಿಸಿದ್ದರು. ಎಲ್ಲರೂ ಉತ್ಸಾಹದಿಂದ ಸ್ವಾಗತ ಮಾಡಿದರು.
ಇದನ್ನು ಓದಿ: ಕೋವಿಡ್ ನಿಯಮ ಮರೆತ ಸಂಸದ ತೇಜಸ್ವಿ ಸೂರ್ಯ; ಸಾಮಾಜಿಕ ಅಂತರಕ್ಕಿಲ್ಲ ಜಾಗ
ನಿಮ್ಮ ಕಚೇರಿಯಲ್ಲಿ ಯಾರಿಗಾದರೂ ಬಡ್ತಿ ಸಿಕ್ಕರೆ ನೀವು ಸಂತೋಷ ಪಡುವುದಿಲ್ಲವಾ?ಹಾಗೆಯೇ ನಮ್ಮ ಕಾರ್ಯಕರ್ತರು ಸಂತೋಷ ಪಟ್ಟಿದ್ದಾರೆ ಅಷ್ಟೇ ಎಂದು ಅಸಂಬದ್ಧ ಸ್ಪಷ್ಟೀಕರಣ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ