ನವದೆಹಲಿ, ಜು. 19: ಅಕ್ರಮ ಗಣಿಗಾರಿಕೆಯಿಂದ ಕೃಷ್ಣರಾಜ ಜಲಸಾಗರ ಬಿರುಕು ಬಿಟ್ಟಿದೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಈಗ ವಿಷಯವನ್ನು ಇಂದಿನಿಂದ ಆರಂಭ ಆಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಸೋಮವಾರ ಈ ಬಗ್ಗೆ ಮಾತನಾಡಿದ ಅವರು 'ಕನ್ನಂಬಾಡಿ ಕಟ್ಟೆ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ' ಎಂದಿದ್ದಾರೆ. 'ನಿನ್ನೆ ರಾತ್ರಿ ಸ್ಥಳೀಯರು ಕರೆ ಮಾಡಿ ಕೆಆರ್ಎಸ್ ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಾನು ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದೆ. ಅಧಿಕಾರಿಗಳು ಎರಡು-ಮೂರು ಕಲ್ಲು ಬಿದ್ದಿವೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಫೋಟೋ ಮತ್ತು ವಿಡಿಯೋಗಳ ಮಾಹಿತಿ ಕೇಳಿದ್ದೇನೆ. ಜೊತೆಗೆ ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಸೂಚಿಸಿದ್ದೇನೆ. ಸ್ಥಳೀಯ ಅಧಿಕಾರಗಳಿಂದ ನಿನ್ನೆ (ಜುಲೈ 18) ಸಂಜೆ 5:15ರ ಸುಮಾರಿಗೆ ಗೋಡೆ ಕುಸಿದಿದೆ ಎಂದು ಗೊತ್ತಾಗಿದೆ.
ಜಿಲ್ಲಾಧಿಕಾರಿ ಜೊತೆಗೂ ಮಾತನಾಡಿದ್ದೇನೆ. ಡಿಸಿ ಕೂಡ ಹಳೆಯ ಗೋಡೆ ಕುಸಿದಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ ರಾತ್ರಿ 9.30 ಸಮಯದಲ್ಲಿ ಘಟನೆ ಆಗಿದೆ. ಎಲ್ಲರೂ ಸಮಯ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕೆಆರ್ಎಸ್ ಗೋಡೆ ಕುಸಿದಿರುವ ವಿಚಾರ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ' ಎಂದು ಕಿಡಿ ಕಾರಿದರು. ಕೆಆರ್ಎಸ್ ಅಣೆಕಟ್ಟು ಸದ್ಯಕ್ಕೆ ಸೇಫ್ ಆಗಿದೆ. ಅದು ಹಾಗೆಯೇ ಚೆನ್ನಾಗಿ ಇರಬೇಕು ಎನ್ನುವುದು ನಮ್ಮ ಬಯಕೆ. ಆದರೆ ಈಗ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಇದ್ದಂತೆ. ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ. ಯಾರೊಬ್ಬರು ಗೋಡೆ ಕುಸಿತಕ್ಕೆ ಸರಿಯಾದ ಕಾರಣ ಹೇಳ್ತಿಲ್ಲ. ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ. ಸರ್ಕಾರ ಉತ್ತರ ನೀಡಬೇಕು. ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಒಂದು ಬಾಟಲ್ ವಿಸ್ಕಿಗೆ 1 ಕೋಟಿ ರೂ ಕೊಟ್ಟು ಕೊಂಡ ಭೂಪ, ಹಳೆಯದಾದಷ್ಟೂ ಮದ್ಯಕ್ಕೆ ಪವರ್ ಜಾಸ್ತಿ ಅನ್ನೋದು ನಿಜಾನಾ?
ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟಿಗೆ ಅಪಾಯ ಇರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರ ಬಳಿ ವಿಷಯ ಚರ್ಚೆ ಮಾಡುತ್ತೇನೆ. ಅವಕಾಶ ಸಿಕ್ಕಿದರೆ ಇಂದಿನಿಂದ ಆರಂಭ ಆಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸುಮಲತಾ ತಿಳಿಸಿದರು. ಕೆಆರ್ಎಸ್ ಅಣೆಕಟ್ಟಿಗೆ ಏನು ರಿಸ್ಕ್ ಇಲ್ಲ ಎಂದು ಕೈಕಟ್ಟಿ ಕೂರಲು ಸಾಧ್ಯವಾ? ಎಂದು ಪ್ರಶ್ನೆ ಮಾಡಿದ ಅವರು, ರಾಜಕಾರಣ ಜೊತೆಗೂಡಿಸಿ ಮಾತನಾಡುವವರು ಈ ಬಗ್ಗೆ ಏನು ಬೇಕಾದರೂ ಹೇಳಲಿ. ಆದರೆ ಮುಂದೆ ಈ ರೀತಿಯಾದ ಡ್ಯಾಂ ನಿರ್ಮಿಸಲು ಸಾಧ್ಯವಿಲ್ಲ. ಇರುವುದನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ನಮ್ಮದಾಗಬೇಕು. ಕಿಡ್ನಿಗೆ ಇನ್ಷೇಕ್ಷನ್ ಆದರೆ ಲಿವರ್ ಗೆ ಏನು ಸಮಸ್ಯೆ ಇಲ್ಲವಾ? ಇದು ಕೂಡ ಅದೇ ರೀತಿ. ಕೊರೊನಾ ಚೀನಾದಲ್ಲಿದೆ, ಇಲ್ಲಿ ಏನು ಆಗಲ್ಲ ಅಂತಾ ಸುಮ್ನೆ ಕೂರಲು ಸಾಧ್ಯವಿಲ್ಲದಿರುವ ರೀತಿ ಎಂದು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ