• Home
  • »
  • News
  • »
  • state
  • »
  • 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ: ಸಂಸದ ವಿ.ಶ್ರೀನಿವಾಸಪ್ರಸಾದ್ ಮಾದರಿ ಕಾರ್ಯ

30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ: ಸಂಸದ ವಿ.ಶ್ರೀನಿವಾಸಪ್ರಸಾದ್ ಮಾದರಿ ಕಾರ್ಯ

ಪುಸ್ತಕ ವಿತರಣಾ ಕಾರ್ಯ

ಪುಸ್ತಕ ವಿತರಣಾ ಕಾರ್ಯ

ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದಾರೆ

  • Share this:

ಚಾಮರಾಜನಗರ (ಮಾ.13) ಓದುವ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ  ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ವಿನೂತನ ಪ್ರಯತ್ನ ಮಾಡಿದ್ದಾರೆ. ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದಾರೆ.   ನಿವೃತ್ತ   ನ್ಯಾಯಮೂರ್ತಿ ಎಚ್.ಎಸ್  ನಾಗಮೋಹನದಾಸ್ ಅವರು ರಚಿಸಿರುವ ಸಂವಿಧಾನ ಓದು ಪುಸ್ತಕವನ್ನು  ಸಮಾನತೆ ಪ್ರಕಾಶನ ಹೊರತಂದಿದ್ದು,  ಪ್ರತಿಯೊಬ್ಬರು ಅರ್ಥಮಾಡಿಕೊಳ್ಳುವಂತೆ  ಸರಳ ಭಾಷೆಯಲ್ಲಿ ಬರೆದಿರುವ ಈ ಪುಸ್ತಕವನ್ನು ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಥಮ ಹಾಗು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವಿತರಿಸುವ ಸಮಾರಂಭ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು
 
ಪ್ರಾಥಮಿಕ  ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೆಲವು ವಿದ್ಯಾರ್ಥಿಗಳಿಗೆ  ಸಂವಿಧಾನ ಓದು ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಿದರು. ನಮ್ಮ ದೇಶದ ಸಂವಿಧಾನ ರಾಷ್ಟ್ರೀಯ ಗ್ರಂಥವಾಗಿದೆ. ಸಂವಿಧಾನದ ಆಶಯಗಳ ಬಗ್ಗೆ  ವಿದ್ಯಾರ್ಥಿ ದೆಸೆಯಯಲ್ಲೇ ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಸಂವಿಧಾನ ಓದು ಪುಸ್ತಕವನ್ನು ತಮ್ಮ  ಪ್ರದೇಶಾಭಿವೃದ್ಧಿ ನಿಧಿಯಿಂದ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ದೇಶದ ಮೊದಲ ಸಂಸದ ವಿ.ಶ್ರೀನಿವಾಸಪ್ರಸಾದ್ ಎಂದು ಸಚಿವ ಸುರೇಶ್ ಕುಮಾರ್  ಪ್ರಶಂಸೆ ವ್ಯಕ್ತಪಡಿಸಿದರು.


ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತಿದ್ದ ಕಾನೂನು ದಿನಾಚರಣೆಯನ್ನು ಸಂವಿಧಾನ ದಿನಾಚರಣೆಯನ್ನಾಗಿ  ಪರಿವರ್ತಿಸಿದ್ದು ನಮ್ಮ ಕೇಂದ್ರ ಸರ್ಕಾರ ಎಂದ ಅವರು ಸಂವಿಧಾನದ ಆಶಯಗಳನ್ನು  ಯಾವುದೇ ರಾಗಾದ್ವೇಷಗಳಿಲ್ಲದೆ ತಿಳಿಸುವಂತಾಗಬೇಕು ಎಂದು  ಆಶಿಸಿದ  ಅವರು   ಡಾ.ಬಿ.ಆರ್.ಅಂಬೇಡ್ಕರ್ ನಮಗೆಲ್ಲಾ ಪ್ರಾತಃಸ್ಮರಣೀಯ ವ್ಯಕ್ತಿ ಎಂದರು


ಕಣ್ಣೀರು ಹಾಕಿದ ಸಂಸದ ವಿ.ಶ್ರೀನಿವಾಸಪ್ರಸಾದ್


ಸಂವಿಧಾನ ಓದು ಪುಸ್ತಕ ವಿತರಣಾ ಸಮಾರಂಭದ ಕೇಂದ್ರ ಬಿಂದುವಾಗಿದ್ದ ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಣ್ಣಿರು ಹಾಕಿದ ಘಟನೆಯು ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ.ಸಿದ್ದಲಿಂಗಯ್ಯ ಅವರು  ಡಾ.ಬಿ.ಆರ್. ಅಂಬೇಡ್ಕರ ಕುರಿತು ಬರೆದಿರುವ  ಗೀತೆಯನ್ನು ಕೇಳಿದ ವಿ.ಶ್ರೀನಿವಾಸಪ್ರಸಾದ್  ಕಣ್ಣೀರಿಟ್ಟರು.


ಇದನ್ನು ಓದಿ: ಸಿಡಿ ಪ್ರಕರಣ ಕುರಿತು ಅಧಿಕೃತ ದೂರು ದಾಖಲಿಸಿದ ರಮೇಶ್​ ಜಾರಕಿಹೊಳಿ 


ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರು  ನಾಡ ನಡುವಿನಿಂಂದ ಸಿಡಿದ ನೋವಿನ ಕೂಗೆ ಆಕಾಶದಗಲಕ್ಕು  ನಿಂತ ಆಲವೇ, ಕೋಟಿ ಕೋಟಿ ಕಪ್ಪು ಜನರ ಮೊಟ್ಟಮೊದಲ ಮಾತೆ, ನೀರಿನಾಚೆ, ಮೋಡದಾಚೆ ಮೊಳಗಿದಂತ  ಘೋಷವೇ ಎಂಬ ಹಾಡನ್ನು ಹಾಡುತ್ತಿದ್ದಾಗ ತದೇಕಚಿತ್ತದಿಂದ ಕೇಳುತ್ತಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಗದ್ಗದಿತರಾದರು. ಅವರ ಕಣ್ಣಾಲಿಗಳು ತುಂಬಿಕೊಂಡವು


ಬಳಿಕ ಮಾತನಾಡಿದ ಶ್ರೀನಿವಾಸಪ್ರಸಾದ್ ಸಮಾನತೆ ಪ್ರತಿಪಾದಿಸಿದವರಲ್ಲಿ ಅಮೆರಿಕಾದ ಅಬ್ರಹಾಂ ಲಿಂಕನ್  ಅವರನ್ನು ಹೊರತುಪಡಿಸಿದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ ಎಂದರು. ನಮ್ಮ ಸಂವಿಧಾನ  ವಿಶ್ವದಲ್ಲೇ ಸರ್ವೋತ್ಕೃಷ್ಠ ಗ್ರಂಥವಾಗಿದೆ ಎಂದ ಅವರು ಚಹಾ ಮಾರುತ್ತಿದ್ದ ನಾನು ಪ್ರಧಾನಿ ಆಗಲು ಸಂವಿಧಾನ ಕಾರಣ ಎಂದು ಸ್ವತಃ ನರೇಂದ್ರ ಮೋದಿ  ಹೇಳಿದ್ದಾರೆ,  ಅವರು ಈ ದೇಶದ ಪ್ರಧಾನಿ ಆದಾಗ  ಸಂಸತ್ ನ ಹೆಬ್ಬಾಗಲಿಗೆ ನಮಸ್ಕರಿಸಿ ಪ್ರವೇಶ ಮಾಡಿದ್ದಾರೆ, ನಮ್ಮದು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು ಇದರ ಕೇಂದ್ರ ಬಿಂದು ನಮ್ಮ ಪಾರ್ಲಿಮೆಂಟ್ ಎಂದು ಬಣ್ಣಿಸಿದರು


(ವರದಿ: ಎಸ್.ಎಂ.ನಂದೀಶ್)
 

Published by:Seema R
First published: