ಕರ್ನಾಟಕ ವಿಧಾನಸಭೆ ಚುನಾವಣೆಗೆ (Assembly Election 2023) 4 ತಿಂಗಳು ಬಾಕಿ ಇರುವಾಗಲೇ ಬಿಜೆಪಿಯ ಕೇಂದ್ರ ನಾಯಕರು (BJP Leaders) ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅಮಿತ್ ಶಾ ಅವರು ತೆರಳುವ ಮಾರ್ಗದಲ್ಲಿ ಕಮಲ ಬಾವುಟಗಳು (BJP Flags) ಹಾರಾಡುತ್ತಿವೆ. ಮಂಡ್ಯದಲ್ಲಿಯೂ ಅಮಿತ್ ಶಾ ಸ್ವಾಗತಕ್ಕೆ ಸಿದ್ಧತಗಳು ನಡೆಯುತ್ತಿವೆ. ಸ್ಥಳೀಯ ಬಿಜೆಪಿ ನಾಯಕರು ಫ್ಲೆಕ್ಸ್ ಹಾಕಿ ಅಮಿತ್ ಶಾ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ಗಳು ರಸ್ತೆ ಇಕ್ಕೆಲಗಳಲ್ಲಿ ಕಾಣಿಸುತ್ತಿವೆ. ಸಾಲು ಸಾಲು ಬಿಜೆಪಿ ಫ್ಲೆಕ್ಸ್ಗಳಲ್ಲಿ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಅವರ ಫೋಟೋ ಹಾಕಿರುವ ಫ್ಲೆಕ್ಸ್ ಅಚ್ಚರಿಗೆ ಕಾರಣವಾಗಿದೆ.
ಇದೀಗ ಈ ಫ್ಲೆಕ್ಸ್ ಹಲವು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಜೊತೆ ಸಂಸದೆ ಸುಮಲತಾ ಅಂಬರೀಶ್ ವೇದಿಕೆ ಹಂಚಿಕೊಳ್ತಾರಾ ಅನ್ನೋ ಚರ್ಚೆಗಳು ಶುರುವಾಗಿವೆ.
ಕೆಲವು ದಿನಗಳ ಹಿಂದೆ ಸುಮಲತಾ ಅವರ ಆಪ್ತ ಇಡವಾಳು ಸಚ್ಚಿದಾನಂದ್ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಸಚ್ಚಿದಾನಂದ್ ತಮ್ಮ ಫ್ಲೆಕ್ಸ್ಗಳಲ್ಲಿ ಸುಮಲತಾ ಅಂಬರೀಶ್ ಅವರ ಫೋಟೋ ಬಳಕೆ ಮಾಡಿದ್ದಾರೆ.
ಬಿಜೆಪಿ ಸೇರ್ತಾರಾ?
ಈ ಫ್ಲೆಕ್ಸ್ ಮೂಲಕ ಬಿಜೆಪಿ ಸೇರುವ ಸುಳಿವನ್ನು ಸುಮಲತಾ ಅಂಬರೀಶ್ ನೀಡಿದ್ರಾ ಎಂದು ಮಂಡ್ಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಈ ಫ್ಲೆಕ್ಸ್ ಬಗ್ಗೆ ಸಚ್ಚಿದಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರ ಅನುಮತಿ ಪಡೆದು ಫೋಟೋ ಬಳಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿರುವ ಅಮಿತ್ ಶಾ
ಇಂದು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ, ನಾಳೆ ಬೆಳಗ್ಗೆ 10ರಿಂದ ಮಧ್ಯಾಹ್ನ 12.15ರವರೆಗೆ ಬಿಜೆಪಿ ನಾಯಕರ ಸಭೆಗೆ ಸಮಯ ಕಾಯ್ದಿರಿಸಿದ್ದಾರೆ.
ನಾಳೆ ಮಂಡ್ಯದಲ್ಲಿ ಬೃಹತ್ ಸಮಾವೇಶ
ಈ ಅವಧಿಯಲ್ಲಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ. ನಂತರ ಮಂಡ್ಯದ ಬಾಲಕರ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 1.45ರಿಂದ 3.15ರವರೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ ಅಧಿಕೃತ ಬುನಾದಿ ಹಾಕಲಿದ್ದಾರೆ.
ಮಧ್ಯಾಹ್ನ 3.30ರಿಂದ ಸಂಜೆ 4.30ಕ್ಕೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಡೇರಿ ಉದ್ಘಾಟಿಸಿ, ಸಂಜೆ 4.50ಕ್ಕೆ ಮಂಡ್ಯದಿಂದ ವಿಮಾನದ ಮೂಲ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಂಜೆ 5.20ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಸಂಜೆ 5.45ರಿಂದ 6.45ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಸಹಕಾರ ವಲಯದ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಮಂಡ್ಯದಲ್ಲಿ ರೈತರ ಪ್ರತಿಭಟನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬರ್ತಾರೆ ಅಂತಾ ಮಂಡ್ಯದಲ್ಲಿ ಪೊಲೀಸರು, ರೈತರ ಪ್ರತಿಭಟನೆ ಜಾಗ ಖಾಲಿ ಮಾಡಿಸಲು ಬಂದಿದ್ದರು. ಆದ್ರೆ ರೈತರು ನಾವು ಜಾಗ ಖಾಲಿ ಮಾಡಲ್ಲ ಅಂತ ಬಿಗಿ ಪಟ್ಟು ಹಿಡಿದರು. ಈ ವೇಳೆ ಕೆಲ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದನ್ನೂ ಓದಿ: Hassan Mixer Grinder Case: ಮಿಕ್ಸಿಯಲ್ಲಿ ಬಾಂಬ್ ಇರಿಸಿದ್ದ ಸೈಕೋ ಕರಾಳ ಮುಖ ಬಯಲು
ಇದರಿಂದ ಕೆರಳಿದ ರೈತರು ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪೆಂಡಾಲ್ ನಿರ್ಮಾಣ ಮಾಡಿ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ, ರೈತ ನಾಯಕರ ಜೊತೆಗೆ ಸಭೆ ನಡೆಸಿತು. ಅಮಿತ್ ಶಾ ಮಂಡ್ಯಗೆ ಬರುವ ದಿನ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದರು.
ನಾವು ಶಾಂತಿಯುವಾಗಿ ಪ್ರತಿಭಟನೆ ಮಾಡುತ್ತೇವೆ. ನಮ್ಮ ಜಾಗಕ್ಕೆ ಅಮಿತ್ ಶಾ ಅವರನ್ನು ಕರೆಸಿ. ನಮ್ಮ ಬೇಡಿಕೆಗಳನ್ನು ಅವರು ಆಲಿಸಿ ಅಂತ ರೈತರು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ