ಹಳೆ ಮೈಸೂರು ಭಾಗದಲ್ಲಿ ಬಿಜೆಪಿ (BJP) ಪಕ್ಷ ಸಂಘಟನೆಗೆ ಮುಂದಾಗಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಸಚಿವ ನಾರಾಯಣಗೌಡರು (Minister Narayangowda), ಹಲವರು ನಮ್ಮ ಸಂಪರ್ಕದಲ್ಲಿದ್ದು, ಕೆಲವೇ ದಿನಗಳಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ (Loksabha Election) ಗೆಲುವು ದಾಖಲಿಸಿರುವ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಇದೀಗ ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಸಂಸದೆ ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ (Sachchidanand) ಮತ್ತು ಅವರ ಬೆಂಬಲಿಗರು ಬೆಂಗಳೂರಿನಲ್ಲಿ ಕಮಲ ಬಾವುಟ ಹಿಡಿಯುವ ಮೂಲಕ ಬಿಜೆಪಿ ಮನೆ ಪ್ರವೇಶಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಚ್ಚಿದಾನಂದ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಇದೇ ವೇಳೆ ಮಂಡ್ಯ ಜಿಲ್ಲೆಯ ಹಲವು ನಾಯಕರು ಸಹ ಬಿಜೆಪಿ ಬಾವುಟ ಹಿಡಿದರು.
ಯಾರು ಈ ಸಚ್ಚಿದಾನಂದ?
ಮಂಡ್ಯ ಮೂಲದ ಸಚ್ಚಿದಾನಂದ ಅವರು ದಿವಂಗತ ಅಂಬರೀಶ್ ಆಪ್ತರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡಿದ್ದರು.
ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ತರಲು ಈ ಪ್ರಯತ್ನ ಆಗಿದೆ. ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆಯಿಂದ ಮಂಡ್ಯ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯಲ್ಲಿ ಕಮಲ ಪತಾಕೆ
ಮಂಡ್ಯದಲ್ಲಿ ಇವಾಗ ಒಬ್ಬರು ಎಂಎಲ್ಎ ಇದ್ದಾರೆ. ಮುಂದೆ 7ಕ್ಕೆ 7 ಶಾಸಕರುಗಳು ಬಿಜೆಪಿಯಿಂದ ಆಯ್ಕೆ ಆಗುತ್ತಾರೆ. ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಡ್ತಿರುವ ಕೆಲಸದಿಂದ ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಪತಾಕೆ ಹಾರಲಿದೆ ಎಂದು ಭವಿಷ್ಯ ನುಡಿದರು.
ಹಿಂದುತ್ವದ ಆಧಾರದಲ್ಲಿ ಚುನಾವಣೆ ಗೆಲ್ಲುತ್ತೇವೆ
ಸಚಿವರಾದ ನಾರಾಯಣಗೌಡ ಹಾಗೂ ಗೋಪಾಲಯ್ಯರ ಪ್ರಯತ್ನದಿಂದ ಕೆಂಪೇಗೌಡ ಪ್ರತಿಮೆಯ ಮಣ್ಣು ಸಂಗ್ರಹ ರಥ ಯಾತ್ರೆ ಯಶಸ್ವಿ ಆಗಿದೆ. ಈ ಯಾತ್ರೆಯಿಂದ ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಹಿಂದುತ್ವ ಮತ್ತಷ್ಟು ಜಾಸ್ತಿ ಆಗುತ್ತದೆ. ಮುಂದೆಯು ಕೂಡ ಅಲ್ಲಿ ಹಿಂದುತ್ವದ ಆಧಾರದಲ್ಲೇ ಗೆಲ್ಲುತ್ತೇವೆ ಎಂದು ಹೇಳಿದರು.
ಶ್ರೀರಂಗಪಟ್ಟಣದಿಂದ ಸ್ಪರ್ಧೆ ಸಾಧ್ಯತೆ
ಇನ್ನು ಬಿಜೆಪಿ ಸೇರಿರುವ ಸಚ್ಚಿದಾನಂದ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಭರವಸೆ ಹಿನ್ನೆಲೆ ಬಿಜೆಪಿ ಸೇರಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: V S Ugrappa: ರಾಮ ಮರ್ಯಾದ ಪುರುಷೋತ್ತಮ ಅನ್ನೋ ಮೋದಿ ಹಿಂಗ್ಯಾಕ್ ಮಾಡಿದ್ರು? ಉಗ್ರಪ್ಪ ಖಡಕ್ ಪ್ರಶ್ನೆ
ನಾರಾಯಣಗೌಡರ ಮಾತು
ಇಡೀ ಭಾರತದಲ್ಲೇ ಒಳ್ಳೆಯ ಪಕ್ಷ ಅಂದರೆ ಅದು ಬಿಜೆಪಿ. ಅದಕ್ಕಾಗಿ ನಾನು ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ, ಅವಾಗ ಯಾವ ಕಡೆ ನೋಡಿದ್ರು ಯಾರು ಕಾಣಿಸ್ತಿರಲಿಲ್ಲ. ಅವಾಗ ಮದ್ದೂರು ಸ್ವಾಮಿ ಸೇರಿದಂತೆ ಹಲವರು ನನ್ನ ಜೊತೆ ಬಿಜೆಪಿಗೆ ಬಂದ್ರು. ಒಂದು ಒಂದೂವರೆ ವರ್ಷದಿಂದ ಸಚ್ಚಿದಾನಂದನಿಗೆ ನಾವು ಗಾಳ ಹಾಕ್ತಿದ್ದಿವಿ. ಆದರೆ ಕೊನೆಗೂ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ನಾರಾಯಣ ಗೌಡರು ಹೇಳಿದರು.
ಯೋಗೇಶಣ್ಣ ನೀವು ನಮ್ಮ ಜಿಲ್ಲೆಯವರು ಅಲ್ಲ. ಆದರೆ ನಿಮ್ಮ ನೇತೃತ್ವದಲ್ಲಿ ಹಿಂದೆ ನಾವು ಬಿಜೆಪಿ ಸೇರಿದ್ದೇವೆ . ಮಂಡ್ಯ ಬೇರೆ ಬೇರೆಯವರ ಭದ್ರಕೋಟೆಯಾಗಿತ್ತು. ಇವತ್ತು ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ. ಮಂಡ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ನಾರಾಯಣಗೌಡರು ಸಂತೋಷ ವ್ಯಕ್ತಪಡಿಸಿದರು.
ಇದನ್ನೂ ಓದಿ: Moral Policing: ಮಂಗಳೂರು ಬಸ್ನಲ್ಲಿ ನೈತಿಕ ಪೊಲೀಸ್ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ
ಈಗ ಯಾರೂ ಗೂಂಡಾಗಳು ಇಲ್ಲ
ಮಂಡ್ಯದಲ್ಲಿ ಮುಂದೆ 7 ಸೀಟೂಗಳನ್ಜು ಗೆಲ್ಲುತ್ತೇವೆ. ನಾನು ಇಡೀ ಜಿಲ್ಲೆಯಲ್ಲಿ ಸೇವಕನಾಗಿ ಕಲಸ ಮಾಡುತ್ತೇನೆ. ನಾವು ಯಾರು ಕಾಂಗ್ರೆಸ್, ಜೆಡಿಎಸ್ಗೆ ಭಯಪಡುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಮ್ಮ ಜೊತೆ ಬಂದಿದ್ದು ನನಗೆ ದೊಡ್ಡ ಖುಷಿ ತಂದಿದೆ.
ನಮ್ಮದೇ ಸರ್ಕಾರ ಇದೆ, ಅಲ್ಲಿ ಯಾವುದೇ ಗೂಂಡಾಗಳು ಇಲ್ಲ. ಆದರೆ ಹಿಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ, ಕೆ ಆರ್ ಪೇಟೆಯಲ್ಲಿ ದೊಡ್ಡ ಗೂಂಡಾಗಳು ಇದ್ದರು. ಅವಾಗ ನನಗೆ ಕಲ್ಲಿನಲ್ಲಿ ಹೊಡೆದ್ರು, ಎಕ್ಕಡದಲ್ಲಿ ಹೊಡೆದರು. ಆದರೆ ಅವರಿಗೆ ಕೊನೆಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ