ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ಸೂಚನೆ

ರೈತರ ಜೀವನೋಪಾಯದ ಅನುಕೂಲಕ್ಕಾಗಿ ನೀಡುವ ಯೋಜನೆಗಳಿಗೆ ಫಲಾನುಭವಿಗಳು ಸಾಲ ಸೌಲಭ್ಯ ಪಡೆಯಲು ಬ್ಯಾಂಕ್‍ಗಳಿಗೆ ತೆರಳಿದಾಗ ಬೇರೆ-ಬೇರೆ ಕಾರಣ ನೀಡಿ ಬ್ಯಾಂಕ್‍ಗಳು ಸಾಲ ನಿರಾಕರಿಸುವುದು ಸರಿಯಲ್ಲ. ಈ ಪ್ರಕ್ರಿಯೆಗಳು ಬದಲಾಗಬೇಕು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಜ್ವಲ್​ ರೇವಣ್ಣ (ಸಂಗ್ರಹ ಚಿತ್ರ)

ಪ್ರಜ್ವಲ್​ ರೇವಣ್ಣ (ಸಂಗ್ರಹ ಚಿತ್ರ)

  • Share this:
ಹಾಸನ; ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಇಂದು ನಡೆದ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಜ್ವಲ್, ಹಾಸನ, ಹೊಳೆನರಸೀಪುರ, ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಹಾಲಿ ಇರುವ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜಿಸಿರುವ ಕಾಮಗಾರಿಗಳನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ತಿಳಿಸಿದರು.

ರೈಲ್ವೇ ಮಾರ್ಗಗಳ ಸರ್ವೇ ಕಾರ್ಯ ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ಅದೇ ರೀತಿ ಹಾಸನ-ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಹೆಚ್.ಡಿ. ರೇವಣ್ಣ, ಲಿಂಗೇಶ್, ಎ.ಟಿ. ರಾಮಸ್ವಾಮಿ, ಹೆಚ್.ಕೆ. ಕುಮಾರಸ್ವಾಮಿ ಮತ್ತು ಸಿ.ಎನ್. ಬಾಲಕೃಷ್ಣ ಅವರು ಮಾತನಾಡಿ, ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಹಲವಾರು ಅಗತ್ಯ ಅಭಿವೃದ್ದಿ ಕಾಮಗಾರಿಗಳ ವಿಷಯಗಳನ್ನು ಸಂಸದರ ಗಮನಕ್ಕೆ ತಂದರು. ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ, ತಾವು ಲೋಕೋಪಯೋಗಿ ಸಚಿವರಾಗಿದ್ದಾಗ ಈ ರಸ್ತೆ ಕಾಮಗಾರಿ ಪ್ರಾರಂಭಕ್ಕೆ ನಿರಂತರ ಶ್ರಮಿಸಿದ್ದು, ಸಂಬಂಧಪಟ್ಟ ಪ್ರಾಧಿಕಾರದ ಇಂಜಿನಿಯರ್​ಗಳು ಈಗಾಗಲೇ ಕಾಳಜಿವಹಿಸಬೇಕು ಎಂದರು. ಶಾಸಕರಾದ ಹೆಚ್. ಕೆ. ಕುಮಾರಸ್ವಾಮಿ, ಶಿವಲಿಂಗೇಗೌಡ, ಬಾಲಕೃಷ್ಣ ಮತ್ತು ಲಿಂಗೇಶ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಎನ್.ಹೆಚ್.ಐ. ರಸ್ತೆಗಳಲ್ಲಿ ಬೀದಿ ದೀಪಗಳು ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಸೌಲಭ್ಯಗಳಿಲ್ಲದ ಕಾರಣ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಗಮನಹರಿಸಿ ಅಪಘಾತ ತಡೆಗೆ ಕ್ರಮ ವಹಿಸಬೇಕೆಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ ಸಭೆಗೆ ಹಾಜರಾಗದೇ ಇರುವ ಬಗ್ಗೆ ಹಾಗೂ ಈ ಹಿಂದಿನ ಹಲವು ಇತರ ಸಭೆಗಳಿಗೂ ಪಾಲ್ಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೋಕಸಭಾ ಸದಸ್ಯರು ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಶಾಸಕರಾದ ಎ.ಟಿ. ರಾಮಸ್ವಾಮಿ, ಶಿವಲಿಂಗೇಗೌಡ, ಹೆಚ್.ಕೆ. ಕುಮಾರಸ್ವಾಮಿ ಅವರು  ಮಾತನಾಡಿ ಬಿ.ಎಸ್.ಎನ್.ಎಲ್. ಸಂಸ್ಥೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ವಿಸ್ತರಣೆ ಕಷ್ಟವಾಗುತ್ತಿದೆ ಎಂದು ಸಭೆಯ ಗಮನ ಸೆಳೆದರಲ್ಲದೆ, ಪಡಿತರ ವಿತರಣಾ ವ್ಯವಸ್ಥೆಗೂ ಸಮಸ್ಯೆಯಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ ಅವರು ತಾವು ಕೂಡ ದೂರಸಂಪರ್ಕ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದು, ಇದೇ ರೀತಿ ಹಲವು ಸಂಸದರೂ ಒತ್ತಾಯಿಸಿದ್ದಾರೆ. ಬಿ.ಎಸ್.ಎನ್.ಎಲ್. ಅಧಿಕಾರಿ ಸಿಬ್ಬಂದಿಗೆ ವಿ.ಆರ್.ಎಸ್. ನೀಡಲಾಗುತ್ತಿದೆ. ಇದು ನಿಲ್ಲಬೇಕು ಸರ್ಕಾರ ಸ್ವಾಮ್ಯದ ಸಂಸ್ಥೆ ಉಳಿಯಬೇಕು ಎಂದು ಪ್ರಜ್ವಲ್ ರೇವಣ್ಣ ಆಗ್ರಹಿಸಿದರು.

ರೈತರ ಜೀವನೋಪಾಯದ ಅನುಕೂಲಕ್ಕಾಗಿ ನೀಡುವ ಯೋಜನೆಗಳಿಗೆ ಫಲಾನುಭವಿಗಳು ಸಾಲ ಸೌಲಭ್ಯ ಪಡೆಯಲು ಬ್ಯಾಂಕ್‍ಗಳಿಗೆ ತೆರಳಿದಾಗ ಬೇರೆ-ಬೇರೆ ಕಾರಣ ನೀಡಿ ಬ್ಯಾಂಕ್‍ಗಳು ಸಾಲ ನಿರಾಕರಿಸುವುದು ಸರಿಯಲ್ಲ. ಈ ಪ್ರಕ್ರಿಯೆಗಳು ಬದಲಾಗಬೇಕು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಿರಿಯಾಪಟ್ಟಣ-ಹಾಸನ ಟೋಲ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಕುರಿತು ದೂರುಗಳಿದ್ದು, ಆ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದರಲ್ಲದೆ, ತಪ್ಪಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದು ಸಂಸದರು ಎಚ್ಚರಿಕೆ ನೀಡಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಹಾಗೂ ಜನಸಾಮಾನ್ಯರಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸಕಾಲದಲ್ಲಿ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನ ಮಾಡಬೇಕು. ನಿರ್ಲಕ್ಷ್ಯ ಅಥವಾ ವಿಳಂಬವನ್ನು ಸಯಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಬಾಲಕೃಷ್ಣ ಹಾಗೂ ಶಿವಲಿಂಗೇಗೌಡ ಅವರು ಮಾತನಾಡಿ, ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿರುವ ಅಧಿಕಾರಿಗಳಿಗೆ ಜನ ಸಾಮಾನ್ಯರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಬಾರದಿರುವುದರಿಂದ ಅಂತಹವರನ್ನು ಜಿಲ್ಲಾ ಮಟ್ಟಕ್ಕೆ ವರ್ಗಾವಣೆ ಮಾಡಿ, ಹಳ್ಳಿಗಳಿಗೆ ಸ್ಥಳೀಯ ಭಾಷಾ ಜ್ಞಾನವಿರುವ ಸಿಬ್ಬಂದಿ ನೇಮಿಸುವಂತೆ ನಿರ್ದೇಶನ ನೀಡಲು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

ಇದನ್ನು ಓದಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ ; ಉತ್ತರ ಕನ್ನಡದ ಆರತಿ, ರಾಯಚೂರಿನ ವೆಂಕಟೇಶ್ ಆಯ್ಕೆ

ಮಹತ್ವಾಕಾಂಕ್ಷಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯಬೇಕು. ಕೂಲಿ ಮಾಡುವವರಿಗೆ ಕಾಲಮಿತಿಯೊಳಗೆ ಸಂಬಳ ಪಾವತಿ ಮಾಡಬೇಕು. ಅಲ್ಲದೆ ಯೋಜನೆಯನ್ನು ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಸಂಸದರು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ, ರೈತರ ಆರ್ಥಿಕ ಚಟುವಟಿಕೆಗಳನ್ನು ಲೆಕ್ಕಹಾಕಿ ಯೋಜನೆಗಳ ಸಾಲ ಸೌಲಭ್ಯ ಪಡೆಯಲು ಅರ್ಹರಾದ ಫಲಾನುಭವಿಗಳಿಗೆ ವಿನಾಕಾರಣ ಅಲೆದಾಡಿಸುವ ಬ್ಯಾಂಕ್‍ಗಳ ವಿರುದ್ಧ ಕ್ರಮ ಗೈಗೊಳ್ಳಲಾಗುವುದು ಎಂದರಲ್ಲದೆ, ಇಲಾಖೆ ಅಧಿಕಾರಿಗಳು ಬ್ಯಾಂಕ್ ಮತ್ತು ಫಲಾನುಭವಿಗಳ ನಡುವೆ ಸಮನ್ವಯ ಸಾಧಿಸಿ ಯೋಜನೆಗಳನ್ನು ಅನುಷ್ಠಾನ ಮಾಡಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್, ವಿವಿಧ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಉಪಕಾರ್ಯದರ್ಶಿಗಳಾದ ಚಂದ್ರಶೇಖರ್, ಮಹೇಶ್, ಯೋಜನಾಧಿಕಾರಿ ನಾಗರಾಜ್ ಜಿಲ್ಲಾಮಟ್ಟದ ಇಲಾಖಾ ಅಧಿಕಾರಿಗಳು ಹಾಜರಿದ್ದರು.
First published: